ADVERTISEMENT

ಮಹಿರ: ಆ್ಯಕ್ಷನ್, ಸಸ್ಪೆನ್ಸ್‌ನ ಹದಪಾಕ!

ವಿಜಯ್ ಜೋಷಿ
Published 26 ಜುಲೈ 2019, 17:43 IST
Last Updated 26 ಜುಲೈ 2019, 17:43 IST
ಮಹಿರ ಚಿತ್ರದ ದೃಶ್ಯ
ಮಹಿರ ಚಿತ್ರದ ದೃಶ್ಯ   

ಜೊತೆಗಿರುವ ಮಗಳು ತನ್ನ ತಾಯಿಯನ್ನು ಉದ್ದೇಶಿಸಿ ‘ಹೂ ಆರ್‌ ಯೂ’ ಎಂದು ಗಂಭೀರವಾಗಿ ಪ್ರಶ್ನಿಸುವಂತೆ ಮಾಡಿ, ವೀಕ್ಷಕನಿಗೆ ಕಥೆಯೊಳಗೆ ಪ್ರವೇಶ ಕಲ್ಪಿಸುತ್ತದೆ ‘ಮಹಿರ’. ಇದು ಆ್ಯಕ್ಷನ್‌, ಸಸ್ಪೆನ್ಸ್‌ ಚಿತ್ರ. ಚಿತ್ರದ ನಾಯಕಿ ಮಾಯಾ (ವರ್ಜಿನಿಯಾ ರಾಡ್ರಿಗಸ್‌) ವೀಕ್ಷಕರ ಪಾಲಿಗೆ ಎಷ್ಟು ನಿಗೂಢವಾಗಿರುತ್ತಾಳೋ, ಮಗಳ ಪಾಲಿಗೂ ಸರಿಸುಮಾರು ಅಷ್ಟೇ ನಿಗೂಢವಾಗಿ ಕಾಣಿಸುತ್ತಾಳೆ. ಮಾಯಾ ಮುಚ್ಚಿಡಲು ಬಯಸಿದ ವಿವರಗಳನ್ನು ಅಷ್ಟಷ್ಟಾಗಿ ಬಿಡಿಸುತ್ತ ಸಾಗುತ್ತದೆ ಚಿತ್ರದ ಕಥೆ.

ಮಾಯಾ ಮಾಜಿ ಗೂಢಚಾರಿಣಿ. ಕೆಲಸದ ವೇಳೆ ಎಂತಹ ಸಂದರ್ಭ ಎದುರಾದರೂ ನಿಭಾಯಿಸಬಲ್ಲಳು ಎಂಬ ಹೆಸರು ಸಂಪಾದಿಸಿದವಳು. ಆಕೆ, ಕ್ರಿಮಿನಲ್‌ಗಳ ವಿರುದ್ಧದ ಕಾರ್ಯಾಚರಣೆಯೊಂದರಲ್ಲಿ ಪಾಲ್ಗೊಂಡಿದ್ದಾಗ ನಡೆದ ಒಂದು ಸಣ್ಣ ‘ತಪ್ಪು’ ಆಕೆಯ ಪಾಲಿಗೆ ಒಂದರ ಹಿಂದೆ ಒಂದು ಸಂಕಷ್ಟಗಳನ್ನು ತಂದಿಡುತ್ತದೆ. ಆ ಸಂಕಷ್ಟಗಳು ಏನು, ಅವುಗಳಿಂದ ಮಾಯಾ ಹೇಗೆ ತಪ್ಪಿಸಿಕೊಳ್ಳುತ್ತಾಳೆ, ಜೊತೆಯಲ್ಲಿ ತನ್ನ ಮಗಳನ್ನು ಹೇಗೆ ರಕ್ಷಿಸಿಕೊಳ್ಳುತ್ತಾಳೆ ಎಂಬುದು ಚಿತ್ರದ ಕಥೆಯ ಹೂರಣ.

ಮಹೇಶ್ ಗೌಡ ನಿರ್ದೇಶನದ ‘ಮಹಿರ’ದ ಕಥೆ ನಡೆಯುವುದು ಕರಾವಳಿಯ ಊರೊಂದರಲ್ಲಿ. ಆದರೆ ಚಿತ್ರದಲ್ಲಿ ಎಲ್ಲಿಯೂ ಆ ಊರು ಯಾವುದು ಎಂಬ ಗುರುತು ಹೇಳುವುದಿಲ್ಲ. ಗೂಢಚರ ಇಲಾಖೆಗೆ ಮಾಯಾಳನ್ನು ಬಂಧಿಸುವ ತುರ್ತು ಇರುತ್ತದೆ. ಆ ಕೆಲಸಕ್ಕೆ ನಿಯೋಜನೆಗೊಳ್ಳುವ ಅಧಿಕಾರಿ ಪ್ರತಾಪ್ (ರಾಜ್ ಬಿ. ಶೆಟ್ಟಿ). ಚಿತ್ರದ ಇಡೀ ಕಥೆ ನಿಂತಿರುವುದು ಮಾಯಾ, ಆಕೆಯ ಮಗಳು ಆದ್ಯಾ (ಚೈತ್ರಾ ಆಚಾರ್) ಮತ್ತು ಪ್ರತಾಪ್ ಮೇಲೆ. ಚಿತ್ರದ ಉದ್ದಕ್ಕೂ ಸ್ಥಾಯಿಯಾಗಿ ಕಂಡುಬರುವುದು ಸಸ್ಪೆನ್ಸ್‌. ಅಲ್ಲಲ್ಲಿ ಎಂಬಂತೆ ನವಿರು ಹಾಸ್ಯ, ಭಾವುಕ ಸನ್ನಿವೇಶಗಳು ಇವೆ.

