ADVERTISEMENT

‘ಮಹಾನಟಿ’ಗೆ ಶಾಂಘೈ ಸಿನಿಮೋತ್ಸವ ಗೌರವ

​ಪ್ರಜಾವಾಣಿ ವಾರ್ತೆ
Published 9 ಮೇ 2019, 4:12 IST
Last Updated 9 ಮೇ 2019, 4:12 IST
   

ತೆಲುಗು ಮತ್ತು ತಮಿಳಿನಖ್ಯಾತ ನಟಿ ಸಾವಿತ್ರಿ ಅವರ ಜೀವನ ಚರಿತ್ರೆ ಆಧರಿಸಿ ತೆಗೆದ ‘ಮಹಾನಟಿ’ ಸಿನಿಮಾಕ್ಕೀಗ ಶಾಂಘೈ ಅಂತರಾಷ್ಟ್ರೀಯ ಸಿನಿಮೋತ್ಸವದಲ್ಲಿ ಪ್ರದರ್ಶನದ ಭಾಗ್ಯ ಲಭಿಸಿದೆ.

ನಟಿ, ಗಾಯಕಿ, ನಿರ್ಮಾಪಕಿಯೂ ಆಗಿದ್ದ ಸಾವಿತ್ರಿ ತಮ್ಮ 45 ಹರೆಯದಲ್ಲೇ ಸಾವನ್ನಪ್ಪಿದವರು. ತಮಿಳಿನ ಖ್ಯಾತ ನಟ ಜೆಮಿನಿ ಗಣೇಶನ್ ಅವರ ಪತ್ನಿಯಾಗಿದ್ದರೂ ಸಾವಿತ್ರಿ ನೋವಿನಲ್ಲೇ ತಮ್ಮ ಬದುಕಿನ ಅಂತ್ಯ ಕಂಡರು. ಒಂದು ಕಾಲದಲ್ಲಿ ದಕ್ಷಿಣದ ಸಿನಿರಂಗದಲ್ಲಿ ಉತ್ತುಂಗದ ಸ್ಥಿತಿಯಲ್ಲಿದ್ದ ಸಾವಿತ್ರಿ ಅವರ ನಿಜ ಜೀವನದ ಅಂತಿಮ ದಿನಗಳು ಸುಖಕರವಾಗಿರಲಿಲ್ಲ. ರಾಣಿಯಂತೆ ಮೆರೆದು, ಕೊನೆಗೆ ಸಾಮಾನ್ಯರಿಗೂ ಕಡೆಯಾಗಿ ಸಾವನ್ನಪ್ಪಿದ್ದ ಸಾವಿತ್ರಿ ಅವರ ಬಯೋಪಿಕ್‌ಗೆ ನಟಿ ಕೀರ್ತಿ ಸುರೇಶ್ ಜೀವ ತುಂಬಿ ನಟಿಸಿದ್ದರು.

ಬಾಕ್ಯಾಫೀಸಿನಲ್ಲಿ ₹ 50 ಕೋಟಿಗೂ ಅಧಿಕ ಹಣ ಬಾಚಿದ ಈ ಸಿನಿಮಾ, ವಿಮರ್ಶಕರು ಮತ್ತು ಪ್ರೇಕ್ಷಕರಿಂದಲೂ ಮೆಚ್ಚುಗೆ ಪಡೆದಿತ್ತು. ಇದೀಗ ಈ ಸಿನಿಮಾ ಚೀನಾದ ಶಾಂಘೈ ಅಂತರಾಷ್ಟ್ರೀಯ ಸಿನಿಮೋತ್ಸವದಲ್ಲಿ ಪ್ರದರ್ಶನಕ್ಕೆ ಆಯ್ಕೆಯಾಗಿರುವುದು ಚಿತ್ರತಂಡಕ್ಕೆ ಹರ್ಷ ತಂದಿದೆ. ಈ ಬಗ್ಗೆ ‘ಸಾವಿತ್ರಿ’ ಸಿನಿಮಾದ ನಿರ್ದೇಶಕ ನಾಗ್ ಅಶ್ವಿನ್ ತಮ್ಮ ಟ್ವಿಟರ್ ಖಾತೆಯಲ್ಲಿ ‘ಸಾವಿತ್ರಿ ಅವರನ್ನು ಚೀನಾಕ್ಕೆ ಕರೆದೊಯ್ಯುತ್ತಿರುವುದು ಹೆಮ್ಮೆಯ ಸಂಗತಿ. ಅಲ್ಲಿನ ಜನರ ಹೃದಯವನ್ನು ಗೆಲ್ಲುವುದರಲ್ಲಿ ವಿಶ್ವಾಸವಿದೆ’ ಎಂದು ಬರೆದುಕೊಂಡಿದ್ದಾರೆ.

