ADVERTISEMENT

‘ಮದಗಜ’ ಡಬ್ಬಿಂಗ್‌ನಲ್ಲಿ ಆಶಿಕಾ ತಲ್ಲೀನ

​ಪ್ರಜಾವಾಣಿ ವಾರ್ತೆ
Published 8 ಜುಲೈ 2021, 13:31 IST
Last Updated 8 ಜುಲೈ 2021, 13:31 IST
ಆಶಿಕಾ ರಂಗನಾಥ್‌
ಆಶಿಕಾ ರಂಗನಾಥ್‌   

ಎಸ್‌.ಮಹೇಶ್‌ ಕುಮಾರ್‌ ಆ್ಯಕ್ಷನ್‌ ಕಟ್‌ ಹೇಳಿರುವ, ನಟ ಶ್ರೀಮುರುಳಿ ನಾಯಕರಾಗಿ ನಟಿಸಿರುವ ‘ಮದಗಜ’ ಚಿತ್ರದ ಚಿತ್ರೀಕರಣ ಕೊನೆಯ ಹಂತ ತಲುಪಿದ್ದು, ಚಿತ್ರದ ಡಬ್ಬಿಂಗ್‌ ಗುರುವಾರದಿಂದ ಆರಂಭವಾಗಿದೆ.

ಚಿತ್ರದ ನಾಯಕಿ ನಟಿ ಆಶಿಕಾ ರಂಗನಾಥ್‌ ಅವರು ಡಬ್ಬಿಂಗ್‌ನಲ್ಲಿ ತಲ್ಲೀನರಾಗಿದ್ದು, ಈ ಕುರಿತು ಚಿತ್ರತಂಡವು ಇನ್‌ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿದೆ. ಚಿತ್ರದ ಚಿತ್ರೀಕರಣದ ಅಂತಿಮ ಹಂತದಲ್ಲಿ ನಾಯಕನನ್ನು ಪರಿಚಯಿಸುವ ಹಾಡಿನ ಚಿತ್ರೀಕರಣಕ್ಕೆ ಅದ್ಧೂರಿಯಾಗಿ ಮೂರು ಸೆಟ್‌ಗಳ ನಿರ್ಮಾಣವಾಗುತ್ತಿದ್ದು, ಜುಲೈ 15ರಿಂದ ಕೊನೆಯ ಹಂತದ ಚಿತ್ರೀಕರಣ ಆರಂಭವಾಗಲಿದೆ ಎಂದು ನಿರ್ದೇಶಕ ಮಹೇಶ್‌ ಕುಮಾರ್‌ ಇತ್ತೀಚೆಗಷ್ಟೇ ತಿಳಿಸಿದ್ದರು.

ಚಿತ್ರದಲ್ಲಿ ಆಶಿಕಾ ರಂಗನಾಥ್‌, ಹಳ್ಳಿ ಹುಡುಗಿಯ ಪಾತ್ರ ನಿರ್ವಹಿಸಿದ್ದಾರೆ. ‘ಕೃಷಿ ಶಿಕ್ಷಣ ಪದವಿ ಪಡೆದು ವ್ಯವಸಾಯ ಮಾಡುವ ಹುಡುಗಿಯ ಪಾತ್ರ ನನ್ನದು. ಅವಳೇ ಇಷ್ಟಪಟ್ಟು ಕೃಷಿ ಶಿಕ್ಷಣ ಪಡೆದು ಈ ಕ್ಷೇತ್ರಕ್ಕೆ ಇಳಿದಿರುತ್ತಾಳೆ. ಆಧುನಿಕ ಯೋಚನೆಗಳಿದ್ದರೂ, ಹಳ್ಳಿಯಲ್ಲೇ ಜೀವನ ಮಾಡಬೇಕು ಎನ್ನುವ ಗುಣದವಳು. ಹಳ್ಳಿ ಸೊಗಡು, ಮಾತೂ ಕೂಡಾ ಹಳ್ಳಿಯದ್ದೇ. ಇದು ವಿಭಿನ್ನ ಅನುಭವವಾಗಿದೆ’ ಎಂದು ಇತ್ತೀಚೆಗೆ ‘ಪ್ರಜಾವಾಣಿ’ ಜೊತೆಗಿನ ಸಂದರ್ಶನದಲ್ಲಿ ಅವರು ಹೇಳಿದ್ದರು.

ADVERTISEMENT

ತೆಲುಗಿನ ಖ್ಯಾತ ನಟ ಜಗಪತಿ ಬಾಬು ಖಳನಾಯಕನಾಗಿ, ಹಾಸ್ಯ ನಟರಾದ ರಂಗಾಯಣ ರಘು, ಚಿಕ್ಕಣ್ಣ, ಶಿವರಾಜ್‌ ಕೆ.ಆರ್‌.ಪೇಟೆ ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಛಾಯಾಗ್ರಹಣ ನವೀನ್‌ ಕುಮಾರ್‌, ಸಂಗೀತ ನಿರ್ದೇಶನ ರವಿ ಬಸ್ರೂರು. ಕಲಾ ನಿರ್ದೇಶನ ಮೋಹನ್‌ ಬಿ.ಕೆರೆ ಅವರದು. ಉಮಾಪತಿ ಶ್ರೀನಿವಾಸಗೌಡ ಚಿತ್ರದ ನಿರ್ಮಾಪಕರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.