ADVERTISEMENT

ಮನರೂಪದ ಥ್ರಿಲ್ಲರ್ ಕಥನ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2019, 19:30 IST
Last Updated 14 ನವೆಂಬರ್ 2019, 19:30 IST
ಕಿರಣ ಹೆಗಡೆ
ಕಿರಣ ಹೆಗಡೆ   

‘ಕಾಡು ಹಾಗೂ ಕಾಡುವ ಪಾತ್ರಗಳೇ ‘ಮನರೂಪ’ ಚಿತ್ರದ ಜೀವಾಳ’ ಎಂದು ಮಾತು ಆರಂಭಿಸಿದರು ನಿರ್ದೇಶಕ ಕಿರಣ ಹೆಗಡೆ.

ನವೆಂಬರ್‌ 22ರಂದು ಸಿನಿಮಾ ತೆರೆ ಕಾಣುತ್ತಿದೆ. ಇದರ ಪೂರ್ವಭಾವಿಯಾಗಿ ಚಿತ್ರತಂಡದೊಂದಿಗೆ ಆಗಮಿಸಿದ್ದ ಅವರು, ಟ್ರೇಲರ್‌ ಬಿಡುಗಡೆಗೊಳಿಸಿ ಮಾತಿಗಿಳಿದರು.

‘ಚಿತ್ರದಲ್ಲಿ ನೋಡುಗರಿಗೆ ಥ್ರಿಲ್‌ ನೀಡುವ ಅಂಶಗಳಿವೆ. ಕೌಟುಂಬಿಕ ವ್ಯವಸ್ಥೆ, ವ್ಯಕ್ತಿತ್ವ, ಅಸ್ತಿತ್ವ ಮತ್ತು ಇರುವಿಕೆಯ ವಿವಿಧ ಮಜಲನ್ನು ಚಿತ್ರ ಬಿಚ್ಚಿಡುತ್ತದೆ. ಇದು ಹೊಸ ಬಗೆಯ ಕಥೆ, ನಿರೂಪಣೆ ಹೊಂದಿರುವ ಸಿನಿಮಾ’ ಎಂದು ವಿವರಿಸಿದರು.

ADVERTISEMENT

1981ರಿಂದ 1996ರ ನಡುವೆ ಜನಿಸಿದವರ ಬದುಕಿನ ಕಥೆ ಇದು. ಈ ಅವಧಿಯಲ್ಲಿ ಜನಿಸಿದವರು ಎಲ್ಲಿಯೂ ಗಟ್ಟಿಯಾಗಿ ನೆಲೆಯೂರುವುದಿಲ್ಲವಂತೆ. ಅವರಲ್ಲಿ ಸ್ವಾರ್ಥ ಮನೆ ಮಾಡಿರುತ್ತದೆ. ಅತಿಯಾಗಿ ತಮ್ಮನ್ನೇ ತಾವು ಪ್ರೀತಿಸುತ್ತಾರಂತೆ. ಎಲ್ಲರೂ ತಮ್ಮನ್ನೇ ಗಮನಿಸಬೇಕು ಎಂಬ ಮನೋಧರ್ಮದವರು. ಅಪರೂಪದ ಸಂಗತಿ ಅರಸಿಕೊಂಡು ತಿರುಗಾಡುವುದರಲ್ಲಿ ಅವರ ಸದಾ ಮುಂದು. ಅಂತಹ ಯುವಜನರ ಕಥೆಯೇ ಈ ಸಿನಿಮಾದ ಹೂರಣ.

ಸೈಕಲಾಜಿಕಲ್‌ ಕ್ರೈಮ್‌, ಥ್ರಿಲ್ಲರ್‌ ಸಿನಿಮಾ ಇದಾಗಿದೆ. ಶೂಟಿಂಗ್ ನಡೆದಿರುವುದು ಶಿರಸಿ ಮತ್ತು ಸಿದ್ದಾಪುರದ ಕಾಡಿನಲ್ಲಿ. ಐವರು ಸ್ನೇಹಿತರಿಗೆ ಗುಮ್ಮ ಯಾವ ಪರಿಯಾಗಿ ಕಾಟ ನೀಡುತ್ತದೆ, ಅವರು ಹೇಗೆ ಪೀಕಲಾಟ ಅನುಭವಿಸುತ್ತಾರೆ ಎನ್ನುವುದೇ ಚಿತ್ರದ ಕಥಾಹಂದರ.

ದಿಲೀಪ್ ಕುಮಾರ್, ಅನುಷಾ ರಾವ್, ನಿಶಾ ಬಿ.ಆರ್., ಆರ್ಯನ್, ಶಿವಪ್ರಸಾದ್, ಅಮೋಘ್ ಸಿದ್ಧಾರ್ಥ್, ಗಜಾ ನೀನಾಸಂ, ಪ್ರಜ್ವಲ್ ಗೌಡ, ರಮಾನಂದ ಐನಕೈ, ಸತೀಶ್ ಗೋಳಿಕೊಪ್ಪ ತಾರಾಗಣದಲ್ಲಿದ್ದಾರೆ. ವಿಶೇಷ ಪಾತ್ರದಲ್ಲಿ ಬಿ. ಸುರೇಶ್ ಕಾಣಿಸಿಕೊಂಡಿದ್ದಾರೆ.

ಸಿ.ಎಂ.ಸಿ.ಆರ್. ಮೂವೀಸ್‌ನಡಿ ಚಿತ್ರ ನಿರ್ಮಿಸ ಲಾಗಿದೆ.ಗೋವಿಂದರಾಜ್ ಅವರ ಛಾಯಾಗ್ರಹಣವಿದೆ. ಸರ್‌ವಣ ಸಂಗೀತ ಸಂಯೋಜಿಸಿದ್ದಾರೆ. ಸೂರಿ, ಲೋಕಿ ಅವರ ಸಂಕಲನವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.