ಮುಂಬೈ: ಕೃತಕ ಸೌಂದರ್ಯವರ್ಧಕಗಳ ಬದಲು ನೈಸರ್ಗಿಕ ಸೌಂದರ್ಯವನ್ನು ಕಾಪಾಡಿಕೊಳ್ಳುವಂತೆ ನಟಿ ಮಲ್ಲಿಕಾ ಶೆರಾವತ್ ತಮ್ಮ ಅಭಿಮಾನಿಗಳಿಗೆ ವಿಡಿಯೊ ಸಂದೇಶದಲ್ಲಿ ಒತ್ತಾಯಿಸಿದ್ದಾರೆ.
‘ಮರ್ಡರ್’, ‘ಪ್ಯಾರ್ ಕೆ ಸೈಡ್ ಎಫೆಕ್ಟ್ಸ್’, ‘ವೆಲ್‌ಕಮ್’ಮುಂತಾದ ಚಿತ್ರಗಳಿಂದ ಹೆಸರುವಾಸಿಯಾಗಿರುವ ಶೆರಾವತ್, ಭಾನುವಾರ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೊವನ್ನು ಪೋಸ್ಟ್ ಮಾಡಿದ್ದಾರೆ.
ವಿಡಿಯೊದಲ್ಲಿ ಅವರು ತಮ್ಮ ಅಭಿಮಾನಿಗಳು ಆರೋಗ್ಯಕರ ಜೀವನ ವಿಧಾನವನ್ನು ಅಳವಡಿಸಿಕೊಳ್ಳುವಂತೆ ಕೇಳಿಕೊಂಡಿದ್ದಾರೆ.
‘ನಾನು ಈಗ ತಾನೇ ಹಾಸಿಗೆಯಿಂದ ಎದ್ದಿದ್ದೇನೆ. ಮೇಕಪ್ ಹಾಕಿಕೊಂಡಿಲ್ಲ. ಕೂದಲನ್ನು ಬಾಚಿಕೊಂಡಿಲ್ಲ. ನಾನು ಮಾಡುತ್ತಿರುವ ಮೊದಲ ಕೆಲಸ ನಿಮಗಾಗಿ ವಿಡಿಯೊ ಮಾಡುತ್ತಿದ್ದೇನೆ. ನಾವೆಲ್ಲರೂ ಒಟ್ಟಾಗಿ 'ಬೊಟಾಕ್ಸ್ , ಕೃತಕ ಸೌಂದರ್ಯವರ್ಧಕ ತ್ಯಜಿಸೋಣ. ಉತ್ತಮ ಜೀವನಕ್ಕಾಗಿ ಜೀವನ ವಿಧಾನಕ್ಕೆ ಮುಂದಾಗಿ ಎಂದು ಹೇಳಲು ನಾನು ಈ ವಿಡಿಯೊವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ನಿಮ್ಮೆಲ್ಲರನ್ನೂ ಪ್ರೀತಿಸುತ್ತೇನೆ’ಎಂದು 48 ವರ್ಷದ ನಟಿ ಹೇಳಿದ್ದಾರೆ.
ಕಳೆದ ವಾರ ನಟಿ ಶೆಫಾಲಿ ಜರಿವಾಲಾ ಅವರ ಮರಣದ ನಂತರ ಶೆರಾವತ್ ಈ ವಿಡಿಯೊ ಮಾಡಿದ್ದಾರೆ. ಶೆಫಾಲಿ ಅವರ ನಿವಾಸದಲ್ಲಿ ಪಂಚನಾಮ ಮಾಡುವಾಗ ವಯಸ್ಸಾಗುವುದನ್ನು ತಡೆಯುವ ಮಾತ್ರೆಗಳು, ಚರ್ಮದ ಹೊಳಪು ಮಾತ್ರೆಗಳು ಮತ್ತು ವಿಟಮಿನ್ ಮಾತ್ರೆಗಳನ್ನು ಹೊಂದಿರುವ ಎರಡು ಪೆಟ್ಟಿಗೆಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಶೆಫಾಲಿ ಸಾವಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲವಾದರೂ, ಕೆಲವು ಮಾಧ್ಯಮ ವರದಿಗಳು ಜರಿವಾಲಾ ಅವರಿಗೆ ಹೃದಯಾಘಾತವಾಗಿದೆ ಎಂದು ಹೇಳಿವೆ.
ಅವರ ಅಕಾಲಿಕ ಮರಣವು ಕೃತಕ ಸೌಂದರ್ಯವರ್ಧಕಗಳು, ವಿಶೇಷವಾಗಿ ವಯಸ್ಸಾಗದಂತೆ ತಡೆಯುವ ಮಾತ್ರೆಗಳ ಅಪಾಯದ ಸುತ್ತ ಚರ್ಚೆಯನ್ನು ಹುಟ್ಟುಹಾಕಿದೆ.
ವಿಡಿಯೊದ ಜೊತೆಗೆ, ಶುದ್ಧ ಆಹಾರ, ಹೈಡ್ರೇಟೆಡ್ ಆಗಿರುವುದು, ನಿಯಮಿತವಾಗಿ ವ್ಯಾಯಾಮ ಮಾಡುವುದು ಮತ್ತು ಸಾಕಷ್ಟು ನಿದ್ದೆ ಮಾಡುವಂತಹ ಆರೋಗ್ಯಕರ ಅಭ್ಯಾಸಗಳನ್ನು ಅಳವಡಿಸಿಕೊಳ್ಳಲು ಜನರನ್ನು ಪ್ರೋತ್ಸಾಹಿಸುವ ಶೀರ್ಷಿಕೆಯನ್ನು ಶೆರಾವತ್ ಹಂಚಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.