ADVERTISEMENT

ಮಲಯಾಳಂನ ವೀರಪುರುಷನಾಗಿ ಮತ್ತೆ ಮಮ್ಮುಟ್ಟಿ

ವಿಕ್ರಂ ಕಾಂತಿಕೆರೆ
Published 11 ಜೂನ್ 2019, 12:10 IST
Last Updated 11 ಜೂನ್ 2019, 12:10 IST
ಮಮ್ಮುಟ್ಟಿ
ಮಮ್ಮುಟ್ಟಿ   

ಮಲಯಾಳಂನ ನಟಶ್ರೇಷ್ಠ ಮಮ್ಮುಟ್ಟಿ ಅವರನ್ನು ಹೊಸ ಗೆಟಪ್‌ನಲ್ಲಿ ಪ್ರಸ್ತುತಪಡಿಸಿದ ಮಲಯಾಳಂ ಚಿತ್ರ, ‘ಒರು ವಡಕ್ಕನ್ ವೀರಗಾಥ’. ಉತ್ತರ ಕೇರಳದ ವೀರಪುರುಷರ ಕುರಿತ ಹಾಡುಗಳಲ್ಲಿ (ವಡಕ್ಕನ್ ಪಾಟ್ಟುಗಳ್) ಕಂಡುಬರುವ ಆರೋಮಲ್ ಚೇಗವರ್, ಚಂದು ಮತ್ತು ಉಣ್ಣಿಯಾರ್ಚಅವರ ಕಥೆಗೆ ಹೊಸ ಆಯಾಮ ನೀಡಿದ ಎಂ.ಟಿ.ವಾಸುದೇವನ್ ನಾಯರ್ ಅವರ ಕಥೆಯನ್ನು ಆಧರಿಸಿದ ಚಿತ್ರ ಮತ್ತು ಅದರ ಹಾಡುಗಳು ಇಂದಿಗೂ ಕೇರಳದ ಜನರ ಮಾನಸದಲ್ಲಿ ಜೀವಂತವಾಗಿವೆ.

ಈ ಚಿತ್ರ ತೆರೆ ಕಂಡದ್ದು 1989ರಲ್ಲಿ. ನಾಯಕನ (ಚಂದು ಚೇಗವರ್) ಪಾತ್ರ ಮಾಡಿದ್ದು ಮಮ್ಮುಟ್ಟಿ. ಆಗ ಅವರ ವಯಸ್ಸು 40ರ ಆಸುಪಾಸು. ಖಡ್ಗ ಹಿಡಿದು ಯುದ್ಧ ಮಾಡಿದ ದೃಶ್ಯಗಳು ಮತ್ತು ಉಣ್ಣಿಯಾರ್ಚಳ (ಮಾಧವಿ) ‘ಅಂಗಸೌಷ್ಠವಕ್ಕೆ’ ಮಾರುಹೋಗುವ ‘ಪುರುಷ’ನ ವಾಂಛೆಗಳನ್ನು ಮನಮುಟ್ಟುವಂತೆ ಅಭಿನಯಿಸಿ ತೋರಿಸಿದ ಮಮ್ಮುಟ್ಟಿಗೆ ಈಗ 67 ವರ್ಷ. ಈ ವಯಸ್ಸಿನ ಕಲಾವಿದನೊಬ್ಬನಿಗೆ 30 ವರ್ಷಗಳ ಹಿಂದಿನ ರೀತಿಯಲ್ಲೇ ಯುದ್ಧ ಮತ್ತು ಪ್ರಣಯ ದೃಶ್ಯಗಳಲ್ಲಿ ಅಭಿನಯಿಸಲು ಸಾಧ್ಯವೇ ಎಂಬ ಪ್ರಶ್ನೆ ಮೂಡುವುದು ಸಹಜ. ಈ ಪ್ರಶ್ನೆಗೆ ಉತ್ತರವಾಗಿ ಸಿದ್ಧಗೊಂಡಿದೆ, ‘ಮಾಮಾಂಗಂ’ ಎಂಬ ಚಿತ್ರ.