ADVERTISEMENT

ಮಹಾನಟಿಯಲ್ಲಿ ಕೀರ್ತಿ ಸುರೇಶ್ ಜೊತೆಗೆ ದುಲ್ಕರ್ ಸಲ್ಮಾನ್, ಸಮಂತಾ ಅಕ್ಕಿನೇನಿ, ವಿಜಯ್ ದೇವರಕೊಂಢ, ರಾಜೇಂದ್ರ ಪ್ರಸಾದ್ ಮತ್ತು ಶಾಲಿನಿ ಪಾಂಡೆ ಕೂಡ ನಟಿಸಿದ್ದರು. ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ತೆರೆಕಂಡಿದ್ದ ‘ಮಹಾನಟಿ’ಯಲ್ಲಿ ದುಲ್ಕರ್ ಜೆಮಿನಿ ಗಣೇಶನ್ ಪಾತ್ರದಲ್ಲಿ ನಟಿಸಿದ್ದರು. ಸಾವಿತ್ರಿ ಪಾತ್ರಕ್ಕಾಗಿ ಸಾಕಷ್ಟು ಹೋಮ್‌ವರ್ಕ್ ಮಾಡಿಕೊಂಡು ನಟಿಸಿದ್ದ ಕೀರ್ತಿ ಸುರೇಶ್ ಸಿನಿಮಾದ ಯಶಸ್ಸಿನ ನಂತರ ಥ್ರಿಲ್ ಅನುಭವಿಸಿದ್ದರು.

‘ಈ ಸಿನಿಮಾದ ಯಶಸ್ಸು ನನಗೆ ಥ್ರಿಲ್ ನೀಡಿದೆ. ಅಷ್ಟೇ ಅಲ್ಲ ನನ್ನ ಮುಂಬರುವ ಚಿತ್ರಗಳಲ್ಲಿ ಮತ್ತಷ್ಟು ಜವಾಬ್ದಾರಿಯುತವಾಗಿ ತೊಡಗಿಸಿಕೊಳ್ಳಲು ಪ್ರೇರಣೆ ನೀಡಿದೆ. ನಿಜ ಹೇಳಬೇಕೆಂದರೆ ಸ್ತ್ರೀಕೇಂದ್ರಿತ ಸಿನಿಮಾ ಬಾಕ್ಸಾಫೀಸಿನಲ್ಲಿ ಚೆನ್ನಾಗಿ ಹಣ ಗಳಿಸಿದ್ದು ನನ್ನಲ್ಲಿ ನಿಜಕ್ಕೂ ಹೆಮ್ಮೆ ಮೂಡಿಸಿದೆ’ ಎಂದು ಪ್ರತಿಕ್ರಿಯಿಸಿದ್ದರು.

‘ಮಹಾನಟಿ’ ಸಿನಿಮಾ ಬಿಡುಗಡೆಯಾದ ವಾರದ ನಂತರ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ದು ಅವರು ‘ಮಹಾನಟಿ’ ಸಿನಿಮಾ ತಂಡವನ್ನು ಕರೆಸಿಕೊಂಡು ಸನ್ಮಾನ ಕೂಡಾ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.