ADVERTISEMENT

ಮಾಧುರಿಯ ಮಧುರ ನೆನಪು

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2020, 19:30 IST
Last Updated 2 ಏಪ್ರಿಲ್ 2020, 19:30 IST
ಮಾಧುರಿ ದೀಕ್ಷಿತ್‌
ಮಾಧುರಿ ದೀಕ್ಷಿತ್‌   

ಲಾಕ್‌ಡೌನ್ ಸಂದರ್ಭದಲ್ಲಿ ಮಾಧುರಿ ದೀಕ್ಷಿತ್ ಹಸನ್ಮುಖ ಮೊರದಗಲ ಆಗುವಂಥ ಸುದ್ದಿಯೊಂದು ತೇಲಿಬಂತು; ‘ನಾಸ್ಟಾಲ್ಜಿಕ್’ ಕಾರಣಕ್ಕಾಗಿ. ‘ಹಮ್ ಆಪ್ಕೆ ಹೈ ಕೌನ್’ ಸಿನಿಮಾ ತೆರೆಕಂಡು 26 ವರ್ಷಗಳಾದ ಮೇಲೆ ಮುಂಬೈನ ಪ್ರತಿಷ್ಠಿತ ‘ಲಿಬರ್ಟಿ ಸಿನಿಮಾ’ದಲ್ಲಿ ಪ್ರದರ್ಶನವೊಂದನ್ನು ಕಂಡಿತು. ಸೂರಜ್‌ ಬರ್ಜಾತ್ಯಾ ಆ ಸಿನಿಮಾವನ್ನು ಹೇಗೆಲ್ಲ ವಿನ್ಯಾಸ ಮಾಡಿದ್ದರು ಎನ್ನುವುದರ ಕುರಿತು ಮೆಲುಕು ಹಾಕುವಂಥ ಸಂಗತಿಗಳು ಆ ಸಂದರ್ಭದಲ್ಲಿ ಅನಾವರಣಗೊಂಡವು.

ಮೊದಲಿಗೆ ಸೂರಜ್ ಸ್ಕ್ರಿಪ್ಟ್‌ ತಯಾರು ಮಾಡಿದರು. ಅದನ್ನು ತಾವು ಆಯ್ಕೆ ಮಾಡಿದ ಪ್ರತಿ ಪಾತ್ರಧಾರಿಗೂ ಸಂಕ್ಷಿಪ್ತವಾಗಿ ವಿವರಿಸಿದರು. ಅವರವರ ಪಾತ್ರದ ರೂಹನ್ನು ತಲೆಯೊಳಗೆ ಹಾಕಿದರು. ವಸ್ತ್ರವಿನ್ಯಾಸ ಹೀಗೇ ಇರುತ್ತದೆ ಎಂದೂ ತಿಳಿಸಿದರು.

ಆ ಕಾಲಘಟ್ಟದಲ್ಲಿ ಸಲ್ಮಾನ್‌ ಖಾನ್‌ಗಿಂತ ಮಾಧುರಿ ದೀಕ್ಷಿತ್ ದೊಡ್ಡ ಸ್ಟಾರ್. ಸಂಭಾವನೆಯಲ್ಲಿ ಅವರಿಗೇ ಹೆಚ್ಚು ಸಂದಿತೆನ್ನುವುದು ಉದ್ಯಮದ ಪಂಡಿತರ ಅಂಬೋಣ. ಈ ಬಗೆಗೆ ಸೂರಜ್ ಯಾವುದೇ ಸ್ಪಷ್ಟನೆ ನೀಡಲಿಲ್ಲವಾದರೂ ಸಿನಿಮಾ ತೆರೆಕಾಣುವ ಸಂದರ್ಭದಲ್ಲಿ ₹ 7 ಕೋಟಿಯಷ್ಟು ಮುಂಗಡ ತೆರಿಗೆ ಪಾವತಿಸಿದ್ದನ್ನಂತೂ ಹೇಳಿಕೊಂಡರು!

