ADVERTISEMENT

ಮೊಬೈಲೇ ಹೀರೊಯಿನ್‌!

​ಪ್ರಜಾವಾಣಿ ವಾರ್ತೆ
Published 3 ಜನವರಿ 2019, 16:17 IST
Last Updated 3 ಜನವರಿ 2019, 16:17 IST
ರಾಜ್‌ಕಿರಣ್‌
ರಾಜ್‌ಕಿರಣ್‌   

ನಾಯಕ ಎಷ್ಟೇ ಕಠಿಣ ಮನಸ್ಸಿನವನಿರಲಿ, ಅಳುಮುಂಜಿಯಾಗಿರಲಿ, ಸಹೃದಯನಾಗಿರಲಿ, ಕಲ್ಲು ಮನದವನಿರಲಿ ಅವನು ಯಾವುದಾದರೂ ಒಂದು ಹಂತದಲ್ಲಿ ನಾಯಕಿಗೆ ಸೋಲಲೇ ಬೇಕು. ಇದು ಬಹುತೇಕ ಎಲ್ಲ ಸಿನಿಮಾಗಳಲ್ಲಿಯೂ ಕಾಣಸಿಗುವ ಸೂತ್ರ. ಹೌದು, ನಾಯಕ ಯಾಕೆ ನಾಯಕಿಯನ್ನೇ ಪ್ರೀತಿಸಬೇಕು? ಬೇರೆ ಏನನ್ನಾದರೂ ಪ್ರೀತಿಸಬಹುದಲ್ಲವಾ? ನಾಯಕಿಯ ಬದಲಿಗೆ ಮೊಬೈಲನ್ನೇ ಪ್ರೀತಿಸಿದರೆ?

ಏನು ತಲಹರಟೆ ಮಾಡ್ತಿದ್ದಾರೆ ಅಂದ್ಕೋಬೇಡಿ. ಇದು ನಿಜ. ಮೊಬೈಲ್‌ ಪ್ರೇಮಿಯ ಕಥೆಯನ್ನೇ ಇಟ್ಟುಕೊಂಡು ಕಥೆ ಹೇಳಲು ಹೊರಟಿದ್ದಾರೆ ತಿಮ್ಮಂಪಲ್ಲಿ ಚಂದ್ರ. ಅವರೇ ಈ ಚಿತ್ರದ ನಿರ್ಮಾಪಕರೂ ಕೂಡ.

‘ಮಿಸ್ಡ್‌ ಕಾಲ್‌’ ಎಂಬ ಹೆಸರಿಟ್ಟುಕೊಂಡು ಅವರು 2013ರಲ್ಲಿಯೇ ಸಿನಿಮಾ ಕೆಲಸ ಶುರುಮಾಡಿದ್ದರು. ಆದರೆ ಬಂಡವಾಳದ ರಿಚಾರ್ಜ್‌ ಮಾಡಲು ವಿಳಂಬವಾಗಿದ್ದರಿಂದ ಈಗ ಚಿತ್ರ ತೆರೆಗೆ ಬರುತ್ತಿದೆ. ಇತ್ತೀಚೆಗೆ ಪತ್ರಿಕಾಗೋಷ್ಠಿ ನಡೆಸಿದ ಚಿತ್ರತಂಡ ಹಾಡುಗಳು ಮತ್ತು ಟೀಸರ್ ಬಿಡುಗಡೆ ಮಾಡಿತು. ಕಥೆಯಲ್ಲಿದ್ದಷ್ಟೇ ಬಾಲಿಶಗುಣ ಟೀಸರ್‌ನಲ್ಲಿಯೂ ಇತ್ತು.

