ADVERTISEMENT

‘ನೆಟ್‌ಫ್ಲಿಕ್ಸ್’ನಲ್ಲಿ 17 ಭಾರತೀಯ ಸಿನಿಮಾ, ಟಿವಿ ಷೋಗಳು

ಕೊರೊನಾ – ಲಾಕ್‌ಡೌನ್ ಪರಿಣಾಮ

​ಪ್ರಜಾವಾಣಿ ವಾರ್ತೆ
Published 17 ಜುಲೈ 2020, 13:33 IST
Last Updated 17 ಜುಲೈ 2020, 13:33 IST
ನೆಟ್‌ಫ್ಲಿಕ್ಸ್ 
ನೆಟ್‌ಫ್ಲಿಕ್ಸ್    

ಕೊರೊನಾ ಲಾಕ್‌ಡೌನ್‌ನಿಂದಾಗಿ ಮೂರೂವರೆ ತಿಂಗಳಿನಿಂದ ಚಿತ್ರಮಂದಿರಗಳು ಬಂದ್‌ ಆಗಿವೆ. ಬಿಡುಗಡೆಗೆ ಸಿದ್ಧವಾಗಿರುವ ಯಾವ ಸಿನಿಮಾಗಳೂ ಚಿತ್ರಮಂದಿರಗಳಲ್ಲಿ ತೆರೆ ಕಾಣುವ ಲಕ್ಷಣಗಳಿಲ್ಲ.

ಇನ್ನೊಂದೆಡೆ ಡಿಜಿಟಲ್ ವೇದಿಕೆ (ಒಟಿಟಿ)ಗಳಲ್ಲಿ ಸಿನಿಮಾಗಳನ್ನು ನೋಡುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಹೀಗಾಗಿ ಕೆಲವು ಚಿತ್ರ ನಿರ್ಮಾಪಕರು ಒಟಿಟಿ ವೇದಿಕೆಗಳಲ್ಲಿ ತಮ್ಮ ಚಿತ್ರಗಳನ್ನು ಬಿಡುಗಡೆ ಮಾಡಲು ಆಸಕ್ತಿ ತೋರುತ್ತಿದ್ದಾರೆ. ಒಟಿಟಿ ಸಂಸ್ಥೆಗಳೂ ಈ ಚಿತ್ರಗಳನ್ನು ತಮ್ಮ ತಮ್ಮ ವೇದಿಕೆಗಳಲ್ಲಿ ಬಿಡುಗಡೆ ಮಾಡಲು ಮುಂದಾಗಿವೆ.

ಈ ಪೈಪೋಟಿಯಲ್ಲಿ ನೆಟ್‌ಫ್ಲಿಕ್ಸ್‌ ಒಂದು ಹೆಜ್ಜೆ ಮುಂದಿಟ್ಟಿದೆ. ಮುಂದಿನ ದಿನಗಳಲ್ಲಿ 17 ಭಾರತೀಯ ಸಿನಿಮಾಗಳು ಮತ್ತು ಟಿವಿ ಸರಣಿಗಳನ್ನು ಬಿಡುಗಡೆ ಮಾಡುವುದಾಗಿ ಈ ಸಂಸ್ಥೆ ಘೋಷಿಸಿದೆ. ಮಾತ್ರವಲ್ಲ, ತಾನು ಯಾವ್ಯಾವ ಸಿನಿಮಾಗಳನ್ನು ಬಿಡುಗಡೆ ಮಾಡುತ್ತೇನೆ ಎಂಬ ಪಟ್ಟಿ ಕೊಟ್ಟು, ಆ ಸಿನಿಮಾಗಳ ದೃಶ್ಯಗಳನ್ನು ಕೊಲ್ಯಾಜ್ ಮಾಡಿದ ಪುಟ್ಟ ಟೀಸರ್‌ ಅನ್ನೂ ಬಿಡುಗಡೆ ಮಾಡಿದೆ.

