ಬೆಂಗಳೂರು: ‘ಚಿತ್ರರಂಗ, ಕಿರುತೆರೆಯಲ್ಲಿ ನಟ ಮಡೆನೂರು ಮನುಗೆ ಯಾರೂ ಸಹಕಾರ ನೀಡಬಾರದು ಎಂಬ ಒಕ್ಕೊರಲ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ’ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಂ.ನರಸಿಂಹಲು ಹೇಳಿದರು.
ನಟ ಮಡೆನೂರು ಮನು ಅವರದ್ದು ಎನ್ನಲಾದ ಆಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಅದರಲ್ಲಿ ನಟರಾದ ಶಿವರಾಜ್‌ಕುಮಾರ್, ದರ್ಶನ್ ಹಾಗೂ ಧ್ರುವ ಸರ್ಜಾ ಅವರ ಬಗ್ಗೆ ಕೀಳು ಮಾತುಗಳಿವೆ. ಈ ಕುರಿತು ಮಂಗಳವಾರ (ಮೇ 27) ಅಂಗಸಂಸ್ಥೆಗಳ ಅಧ್ಯಕ್ಷರ ಜೊತೆಗೆ ನರಸಿಂಹಲು ಸಭೆ ನಡೆಸಿದರು.
‘ಮಂಡಳಿಯು ಬೆಂಗಳೂರು ಪೊಲೀಸ್ ಆಯುಕ್ತರಿಗೆ ಈ ಬಗ್ಗೆ ದೂರು ನೀಡಲಿದೆ. ಮಡೆನೂರು ಮನು ಯಾವುದೇ ರೀತಿಯ ಚಟುವಟಿಕೆಗಳಲ್ಲಿ ಭಾಗವಹಿಸುವಂತಿಲ್ಲ. ನಾಯಕ ನಟರ ಬಗ್ಗೆ ಮಾತನಾಡಿರುವುದು ಸರಿಯಲ್ಲ. ಆಡಿಯೊದಲ್ಲಿರುವ ಧ್ವನಿ ಅವರದ್ದೇ ಎನ್ನುವುದನ್ನು ನಾವು ಪರಿಶೀಲಿಸಿಲ್ಲ. ಈ ಕುರಿತು ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಆಡಿಯೊ ಕೇಳಿಕೊಂಡು ಈ ನಿರ್ಧಾರ ಮಾಡಿದ್ದೇವೆ. ನಾವು ಕಾನೂನು ಪ್ರಕಾರವಾಗಿ ಮುಂದಿನ ಹೆಜ್ಜೆ ಇಡಲಿದ್ದೇವೆ. ಕಲಾವಿದರ ಸಂಘವನ್ನೂ ಈ ಸಭೆಗೆ ಆಹ್ವಾನಿಸಿದ್ದೆವು. ಮಂಡಳಿ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧ ಎಂದು ಅವರು ಹೇಳಿದ್ದಾರೆ’ ಎಂದು ನರಸಿಂಹಲು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.