ಖಡ್ಗ ಮತ್ತು ಗುರಾಣಿ ಹಿಡಿದಿರುವ ಮಮ್ಮುಟ್ಟಿಯ ‘ಫಸ್ಟ್ ಲುಕ್’ ಚಿತ್ರಗಳು ಹೊರಬೀಳುತ್ತಿದ್ದಂತೆ ಮಲಯಾಳಂ ಸಿನಿಮಾ ಪ್ರಿಯರು ರೋಮಾಂಚನಗೊಂಡಿದ್ದಾರೆ. ಒಂದು ದಶಕದ ಹಿಂದೆ ಇದೇ ರೀತಿಯ ಚಿತ್ರ ‘ಪಳಶ್ಶಿರಾಜ’ ತೆರೆ ಕಂಡಾಗಲೂ ಮಮ್ಮುಟ್ಟಿ ಅಭಿಮಾನಿಗಳು ಪುಳಕಗೊಂಡಿದ್ದರು. ಬ್ರಿಟಿಷರ ವಿರುದ್ಧ ಹೋರಾಡುವ ಪಳಶ್ಶಿರಾಜ (ಮಮ್ಮುಟ್ಟಿ) ಅಂದು ಪ್ರೇಕ್ಷಕರನ್ನು ನಿರಾಸೆಗೊಳಿಸಿರಲಿಲ್ಲ. 20 ವರ್ಷಗಳ ಹಿಂದೆ, ಒರು ವಡಕ್ಕನ್ ವೀರಗಾಥದಲ್ಲಿ ಬೆಳಗಿದ ಮಮ್ಮುಟ್ಟಿಗೂ ಪಳಶ್ಶಿರಾಜದಲ್ಲಿ ಎದೆಯುಬ್ಬಿಸಿ ನಿಂತ ಮಮ್ಮುಟ್ಟಿಗೂ ವ್ಯತ್ಯಾಸವಿರಲಿಲ್ಲ. ಅದೇ ದೈಹಿಕ ದೃಢತೆ, ಅದೇ ದನಿ, ಅದೇ ಮಾತಿನ ಓಘ.

ADVERTISEMENT

ಹೀಗಾಗಿ ಮಾಮಾಂಗಂ ಬಗ್ಗೆಯೂ ಸಿನಿಮಾ ಪ್ರಿಯರು ಕುತೂಹಲಗೊಂಡಿದ್ದಾರೆ. 10 ವರ್ಷದ ಅವಧಿ ಈ ಮಹಾನಟನ ಮೇಲೆ ಹೆಚ್ಚೇನೂ ಪರಿಣಾಮ ಬೀರಲಿಲ್ಲ ಎಂಬುದು ಈಚೆಗೆ ನಿರ್ಮಾಣಗೊಂಡ ‘ಮಧುರ ರಾಜ’ ಚಿತ್ರವೇ ಸಾಕ್ಷಿಯಾಗಿದೆ. ಆದ್ದರಿಂದ ಮಾಮಾಂಗಂ ಚಿತ್ರದಲ್ಲಿ ಅವರ ಅಭಿನಯ ಚಾತುರ್ಯದ ರಸ ಉಣ್ಣಲು ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ‌

ಈ ಚಿತ್ರಕ್ಕೆ ಎರಡು ವೈಶಿಷ್ಟ್ಯವಳಿವೆ. ಮಮ್ಮುಟ್ಟಿ ಮತ್ತೊಮ್ಮೆ ‘ವೀರ ಪುರುಷ’ನಾಗುತ್ತಾನೆ ಎಂಬುದು ಮೊದಲನೆಯದು. ಕೇರಳ ಚರಿತ್ರೆಯ ಪ್ರಮುಖ ಭಾಗವೊಂದನ್ನು ಚಿತ್ರಿದಲ್ಲಿ ಮರುಸೃಷ್ಟಿಸಲಾಗಿದೆ ಎಂಬುದು ಎರಡನೆಯದು.

