ADVERTISEMENT

ಶೇನ್ ಶೈನಿಂಗ್

ನವೀನ ಕುಮಾರ್ ಜಿ.
Published 6 ಜೂನ್ 2019, 19:30 IST
Last Updated 6 ಜೂನ್ 2019, 19:30 IST
ಶೇನ್‌ ನಿಗಮ್‌
ಶೇನ್‌ ನಿಗಮ್‌   

ಶೇನ್‌ ನಿಗಮ್ –ಈ ಹೆಸರು ಕೇಳಿದರೆ ಗಾಯಕ ಸೋನು ನಿಗಮ್ ಅವರ ಸಂಬಂಧಿ ಇರಬಹುದು ಎಂದು ನೀವು ಅಂದುಕೊಂಡರೆ ತಪ್ಪು. ಈತ ಮಲಯಾಳ ಚಿತ್ರರಂಗದಲ್ಲಿ ಭರವಸೆ ಮೂಡಿಸಿರುವ ಯುವನಟ. ಬೆರಳೆಣಿಕೆಯಷ್ಟು ಚಿತ್ರಗಳಲ್ಲಿ ನಾಯಕನಾಗಿ ನಟಿಸಿದ್ದರೂ ಶೇನ್ ಈಗ ಕೇರಳದಲ್ಲಿ ಮನೆ ಮಾತಾಗಿದ್ದಾರೆ.

ಇದಕ್ಕೆ ಕಾರಣ ಅವರು ನಟಿಸಿರುವ ಚಿತ್ರಗಳು ಭರ್ಜರಿ ಯಶಸ್ಸು ಕಾಣುತ್ತಿರುವುದು. ಹಾಸ್ಯ ಕಲಾವಿದ ಹಾಗೂ ನಟರಾಗಿದ್ದ ಕಲಾಭವನ್ ಅಭಿ ಅವರ ಪುತ್ರ ಈ ಶೇನ್. ತಮ್ಮ ಮನೋಜ್ಞ ಅಭಿನಯದ ಮೂಲಕ ಪ್ರೇಕ್ಷಕರಿಗೆ ಮೋಡಿ ಮಾಡಿದ್ದಾರೆ. ಪ್ರಸ್ತುತ ಅವರು ನಾಯಕನಾಗಿ ನಟಿಸಿರುವ ‘ಇಷ್ಕ್’ ಸಿನಿಮಾ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಶೇನ್‌ ಚಿತ್ರರಂಗಕ್ಕೆ ಕಾಲಿಟ್ಟಿದ್ದು ಬಾಲನಟನಾಗಿ. ಪೃಥ್ವಿರಾಜ್ ಅಭಿನಯದ ‘ತಾಂದೋನ್ನಿ’ ಸಿನಿಮಾದಲ್ಲಿ ಬಾಲನಟನಾಗಿ ಅಭಿನಯಿಸಿದರು. ಬಳಿಕ ಹಲವು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಿಗೆ ಜೀವ ತುಂಬಿದರು. ಮಂಜು ವಾರಿಯರ್ ಮುಖ್ಯಭೂಮಿಕೆಯಲ್ಲಿದ್ದ ‘ಕೇರ್ ಆಫ್ ಸಾಯಿರಾಭಾನು’ ಮತ್ತು ‘ಕುಂಬಳಂಗಿ ನೈಟ್ಸ್’ ಸಿನಿಮಾಗಳಲ್ಲೂ ಅವರದು ಗಮನಾರ್ಹ ಪಾತ್ರ.

2016ರಲ್ಲಿ ಬಿಡುಗಡೆಗೊಂಡ ‘ಕಿಸ್ಮತ್’ ಮತ್ತು 2018ರಲ್ಲಿ ತೆರೆಕಂಡ ‘ಈಡ’ ಚಿತ್ರದಲ್ಲಿ ಶೇನ್ ನಾಯಕನಾಗಿ ನಟಿಸಿದ್ದಾರೆ. ಈ ಚಿತ್ರಗಳಲ್ಲಿ ನಟನೆಯ ಅವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿತು.

ADVERTISEMENT

ಇದೀಗ ಸದ್ದು ಮಾಡುತ್ತಿರುವ ‘ಇಷ್ಕ್’ ಸೇರಿದಂತೆ ಶೇನ್ ನಾಯಕನಾಗಿ ನಟಿಸಿರುವ ಮೂರು ಸಿನಿಮಾಗಳಲ್ಲಿ ಸಾಮಾಜಿಕ ಸಮಸ್ಯೆಗಳ ಸುತ್ತವೇ ಕಥೆ ಹೆಣೆಯಲಾಗಿದೆ. ಇದೇ ಮಾಲಿವುಡ್‌ ಪ್ರೇಕ್ಷಕರ ಮನ ಗೆಲ್ಲಲು ಕಾರಣ. ಜೊತೆಗೆ, ಈ ಚಿತ್ರಗಳಲ್ಲಿ ನವಿರು ಪ್ರೇಮ ಕಥೆಯೂ ಇದೆ.

ಶಾನವಾಜ್ ಕೆ‌. ಭವಕುಟ್ಟಿ ನಿರ್ದೇಶನದಲ್ಲಿ ಮೂಡಿಬಂದಿದ್ದ ‘ಕಿಸ್ಮತ್’ ಚಿತ್ರ ಭಿನ್ನ ಧರ್ಮದ ಜೋಡಿಯ ಪ್ರೇಮ ಕಥೆ ಹೊಂದಿದೆ. ಬಿ. ಅಜಿತ್ ಕುಮಾರ್ ನಿರ್ದೇಶನದ ‘ಈಡ’ ಚಿತ್ರದಲ್ಲಿ ಪ್ರೇಮ ಕಥೆಯ ಜೊತೆ ಉತ್ತರ ಮಲಬಾರ್ ಪ್ರದೇಶದಲ್ಲಿ ನಡೆಯುವ ರಾಜಕೀಯ ಕೊಲೆಗಳು, ಜನರನ್ನು ಸಂಕಷ್ಟಕ್ಕೆ ಸಿಲುಕಿಸುವ ಹರತಾಳಗಳ ಚಿತ್ರಣ ಮೇಳೈಸಿದೆ. ಈ ಕಾರಣಕ್ಕಾಗಿಯೇ ಸಿನಿಮಾ ಸಾಕಷ್ಟು ಸದ್ದು ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.