‘ಸಿನಿಮಾದ ಸೋಲು, ಗೆಲುವು ನಿರ್ಮಾಪಕರ ಕೈಯಲ್ಲೇ ಇದೆ. ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡದೇ ಇದ್ದರೆ ಯಾರು ಸಿನಿಮಾಗೆ ಬರುವುದಿಲ್ಲ. ಪ್ರಚಾರ ಮಾಡಿದಷ್ಟು ಸಿನಿಮಾ ನೋಡ್ತಾರೆ’–ಇದು ನಟ ದುನಿಯಾ ವಿಜಯ್ ಅಭಿಮತ.
ನಿರ್ದೇಶಕ ಎಸ್.ನಾರಾಯಣ್ ನಿರ್ದೇಶನದ, ದುನಿಯಾ ವಿಜಯ್ ಹಾಗೂ ಶ್ರೇಯಸ್ ಮಂಜು ಪ್ರಮುಖಪಾತ್ರದಲ್ಲಿ ನಟಿಸಿರುವ ‘ಮಾರುತ’ ಸಿನಿಮಾದ ಮೊದಲ ಲಿರಿಕಲ್ ಹಾಡಿನ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ವಿಜಯ್, ‘ಸಿನಿಮಾದ ಬಗ್ಗೆ ಪ್ರಚಾರ ಮಾಡಿದಷ್ಟು ಜನ ನೋಡುತ್ತಾರೆ. ‘ಭೀಮ’ ಸಿನಿಮಾದ ಪ್ರಚಾರಕ್ಕೆ ಪಟ್ಟ ಕಷ್ಟ ನನಗೇ ಗೊತ್ತು. ಮಲಯಾಳದವರಿಗೆ ಬೆಂಗಳೂರು ಒಳ್ಳೆಯ ವಾಸ್ತು ಆಗಿದೆ. ಅವರಿಲ್ಲಿ ಮಾಡಿದ ಸಿನಿಮಾಗಳೆಲ್ಲವೂ ಸೂಪರ್‌ಹಿಟ್. ಇದಕ್ಕೆ ಪ್ರಚಾರವೇ ಕಾರಣವಿರಬಹುದು’ ಎಂದರು.
‘ವಿಜ್ಞಾನ, ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಸಂಬಂಧಗಳು ಇನ್ನೂ ಹಾಗೇ ಇವೆ. ಈ ಸಂಬಂಧಗಳ ಮೇಲೆಯೇ ಸಿನಿಮಾ ಮಾಡಿ ಸೈ ಎನಿಸಿಕೊಂಡ ನಿರ್ದೇಶಕರು ಎಸ್.ನಾರಾಯಣ್. ‘ಮಾರುತ’ ಇಡೀ ಕುಟುಂಬ ಜೊತೆಯಾಗಿ ಕುಳಿತು ನೋಡಬಹುದಾದ ಸಿನಿಮಾ. ನಾರಾಯಣ್ ಅವರು ಕೆಟ್ಟ ಸಿನಿಮಾಗಳನ್ನು ತೆಗೆದಿಲ್ಲ. ಸಂದೇಶವಿರುವ ಸಿನಿಮಾಗಳೇ ಇವರದ್ದು. ಕೌಟುಂಬಿಕ ಸಿನಿಮಾವೊಂದನ್ನು ಮಾಡಿ, ನಾನೇ ನಟಿಸುತ್ತೇನೆ’ ಎಂದು ನಾರಾಯಣ್ ಅವರಿಗೆ ಇದೇ ಸಂದರ್ಭದಲ್ಲಿ ವಿಜಯ್ ಹೇಳಿದರು.
‘ಇದು ಚಂಡಮಾರುತ’
‘ದುನಿಯಾ ವಿಜಯ್ ಚಿತ್ರತಂಡಕ್ಕೆ ಸೇರ್ಪಡೆಯಾಗುವವರೆಗೂ ಶೀರ್ಷಿಕೆ ಇಟ್ಟಿರಲಿಲ್ಲ. ಅವರು ಬಂದ ನಂತರ ‘ಮಾರುತ’ ಎಂಬ ಶೀರ್ಷಿಕೆ ಇಡಲಾಯಿತು. ನಾವಿಬ್ಬರು ಹಿಂದೆ ‘ಚಂಡ’ ಸಿನಿಮಾ ಮಾಡಿದ್ದೆವು. ಈಗ ‘ಮಾರುತ’ ಮಾಡಿದ್ದೇವೆ. ಎರಡು ಸೇರಿ ಯಶಸ್ಸಿನ ‘ಚಂಡಮಾರುತ’ ಆಗುವ ಭರವಸೆ ಇದೆ. ಪೋಷಕರು ಮಕ್ಕಳ ಚಲನವಲನದ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಅವರ ಕೈಯಲ್ಲಿರುವ ಮೊಬೈಲ್ ಚಟುವಟಿಕೆಗಳ ಬಗ್ಗೆ ಗಮನವಿಡಬೇಕು. ವಾರಕ್ಕೊಮ್ಮೆಯಾದರೂ ಬಿಡುವು ಮಾಡಿಕೊಂಡು ಮಕ್ಕಳ ಜೊತೆ ಸಮಯ ಕಳೆಯಬೇಕು. ಅವರ ಮನಸ್ಸಿನ ಆಸೆಗಳು, ಬಯಕೆಗಳನ್ನು ಹಂಚಿಕೊಳ್ಳಲು ಅವಕಾಶ ನೀಡಬೇಕು. ಏಕೆಂದರೆ ಅವರು ನಿಮ್ಮ ಸ್ವತ್ತು. ಅದೇ ಮಕ್ಕಳು ಈ ದೇಶಕ್ಕೆ ಸಂಪತ್ತು. ಇದೇ ಸಾಲುಗಳ ಮೇಲೆ ಚಿತ್ರದ ಕಥೆಯಿದೆ’ ಎಂದರು ಎಸ್.ನಾರಾಯಣ್.
ಕೆ.ಮಂಜು-ರಮೇಶ್ ಯಾದವ್ ಈಶಾ ಪ್ರೊಡಕ್ಷನ್ಸ್ ಲಾಂಛನದಲ್ಲಿ ಈ ಸಿನಿಮಾ ನಿರ್ಮಿಸಿದ್ದಾರೆ. ಬೃಂದಾ ಆಚಾರ್ಯ ನಾಯಕಿಯಾಗಿ ನಟಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.