ADVERTISEMENT

ಮಹಿರ ಕಥೆಯ ಒಂದು ಎಳೆ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2018, 19:30 IST
Last Updated 11 ನವೆಂಬರ್ 2018, 19:30 IST
ಮಹಿರ ಚಿತ್ರದ ದೃಶ್ಯ
ಮಹಿರ ಚಿತ್ರದ ದೃಶ್ಯ   

ಮಹೇಶ್ ಗೌಡ ನಿರ್ದೇಶನದ ‘ಮಹಿರ’ ಚಿತ್ರದ ಟೀಸರ್‌ ಒಂದು ಕಡೆ ಸಾಕಷ್ಟು ಸದ್ದು ಮಾಡುತ್ತಿದ್ದರೆ, ಚಿತ್ರತಂಡ ಈ ಸಿನಿಮಾದ ಕಥೆಯ ಒಂದು ಎಳೆಯನ್ನು ಬಿಟ್ಟುಕೊಟ್ಟಿದೆ. ಇದು ತಾಯಿ ಮತ್ತು ಮಗಳ ಸುತ್ತ ನಡೆಯುವ ಕಥೆ. ಆದರೆ ಇದರಲ್ಲಿ ಭಾವುಕ ಅಂಶಗಳಿಗಿಂತಲೂ ಹೆಚ್ಚಾಗಿ ಇರುವುದು ಥ್ರಿಲ್ಲರ್‌ ಅಂಶಗಳು.

ತಾಯಿ ತನ್ನನ್ನು ಮತ್ತು ತನ್ನ ಮಗಳನ್ನು ಕೊಲೆಗಾರರ ಗುಂಪಿನಿಂದ ಪಾರು ಮಾಡಲು ಹೋರಾಟ ನಡೆಸುತ್ತಿರುತ್ತಾಳೆ. ಕೊಲೆಗಾರರ ಗುರಿ ಮಗಳು. ಆದರೆ, ತಾನು ಕೊಲೆಗಾರರಿಗೆ ಗುರಿ ಆಗಿದ್ದು ಏಕೆ ಎಂಬುದು ಮಗಳಿಗೆ ಗೊತ್ತಿರುವುದಿಲ್ಲ. ಆ ಕಾರಣವನ್ನು ತಾಯಿ, ಮಗಳಿಗೆ ತಿಳಿಸಿರುವುದಿಲ್ಲ.

ಈ ಪ್ರಕರಣದ ತನಿಖೆಗೆ ಒಬ್ಬ ಚಾಣಾಕ್ಷ ಅಧಿಕಾರಿಯನ್ನು ನೇಮಕ ಮಾಡಲಾಗುತ್ತದೆ. ಈ ಅಧಿಕಾರಿ ನೋಡಲು ಬಲಿಷ್ಠ ಅಲ್ಲ. ಆದರೆ ಅವನ ಬುದ್ಧಿ ಚುರುಕು. ಬುದ್ಧಿಶಕ್ತಿಯಿಂದಲೇ ಪ್ರಕರಣಗಳನ್ನು ಭೇದಿಸಿ ಹೆಸರು ಸಂಪಾದಿಸಿರುತ್ತಾನೆ ಈ ಅಧಿಕಾರಿ. ಈ ಪಾತ್ರ ನಿಭಾಯಿಸಿರುವವರು ರಾಜ್ ಬಿ. ಶೆಟ್ಟಿ.

ADVERTISEMENT

ರಾಜ್‌ ನಡೆಸುವ ತನಿಖೆಯ ಸಂದರ್ಭದಲ್ಲಿ ತಾಯಿಯ ಕುರಿತ ಸತ್ಯಗಳೂ ಹೊರಬರುತ್ತವೆ. ತಾಯಿಯ ಪಾತ್ರದಲ್ಲಿ ಕಾಣಿಸಿಕೊಂಡಿರುವವರು ವರ್ಜಿನಿಯಾ ರಾಡ್ರಿಗಸ್. ಈ ಕೊಲೆ ಪ್ರಕರಣದ ಹಿಂದೆ ಇರುವ ಕಾಣದ ಕೈಗಳನ್ನು ಪತ್ತೆ ಮಾಡುವುದೇ ಕಥೆಯ ಸಾರ ಆಗಿರುವಂತಿದೆ ಎಂಬುದು ಟೀಸರ್‌ ನೋಡಿದಾಗ ಅನಿಸುತ್ತದೆ.

‘ಇದರಲ್ಲಿ ಕಾಮಿಡಿ ಇಲ್ಲ’ ಎಂದು ಚಿತ್ರತಂಡ ಹೇಳಿದೆ. ರಾಜ್ ಇದ್ದಾರೆ ಎಂಬ ಕಾರಣಕ್ಕೆ ಇದು ಇನ್ನೊಂದು ‘ಮೊಟ್ಟೆ ಕಥೆ’ ಅಲ್ಲ. ‘ನಾನು ಒಂದೇ ಬಗೆಯ ಪಾತ್ರಗಳನ್ನು ಮತ್ತೆ ಮತ್ತೆ ಮಾಡಲು ಬಯಸುವುದಿಲ್ಲ. ಹೊಸ ರೀತಿಯ ಪಾತ್ರಗಳು ನನಗೆ ಇಷ್ಟ’ ಎಂದು ರಾಜ್‌ ಹೇಳಿರುವುದನ್ನು ಇಲ್ಲಿ ಗಮನಿಸಬಹುದು.

ವರ್ಜಿನಿಯಾ ಕೂಡ ಇಲ್ಲಿ ಸಿದ್ಧ ಸೂತ್ರಗಳ ‘ತಾಯಿ’ ಪಾತ್ರ ನಿಭಾಯಿಸಿಲ್ಲ. ಇಲ್ಲಿ ಅವರು ನಿಭಾಯಿಸಿರುವುದು ಮಗಳ ರಕ್ಷಣೆಗಾಗಿ ಖಳರನ್ನು ಬಗ್ಗು ಬಡಿಯುವ ಪಾತ್ರ. ಮಿಧುನ್‌ ಮುಕುಂದನ್ ಸಂಗೀತ, ಚೇತನ್ ಡಿಸೋಜ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.