ಭಿನ್ನವಾದ ಪಾತ್ರಗಳ ಮೂಲಕ ಇತ್ತೀಚೆಗೆ ಸದ್ದು ಮಾಡುತ್ತಿರುವ ನಟ ಮಿತ್ರ, ವಿಜಯ ರಾಘವೇಂದ್ರ ನಟನೆಯ ‘ಮಹಾನ್’ ಚಿತ್ರದಲ್ಲೂ ಬಣ್ಣಹಚ್ಚಿದ್ದಾರೆ.
ಪಿ.ಸಿ.ಶೇಖರ್ ನಿರ್ದೇಶನದ, ಆಕಾಶ್ ಪಿಕ್ಚರ್ಸ್ ಲಾಂಛನದಲ್ಲಿ ಪ್ರಕಾಶ್ ಬುದ್ದೂರು ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ವಿಜಯ ರಾಘವೇಂದ್ರ ನಾಯಕನ ಪಾತ್ರದಲ್ಲಿದ್ದಾರೆ.
‘ಪಿ.ಸಿ.ಶೇಖರ್ ಅವರ ಜೊತೆ ‘ರಾಗ’ ಸಿನಿಮಾ ಬಳಿಕ ನಾನು ಮಾಡುತ್ತಿರುವ ಎರಡನೇ ಪ್ರಾಜೆಕ್ಟ್. ‘ರಾಗ’ ಚಿತ್ರದ ನನ್ನ ಪಾತ್ರಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿತ್ತು. ‘ಮಹಾನ್’ ಚಿತ್ರದಲ್ಲೂ ಪ್ರಮುಖಪಾತ್ರದಲ್ಲಿದ್ದೇನೆ. ಸಾಮಾಜಿಕ ಕಳಕಳಿಯುಳ್ಳ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ವಿಜಯ ರಾಘವೇಂದ್ರ ಅವರಿಗೆ ಹೇಳಿ ಮಾಡಿಸಿದ ಪಾತ್ರವಿದೆ. ನನ್ನ ಪಾತ್ರ ಕೂಡ ನಾಯಕನ ಪಾತ್ರದ ಜೊತೆಗೆ ಸಾಗುತ್ತದೆ. ನಮ್ಮಿಬ್ಬರ ಕಾಂಬಿನೇಶನ್ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ’ ಎನ್ನುತ್ತಾರೆ ಮಿತ್ರ.
‘ರಾಗ’ ಬಳಿಕ ನನ್ನ ನಿರ್ದೇಶನದ ಚಿತ್ರಗಳಲ್ಲಿ ಮಿತ್ರ ಅವರು ನಟಿಸಿಲ್ಲ. ಏಕೆಂದರೆ, ಮಿತ್ರ ಸಣ್ಣ ಪುಟ್ಟ ಪಾತ್ರದಲ್ಲಿ ನನ್ನ ನಿರ್ದೇಶನದ ಚಿತ್ರದಲ್ಲಿ ಅಭಿನಯಿಸುವುದು ನನಗೆ ಇಷ್ಟವಿಲ್ಲ. ‘ರಾಗ’ ಚಿತ್ರದ ಅಭಿನಯಕ್ಕಾಗಿ ಅವರಿಗೆ ರಾಜ್ಯ ಪ್ರಶಸ್ತಿ ಬಂದಿತ್ತು. ‘ಮಹಾನ್’ ಚಿತ್ರದಲ್ಲೂ ಎಲ್ಲರ ನೆನಪಿನಲ್ಲುಳಿಯುವಂತ ಪಾತ್ರ ಅವರಿಗಿದೆ. ಚಿತ್ರಕಥೆ ಬರೆಯುವಾಗಲೇ ಈ ಪಾತ್ರಕ್ಕೆ ಮಿತ್ರ ಅವರೇ ಸೂಕ್ತ ಎನಿಸಿತ್ತು. ಕುರುಕ್ಷೇತ್ರದಲ್ಲಿ ಅರ್ಜುನನ ಜೊತೆಗೆ ಶ್ರೀಕೃಷ್ಣ ಸದಾ ಇರುತ್ತಾನೆ. ಆ ಸ್ಫೂರ್ತಿಯಿಂದಲೇ ಈ ಎರಡು ಪಾತ್ರಗಳನ್ನು ಹೆಣೆಯಲಾಗಿದೆ’ ಎಂದಿದ್ದಾರೆ ಪಿ.ಸಿ.ಶೇಖರ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.