ADVERTISEMENT

ಮಾಧುರಿ ಎದುರು ಅವರ ಪಾತ್ರವನ್ನು ಬಣ್ಣಿಸುವಾಗ ಸೂರಜ್ ಅವರಲ್ಲಿ ಹಲವು ಪ್ರಶ್ನೆಗಳು ಇದ್ದವಂತೆ. ಜೆ.ಬೊರಾಡೆ ಅವರಿಂದ ನೃತ್ಯ ಸಂಯೋಜನೆ ಮಾಡಿಸಬೇಕು ಎನ್ನುವುದು ಸೂರಜ್ ನಿರ್ಧಾರವಾಗಿತ್ತು. ಮಾಧುರಿ ಸದಾಕಾಲ ಸರೋಜ್ ಖಾನ್ ಅವರನ್ನೇ ನೆಚ್ಚಿನ ನೃತ್ಯ ನಿರ್ದೇಶಕಿ ಎಂದು ಹೇಳುತ್ತಾ ಬಂದಿದ್ದರಾದ್ದರಿಂದ ಈ ಆಯ್ಕೆಯನ್ನು ಒಪ್ಪುವರೋ ಇಲ್ಲವೋ ಎಂಬ ಪ್ರಶ್ನೆಯೂ ಅವರಲ್ಲಿ ಇತ್ತು. ಒಂದು ವರ್ಷ ಬೊರಾಡೆ ಜತೆ ಕುಳಿತು ಹಾಡುಗಳಿಗೆ ನೃತ್ಯ ಸಂಯೋಜನೆ ಹೇಗಿರಬೇಕು ಎಂದು ಚರ್ಚಿಸಿದ ಸಂಗತಿಯನ್ನು ತಾರಾನಟಿಯ ಮುಂದೆ ಅವರು ಅರುಹಿದ್ದೇ, ಮಾಧುರಿ ಕರಗಿ ನೀರಾದರಂತೆ. ಎರಡನೇ ಮಾತೇ ಇಲ್ಲದೇ, ‘ನೃತ್ಯ ಸಂಯೋಜನೆ ಅವರೇ ಮಾಡಲಿ’ ಎಂದು ಒಪ್ಪಿಕೊಂಡಾಗ ನಿರ್ದೇಶಕರಿಗೆ ಅಚ್ಚರಿ.

ಹಿರಿಯ ನಟ ರಾಜಾ ಮುರಾದ್ ಚೆಂಬೂರ್‌ನ ಬಸಂತ್ ಚಿತ್ರಮಂದಿರದಲ್ಲಿ ‘ಹಮ್‌ ಆಪ್ಕೆ ಹೈ ಕೌನ್’ ನೋಡಿದ್ದರು. ಜನ ಶಿಳ್ಳೆ ಹೊಡೆದು, ಖುಷಿಯಿಂದ ದೃಶ್ಯಗಳನ್ನು ಕಣ್ತುಂಬಿಕೊಂಡಿದ್ದನ್ನು ನೋಡಿ ಮನೆಗೆ ಬಂದು ಕನ್ನಡಿ ಎದುರು ನಿಂತರು. ‘ಒಂದು ವೇಳೆ ಈ ರೀತಿಯ ಸಿನಿಮಾಗಳು ಯಶಸ್ವಿಯಾಗಲಾರಂಭಿಸಿದರೆ ಖಳನ ಪಾತ್ರ ಮಾಡುತ್ತಿರುವ ನನ್ನಂಥವರ ಗತಿ ಏನು’ ಎಂದು ಕನ್ನಡಿಯೊಳಗಿನ ಅವರ ಬಿಂಬ ಪ್ರಶ್ನೆ ಹಾಕಿತ್ತಂತೆ!

ಲಂಡನ್‌ನ ಬೆಲ್ಲೆ–ವ್ಯೂ ಸಿನಿಮಾ ಮರು ನವೀಕರಣಕ್ಕೆ ಅಣಿಯಾಗಿದ್ದ ಸಂದರ್ಭ. ಮೂರು ವಾರಕ್ಕೆ ಮಾತ್ರ ಮುಂಗಡ ಬುಕಿಂಗ್‌ಗೆ ಅವಕಾಶವಿತ್ತು. ‘ಹಮ್‌ ಆಪ್ಕೆ ಹೈ ಕೌನ್’ ಸಿನಿಮಾಗೆ ಸಿಕ್ಕ ಜನಬೆಂಬಲ ಕಂಡು ಆ ಚಿತ್ರಮಂದಿರದ ಮಾಲೀಕರು ಮರು ನವೀಕರಣದ ಕೆಲಸವನ್ನು ಒಂದು ವರ್ಷ ಮುಂದೂಡಿದರು. ಸಿನಿಮಾ ಭಾರತವಷ್ಟೇ ಅಲ್ಲದೆ ಕೆಲವು ವಿದೇಶಗಳಲ್ಲೂ 50 ವಾರ (ಪದೇ ಪದೇ ಬಿಡುಗಡೆಯಾಗಿ) ಪ್ರದರ್ಶಿತವಾದ ಉದಾಹರಣೆಗಳಿವೆ.

ಸಿನಿಮಾ ತೆರೆಕಂಡ ಎಷ್ಟೋ ತಿಂಗಳು ನಿತ್ಯವೂ ಮಾಧುರಿ ದೀಕ್ಷಿತ್ ಮನೆಗೆ ಮೂಟೆಗಟ್ಟಲೆ ಪತ್ರಗಳು ಬರುತ್ತಿದ್ದವಂತೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.