ADVERTISEMENT

ಆರಂಭವಾದ ಐದೋ, ಹತ್ತೋ ನಿಮಿಷಗಳಲ್ಲಿಯೇ ಚಿತ್ರದ ಗತಿಯನ್ನು ಸಸ್ಪೆನ್ಸ್‌ ಹಳಿಯ ಮೇಲೆ ತಂದು ನಿಲ್ಲಿಸಿರುವುದು ನಿರ್ದೇಶಕರ ಹೆಚ್ಚುಗಾರಿಕೆ. ಮುದ ನೀಡುವ ಒಂದೆರಡು ದೃಶ್ಯಗಳನ್ನೂ ಆರಂಭದಲ್ಲಿ ಒಂದೆರಡು ಕಡೆ ಇರಿಸಿದ್ದಾರೆ. ಆದರೆ, ಕಥೆಯೊಳಗೆ ಹೊಕ್ಕ ನಂತರ ಇರುವುದು ಆ್ಯಕ್ಷನ್ ಮತ್ತು ಸಸ್ಪೆನ್ಸ್‌ ಮಾತ್ರ.

ದೈಹಿಕವಾಗಿ ಬಲಿಷ್ಠನಲ್ಲದಿದ್ದರೂ, ಬುದ್ಧಿಮತ್ತೆಯಿಂದಲೇ ಪ್ರಕರಣಗಳನ್ನು ಭೇದಿಸಬಲ್ಲವ ಪ್ರತಾಪ್‌. ಆ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ ರಾಜ್. ಗಂಭೀರವಾಗಿಯೇ ತಿಳಿಹಾಸ್ಯದ ಬಾಣಗಳನ್ನು ಬಿಡುತ್ತ ಕಥೆಯ ಜೊತೆ ಸಾಗುತ್ತಾರೆ. ಜಾಳು ಇಲ್ಲದ ನಿರೂಪಣೆ, ಮಿದುನ್‌ ಮುಕುಂದನ್ ಅವರ ಹಿನ್ನೆಲೆ ಸಂಗೀತ ಚಿತ್ರದ ಪ್ಲಸ್‌ ಪಾಯಿಂಟ್‌ಗಳಲ್ಲಿ ಒಂದು.

ಆ್ಯಕ್ಷನ್ ದೃಶ್ಯಗಳನ್ನು ಕೂಡ ವಾಸ್ತವಕ್ಕೆ ಹತ್ತಿರವಾಗಿ ತೋರಿಸಲಾಗಿದೆ. ವರ್ಜಿನಿಯಾ ಸೇರಿದಂತೆ ಇತರ ಪಾತ್ರಗಳು ನಿಭಾಯಿಸಿರುವ ಆ್ಯಕ್ಷನ್‌ ದೃಶ್ಯಗಳಲ್ಲಿ ಅತಿಮಾನುಷವಾದದ್ದು ಇಲ್ಲ. ಆದರೆ, ವಾಸ್ತವಕ್ಕೆ ಹತ್ತಿರವಿರುವ ಕಥೆ ಇದು ಎಂಬ ಭಾವವನ್ನು ವೀಕ್ಷಕರಲ್ಲಿ ಆರಂಭದಿಂದಲೂ ಮೂಡಿಸಿ, ಒಂದೆರಡು ದೃಶ್ಯಗಳನ್ನು ಅವಾಸ್ತವಿಕವಾಗಿ ಚಿತ್ರಿಸಿರುವುದು ಸಿನಿಮಾ ಸೊಗಸಿಗೆ ಅಡ್ಡಿ ಉಂಟುಮಾಡಬಹುದು. ಚಿತ್ರವನ್ನು ಅಂದಗಾಣಿಸುವಲ್ಲಿ ಕೀರ್ತನ್‌ ಪೂಜಾರಿ ಅವರ ಛಾಯಾಗ್ರಹಣದ ಅಚ್ಚುಕಟ್ಟುತನವೂ ಜೊತೆಯಾಗಿದೆ. ವರ್ಜಿನಿಯಾ ಮತ್ತು ಚೈತ್ರಾ ತಮ್ಮ ಅಭಿನಯದಿಂದಾಗಿ ನೆನಪಲ್ಲಿ ಉಳಿಯುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.