ನಟ ಸುದೀಪ್ ಅಭಿನಯದ 46ನೇ ಸಿನಿಮಾ, ವಿಜಯ್ ಕಾರ್ತಿಕೇಯ ನಿರ್ದೇಶನದ ‘ಮ್ಯಾಕ್ಸ್’ ಡಿ.25ಕ್ಕೆ ಬಿಡುಗಡೆಯಾಗುತ್ತಿದೆ. ಚಿತ್ರದ ಪ್ರಿರಿಲೀಸ್ ಕಾರ್ಯಕ್ರಮ ಇತ್ತೀಚೆಗೆ ಚಿತ್ರದುರ್ಗದಲ್ಲಿ ನಡೆಯಿತು.
ನಟರಾದ ಧನಂಜಯ, ಡಾರ್ಲಿಂಗ್ ಕೃಷ್ಣ, ವಿನಯ್ ರಾಜ್‌ಕುಮಾರ್, ಯುವ ರಾಜ್‌ಕುಮಾರ್, ನವೀನ್ ಶಂಕರ್, ನಿರೂಪ್ ಭಂಡಾರಿ, ಕಾರ್ತಿಕ್ ಮಹೇಶ್ ಸೇರಿದಂತೆ ಹಲವು ನಟರು, ನಿರ್ದೇಶಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈ ವೇಳೆ ಮಾತನಾಡಿದ ಸುದೀಪ್, ‘ಎರಡೂವರೆ ವರ್ಷ ಕಾಯಿಸಿದ್ದಕ್ಕೆ ಕ್ಷಮಿಸಿಬಿಡಿ. ಅಭಿಮಾನಿಗಳೆಲ್ಲ ಯಾವೆಲ್ಲಾ ಮಾದರಿಯಲ್ಲಿ ಟ್ರೋಲ್ ಮಾಡಿದ್ದನ್ನು ಓದಿಲ್ಲ ಎಂದುಕೊಳ್ಳಬೇಡಿ, ಚೆನ್ನಾಗಿಯೇ ಅವುಗಳನ್ನು ಓದಿಕೊಂಡಿದ್ದೇನೆ. ಬೇಕೆಂದೇ ನಿಮ್ಮನ್ನು ಕಾಯಿಸಿಲ್ಲ, ಕೆಲವು ಬಾರಿ ಹೀಗೆ ಆಗಿಹೋಗುತ್ತದೆ. ಖಂಡಿತವಾಗಿಯೂ ಹೆಚ್ಚು ಸಿನಿಮಾಗಳನ್ನು ಮಾಡುತ್ತೇನೆ. ಡಿ.25ಕ್ಕೆ ‘ಮ್ಯಾಕ್ಸ್’ ಬರಲಿದೆ. ಈ ಸಿನಿಮಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹೊಸಬರು ನಟಿಸಿದ್ದಾರೆ, ತಂತ್ರಜ್ಞರು ಕಾರ್ಯನಿರ್ವಹಿಸಿದ್ದಾರೆ. ಅವರಿಗೆ ಇದೊಂದು ಒಳ್ಳೆಯ ವೇದಿಕೆಯಾಗಲಿದೆ. ಕನ್ನಡ ಚಿತ್ರರಂಗವನ್ನು, ಕನ್ನಡ ಜನತೆಯನ್ನು ಇದೇ ರೀತಿ ಒಗ್ಗಟ್ಟಾಗಿ ನೋಡಲು ಆಸೆಪಡುವವನು ನಾನು. ಈ ಒಗ್ಗಟ್ಟು ಹೀಗೇ ಇರಲಿ. ಕನ್ನಡ ಚಿತ್ರರಂಗ ಬೆಳೆಯಬೇಕು ಎನ್ನುವ ಆಸೆಯೂ ನನ್ನದು. ಬೇರೆ ರಾಜ್ಯದಿಂದ ಬಂದು ಓಡುವಂತಹ ಹೊಸ ಚಿತ್ರಗಳಿಗೆ ಎಷ್ಟು ಬೆಂಬಲ ನೀಡುತ್ತೀರೋ, ನಮ್ಮ ಕನ್ನಡ ಚಿತ್ರಗಳ ಹೊಸ ಪ್ರತಿಭೆಗಳಿಗೂ ಅಷ್ಟೇ ಬೆಂಬಲ ನೀಡಿ. ಇಲ್ಲವಾದಲ್ಲಿ ನಾಳೆ ಕನ್ನಡ ಚಿತ್ರಗಳು ಇರುವುದಿಲ್ಲ, ಚಿತ್ರಮಂದಿರಗಳು ಉಳಿಯುವುದಿಲ್ಲ’ ಎಂದರು.
‘ಮ್ಯಾಕ್ಸ್’ ಸಿನಿಮಾದಲ್ಲಿ ಸುದೀಪ್ ಜೊತೆಗೆ ‘ಪುಷ್ಪ’ ಖ್ಯಾತಿಯ ಸುನೀಲ್, ವರಲಕ್ಷ್ಮೀ ಶರತ್ ಕುಮಾರ್, ಸಂಯುಕ್ತ ಹೊರನಾಡು, ಶರತ್ ಲೋಹಿತಾಶ್ವ, ಪ್ರಮೋದ್ ಶೆಟ್ಟಿ ಮುಂತಾದವರು ನಟಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.