ADVERTISEMENT

‘ಇದು ಪಕ್ಕಾ ಕಮರ್ಷಿಯಲ್ ಎಂಟರ್‌ಟೇನ್ಮೆಂಟ್‌ ಸಿನಿಮಾ. ನನಗೆ ರೆಗ್ಯುಲರ್ ಮಾದರಿಯ ಸಿನಿಮಾ ಮಾಡಲು ಆಗಲ್ಲ.‌ ಹಾಗೆ ಮಾಡಲು ಬರುವುದಿಲ್ಲ. ಎಲ್ಲ ಹಂತದಲ್ಲಿಯೂ ಏನಾದರೂ ಡಿಫರೆಂಟ್‌ ಆಗಿ ಮಾಡಬೇಕು ಎಂದು ಹೊರಡುವವನು ನಾನು. ನಾನು ಸಾಧ್ಯವಾದಷ್ಟೂ ಜನರ ಸಂಪರ್ಕವನ್ನು ಬಯಸುವವನು. ಆದರೆ ಮೊಬೈಲ್ ಬಂದ ಮೇಲೆ ಸಂಬಂಧಗಳು ಹದಗೆಟ್ಟಿವೆ. ಮನುಷ್ಯ ಒಂಟಿಯಾಗ್ತಾ ಇದ್ದಾನೆ. ಸ್ನೇಹದ ಗುಣ ಮರೆಯಾಗುತ್ತಿದೆ. ಜನ ಇಂದು ಮೊಬೈಲ್ ಅನ್ನೇ ಪ್ರೀತಿ ಮಾಡ್ತಾರೆ ಅಂತ ಗೊತ್ತಾಯ್ತು. ಹಾಗಾಗಿ ಅದೇ ರೀತಿ ಕಥೆ ಹೆಣೆದೆ. ನಾಯಕ ಒಂದು ಮೊಬೈಲ್‌ ಅನ್ನೇ ಪ್ರೀತಿಸುತ್ತಾನೆ. ಹುಡುಗಿಯರನ್ನು ದ್ವೇಷಿಸುತ್ತಾನೆ’ ಎಂದು ಸಿನಿಮಾ ಕುರಿತು ವಿವರಿಸಿದರು ಚಂದ್ರ.

‘ಎಲ್ಲ ಸಿನಿಮಾಗಳಲ್ಲಿಯೂ ನಾಯಕಿ ಇದ್ದೇ ಇರುತ್ತಾಳೆ. ಆದರೆ ಇಲ್ಲಿ ಮೊಬೈಲೇ ನಾಯಕಿ ಎಂದು ತಿಳಿದಾಗ ತುಂಬ ಖುಷಿಯಾಯ್ತು. ಮೊಬೈಲ್‌ ಜತೆಗೇ ಡ್ಯೂಯೆಟ್ ಕೂಡ ಹಾಡಿದ್ದೀನಿ. ಸಿನಿಮಾದ ನಾಯಕ ಸಿನಿಮಾ ನಿರ್ದೇಶನದ ಕನಸು ಕಾಣುವ ಹುಡುಗನಾಗಿರುತ್ತಾನೆ. ಅವನ ಬದುಕಿನಲ್ಲಿ ಆದ ಕೆಲವು ಅನುಭಗಳಿಂದ ಹುಡುಗಿಯರನ್ನು ದ್ವೇಷಿಸುತ್ತ ಮೊಬೈಲ್‌ ಅನ್ನೇ ಪ್ರೀತಿಸಲು ಶುರುಮಾಡುತ್ತಾನೆ’ ಎಂದು ಪಾತ್ರದ ಕುರಿತು ಹೇಳಿದರು ನಾಯಕ ರಾಜ್‌ಕಿರಣ್‌.

ದಕ್ಷ ಎನ್ನುವ ಇನ್ನೊಬ್ಬ ಹುಡುಗನೂ ಈ ಚಿತ್ರದ ಮುಖ್ಯಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾನೆ. ‘ನಾನು ಸೆಕೆಂಡ್ ಹೀರೊ ಆಗಿ ಕಾಣಿಸಿಕೊಂಡಿದ್ದೇನೆ. ಶ್ರೀಮಂತ ಕುಟುಂಬದಿಂದ ಬಂದ, ಹೀರೊ ಆಗುವ ಕನಸು ಕಾಣುತ್ತಿರುವ ಹುಡುಗನ ಪಾತ್ರ’ ಎಂದು ವಿವರಿಸಿದರು.

ಹಾಡುಗಳನ್ನುಬೆಂಗಳೂರು, ನೆಲಮಂಗಲ, ಗಾಂಧಿನಗರದಲ್ಲಿಯೇ ಚಿತ್ರೀಕರಣ ಮಾಡಿದ್ದಾರೆ. ರಾಕೇಶ್‌ ಪಿ. ತಿಲಕ್‌ ಛಾಯಾಗ್ರಹಣ, ವಿಜಯ ಕೃಷ್ಣ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ. ಇದೇ ತಿಂಗಳಲ್ಲಿ ಚಿತ್ರವನ್ನು ತೆರೆಗೆ ತರುವ ಆಲೋಚನೆಯನ್ನೂ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.