ಇತ್ತೀಚಿನ ವರ್ಷಗಳಲ್ಲಿ ಮಲಯಾಳಂ ಸಿನಿಮಾಗಳಲ್ಲಿ ನಾಯಕ-ಖಳನಾಯಕನ ಪಾತ್ರಗಳಲ್ಲಿ ಮಿಂಚುತ್ತಿರುವ ಉಣ್ಣಿ ಮುಕುಂದನ್ ಕೂಡ ಚಿತ್ರದಲ್ಲಿ ಮಿಂಚುವ ಭರವಸೆ ಮೂಡಿಸಿದ್ದಾರೆ. ಒರು ವಡಕ್ಕನ್ ವೀರಗಾಥ, ಪಳಶ್ಶಿರಾಜ ಮುಂತಾದ ಚಿತ್ರಗಳಂತೆ ಇದು ಕೂಡ ಕೇರಳದಲ್ಲಿ ‘ಮಾಸ್ ಚಿತ್ರ’ವಾಗಿ ಗಮನ ಸೆಳೆಯಲಿದೆ ಎಂಬುದು ಸಿನಿಮಾ ಕ್ಷೇತ್ರದಲ್ಲಿ ಕೇಳಿ ಬರುತ್ತಿರುವ ಮಾತು. ಚಿತ್ರದಲ್ಲಿ ಮಮ್ಮುಟ್ಟಿ ಮತ್ತುಉಣ್ಣಿ ಮುಕುಂದನ್ ಅವರ ಪಾತ್ರಗಳ ಹೆಸರನ್ನು ಇನ್ನೂ ತಂಡ ಬಹಿರಂಗ ಮಾಡಲಿಲ್ಲ.

ಆರರ ಹರಯದ ಬಾಲಕ

ಪ್ರಾಚಿ ತೆಹ್ಲಾನ್ ನಾಯಕಿಯ (ಉಣ್ಣಿಮಾಯ) ಪಾತ್ರ ನಿರ್ವಹಿಸುತ್ತಿರುವ ಮಾಮಾಂಗಂ ಚಿತ್ರದಲ್ಲಿ ಮಮ್ಮುಟ್ಟಿ ಮತ್ತು ಉಣ್ಣಿ ಮುಕುಂದನ್ ಅವರಂತೆಯೇ ಗಮನ ಸೆಳೆಯುತ್ತಿರುವ ಬಾಲ ನಟನೊಬ್ಬನಿದ್ದಾನೆ. ಆರನೇ ತರಗತಿಯಲ್ಲಿ ಓದುತ್ತಿರುವ ಅಚ್ಯುತನ್ ಆ ಬಾಲಕ. ಚಂದ್ರತ್ತಿಲ್ ಚಂದುಣ್ಣಿ ಎಂಬುದು ಈತನ ಪಾತ್ರದ ಹೆಸರು. ಚಿತ್ರದಲ್ಲಿ ಈ ಪಾತ್ರ ನಾಯಕ ನಿರ್ವಹಿಸುವ ಪಾತ್ರಕ್ಕೆ ಭಾವನಾತ್ಮಕವಾಗಿ ತುಂಬ ಸನಿಹವಿದ್ದು ಚಿತ್ರದುದ್ದಕ್ಕೂ ಗಮನ ಸೆಳೆಯಲಿದೆ ಎಂದು ಹೇಳಲಾಗಿದೆ.ವೇಣು ಕಣ್ಣಾಪಿಳ್ಳಿ ನಿರ್ಮಾಣದ ಚಿತ್ರವನ್ನು ನಿರ್ದೇಶಿಸಿರುವುದು ಪಿ.ಪದ್ಮಕುಮಾರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.