ADVERTISEMENT

sandalwood: ಬಿಡುಗಡೆಗೆ ಸಿದ್ಧವಾಗುತ್ತಿದೆ ಮಲೆನಾಡಿನ ‘ಮೋಡ, ಮಳೆ ಮತ್ತು ಶೈಲ’

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2025, 23:30 IST
Last Updated 25 ಸೆಪ್ಟೆಂಬರ್ 2025, 23:30 IST
ಅಕ್ಷತ ಪಾಂಡವಪುರ, ಸಂಪತ್‌ ಮೈತ್ರೇಯ
ಅಕ್ಷತ ಪಾಂಡವಪುರ, ಸಂಪತ್‌ ಮೈತ್ರೇಯ   

ಮಲೆನಾಡಿನ ಮಳೆಗಾಲದ ಕಥಾಹಂದರವನ್ನು ಹೊಂದಿರುವ ‘ಮೋಡ, ಮಳೆ ಮತ್ತು ಶೈಲ’ ಬಿಡುಗಡೆಗೆ ಸಿದ್ಧವಾಗುತ್ತಿದೆ. ರಕ್ಷಿತ ತೀರ್ಥಹಳ್ಳಿ ನಿರ್ದೇಶನದ ಚಿತ್ರವಿದು. ಈ ಹಿಂದೆ ‘ತಿಮ್ಮನ ಮೊಟ್ಟೆಗಳು’ ಚಿತ್ರ ನಿರ್ದೇಶಿಸಿದ್ದ ರಕ್ಷಿತ್‌ಗೆ ನಾಲ್ಕನೆ ಚಿತ್ರವಿದು.  

‘ಸದ್ಯ ನಮ್ಮ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿ ಪೋಸ್ಟ್ ಪ್ರೊಡಕ್ಷನ್ ಕೊನೆಯ ಹಂತದಲ್ಲಿದೆ. ಆದರ್ಶ ಅಯ್ಯಂಗಾರ್ ಅವರಿಗೆ ಕಥೆ ಹೇಳಿದಾಗ ಕಂಟೆಂಟ್ ಸ್ಟ್ರಾಂಗ್ ಆಗಿದೆ, ಚಿತ್ರ ಮಾಡೋಣ ಎಂದರು. ಈ ಚಿತ್ರವನ್ನು ಸಂಪೂರ್ಣ ಮಳೆಯಲ್ಲಿಯೇ ಸಿಂಕ್ ಸೌಂಡ್‌ನಲ್ಲಿ ಚಿತ್ರೀಕರಿಸಲಾಗಿದೆ. ಈ ಮೊದಲಿನ ಮೂರು ಚಿತ್ರಗಳನ್ನು ಭಿನ್ನ ವಿಷಯಗಳ ಮೇಲೆ ಮಾಡಿದ್ದೆ. ಈಗ ಶೈಲ ಕಥೆ ಹೇಳಲು ಹೊರಟಿದ್ದೇನೆ. ಕಲಾವಿದರು ಚೆನ್ನಾಗಿ ನಟಿಸಿದ್ದು, ಇದು ಕಲಾವಿದರ ಸಿನಿಮಾ ಎನ್ನಬಹುದು. ಡ್ರಾಮಾ ಥ್ರಿಲ್ಲರ್ ಜಾನರ್ ಸಿನಿಮಾ ಇದಾಗಿದೆ. ತೀರ್ಥಹಳ್ಳಿ, ಕುಂದಾಪುರ ಸುತ್ತಮುತ್ತ ಚಿತ್ರೀಕರಿಸಲಾಗಿದೆ. ನಾನು 2012-13ರ ಕಾಲಘಟ್ಟದಲ್ಲಿ ನೋಡಿದ ಹಾಗೂ ಕೇಳಿದ ಒಂದಿಷ್ಟು ಕಥೆ ಇಟ್ಟುಕೊಂಡು ಈ ಸಿನಿಮಾ ಮಾಡಿದ್ದೇನೆ’ ಎಂದರು ನಿರ್ದೇಶಕ.

ಶ್ರೀಕೃಷ್ಣ ಪ್ರೊಡಕ್ಷನ್ ಬ್ಯಾನರ್‌ ಅಡಿಯಲ್ಲಿ ಆದರ್ಶ್ ಅಯ್ಯಂಗಾರ್ ಬಂಡವಾಳ ಹೂಡಿದ್ದಾರೆ. ಇದೊಂದು ಮಹಿಳಾ ಪ್ರಧಾನ ಚಿತ್ರವಾಗಿದ್ದು, ಮುಖ್ಯ ಪಾತ್ರದಲ್ಲಿ ಅಕ್ಷತಾ ಪಾಂಡವಪುರ ನಟಿಸಿದ್ದಾರೆ. ಗೋಪಾಲಕೃಷ್ಣ ದೇಶಪಾಂಡೆ, ಸಂಪತ್ ಮೈತ್ರೇಯ, ಉತ್ಪಲ್ ಗೌಡ, ರಘು ರಾಮನಕೊಪ್ಪ, ಬಲ ರಾಜವಾಡಿ, ಅಶ್ವಿನ್ ಹಾಸನ ಪ್ರಮುಖ ತಾರಾಬಳಗದಲ್ಲಿದ್ದಾರೆ. 

ADVERTISEMENT

‘ಇದರಲ್ಲಿ ನಿರ್ದೇಶಕರು ಮಲೆನಾಡಿನ ಒಂಟಿ ಹೆಣ್ಣಿನ ಕಥೆ ಹೇಳಹೊರಟಿದ್ದಾರೆ. ಮಳೆಯನ್ನು ಕೂಡ ಒಂದು ಪ್ರಮುಖ ಪಾತ್ರವಾಗಿ ತೋರಿಸಲಾಗಿದೆ. ನಾನು ಸಿನಿಮಾ ನೋಡಲು ಕಾತುರದಿಂದ ಕಾಯುತ್ತಿದ್ದೇನೆ’ ಎಂದರು ಅಕ್ಷತಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.