ADVERTISEMENT

ನೆಟ್‌ಫ್ಲಿಕ್ಸ್‌ ಸಂಸ್ಥೆ ಬಿಡುಗಡೆ ಮಾಡಿರುವ ಟೀಸರ್‌ನಲ್ಲಿ ಹೊಸ ಸಿನಿಮಾಗಳ ದೃಶ್ಯಗಳಿವೆ. ಒಟ್ಟು 12 ಹೊಸ ಸಿನಿಮಾಗಳು, ಐದು ಟಿವಿ ಷೊಗಳು ನೆಟ್‌ಫ್ಲಿಕ್ಸ್‌ನಲ್ಲಿ ಪ್ರದರ್ಶನಗೊಳ್ಳಲಿವೆ.

ಅನಿಲ್‌ ಕಪೂರ್, ಪೂಜಾ ಭಟ್‌, ಬಾಬಿ ಡಿಯೋಲ್‌, ಭೂಮಿ ಪಡ್ನೇಕರ್, ಕೊಂಕಣ್‌ ಸೇನ್ ‌ಶರ್ಮಾ, ಜಾಹ್ನವಿ ಕಪೂರ್‌ ಮತ್ತಿತರ ಪ್ರಮುಖ ನಟ–ನಟಿಯರು ಅಭಿನಯಿಸಿರುವ ಸಿನಿಮಾಗಳಿವೆ. ಕೆಲವು ಸಿನಿಮಾಗಳು ಬಿಗ್‌ ಬಜೆಟ್‌ನವು ಮಾತ್ರವಲ್ಲ, ಬಹುತಾರಾಗಣವನ್ನೂ ಹೊಂದಿದೆ. ಬಹುನಿರೀಕ್ಷಿತ ಸಿನಿಮಾಗಳಾಗಿರುವ ಇವುಗಳಲ್ಲಿ ಕೆಲವು ಥ್ರಿಲ್ಲರ್‌, ಇನ್ನೂ ಕೆಲವು ರೊಮ್ಯಾಂಟಿಕ್ ಕಾಮಿಡಿ ಕಥೆಗಳಿವೆ.

ಸಿನಿಮಾಗಳ ಪಟ್ಟಿ ಹೀಗಿದೆ;

ಜಾಹ್ನವಿ ಕಪೂರ್ ನಟನೆಯ ‘ಗುಂಜನ್‌ ಸಕ್ಸೇನಾ‘, ಸಂಜಯ್‌ದತ್‌– ನರ್ಗೀಸ್‌ ಫಕ್ರಿ ಅಭಿನಯದ ‘ತೋರ್‌ಬಾಜ್‌‘, ಭೂಮಿ ಫಡ್ನೇಕರ್ ನಟನೆಯ ‘ಡಾಲಿ ಕಿಟ್ಟಿ ಔರ್‌ ಓ ಚಮಕ್ತೆ ಸಿತಾರೆ‘, ರಾಧಿಕಾ ಆಪ್ಟೆ, ನವಾಜುದ್ದೀನ್ ಸಿದ್ದಿಕಿ ಪ್ರಮುಖ ಪಾತ್ರದಲ್ಲಿರುವ ಕ್ರೈಮ್ – ಥ್ರಿಲ್ಲರ್ ಚಿತ್ರ ‘ರಾತ್‌ ಅಖೇಲಿ ಹೈ‘, ಅನುರಾಗ್ ಬಸು ನಿರ್ದೇಶನದಅಭಿಷೇಕ್‌ ಬಚ್ಚನ್‌, ರಾಜ್‌ಕುಮಾರ್ ರಾವ್ ನಟನೆಯ ಕಾಮಿಡಿ–ರೊಮ್ಯಾಂಟಿಕ್ ಸಿನಿಮಾ ‘ಲೂಡೊ‘, ಬಾಬಿ ಡಿಯೋಲ್ ನಟನೆಯ ‘ಕ್ಲಾಸ್ ಆಫ್ 83‘, ಯಾಮಿ ಗೌತಮ್ ಅಭಿನಯದ ‘ಗಿನ್ನು ವೆಡ್ಸ್‌ ಸನ್ನಿ‘, ಪ್ರಶಸ್ತಿ ವಿಜೇತ ಚಿತ್ರ ‘ಬಾಂಬೆ ರೋಸ್‌‘ ಸೇರಿದಂತೆ ಹದಿನೇಳು ಸಿನಿಮಾ ಮತ್ತು ಟಿವಿ ಷೊಗಳು ಮುಂದಿನ ದಿನಗಳಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ಪ್ರದರ್ಶನಗೊಳ್ಳಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.