ADVERTISEMENT

ಮುಗಿಲ್‌ಪೇಟೆಯ ಬೊಗಸೆ ಪ್ರೀತಿ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2019, 19:30 IST
Last Updated 21 ನವೆಂಬರ್ 2019, 19:30 IST
ಕಯಾದು ಲೋಹರ್
ಕಯಾದು ಲೋಹರ್   

ಅಪ್ಪನ ಜನಪ್ರಿಯತೆಯ ಭಾರ ಮತ್ತು ನಟನೆಯ ತುಡಿತ ಎರಡನ್ನೂ ಸವಾಲಾಗಿ ಸ್ವೀಕರಿಸಿಯೇ ಬೆಳ್ಳಿತೆರೆಗೆ ಹೆಜ್ಜೆ ಇಟ್ಟವರು ನಟ ಮನೋರಂಜನ್ ರವಿಚಂದ್ರನ್. ನಟಿಸಿದ ಮೊದಲ ಚಿತ್ರ ‘ಸಾಹೇಬ’ ಅವರ ಕೈ ಹಿಡಿಯಲಿಲ್ಲ. ಬಳಿಕ ‘ಬೃಹಸ್ಪತಿ’ಯ ವೇಷಧಾರಿಯಾದರೂ ಗೆಲುವು ದಕ್ಕಲಿಲ್ಲ. ಈಗ ಅವರ ಮೂರನೇ ಚಿತ್ರ ‘ಪ್ರಾರಂಭ’ ಬಿಡುಗಡೆಯ ಸನಿಹದಲ್ಲಿದೆ.

ಈ ನಡುವೆಯೇ ನಾಲ್ಕನೇ ಚಿತ್ರ ‘ಮುಗಿಲ್‌ಪೇಟೆ’ ಕೂಡ ಸೆಟ್ಟೇರಿದೆ. ಅದೃಷ್ಟದ ಬೆನ್ನಿಗೆ ಬಿದ್ದಿರುವ ಅವರು ತಮ್ಮ ಹೆಸರನ್ನು ಮನುರಂಜನ್‌ ಆಗಿ ಬದಲಾಯಿಸಿಕೊಂಡಿದ್ದಾರೆ. ಇದರಲ್ಲಿ ಅವರದು ಮಾಸ್ ಹಾಗೂ ಕ್ಲಾಸ್ ಹೀರೊ ಪಾತ್ರ. ಇದಕ್ಕೆ ಬೇಕಾದ ಅಗತ್ಯ ತಯಾರಿ ಮಾಡಿಕೊಂಡಿರುವ ಖುಷಿಯಲ್ಲಿಯೂ ಇದ್ದಾರೆ.

ಈ ಚಿತ್ರ ಪ್ರೀತಿ, ಭಾವುಕತೆ, ಆ್ಯಕ್ಷನ್‌, ಕಾಮಿಡಿಯ ಹದಬೆರತ ಪಾಕವಂತೆ. ಭೂತಕಾಲ ಮತ್ತು ವರ್ತಮಾನದ ಎರಡು ಕಥೆಗಳು ತೆರೆಯ ಮೇಲೆ ಒಂದೇ ರೇಖೆಯಲ್ಲಿ ಸಾಗಲಿವೆ. ಹಾಗಾಗಿ, ಮನುರಂಜನ್‌ ಎರಡು ಛಾಯೆಯಲ್ಲಿ ಕಾಣಿಸಿಕೊಳ್ಳುವುದು ಖಾತ್ರಿಯಾಗಿದೆ.

ADVERTISEMENT

ಭರತ್‌ ಎಸ್. ನಾವುಂದ ಈ ಚಿತ್ರ ನಿರ್ದೇಶಿಸಿದ್ದಾರೆ. ಮುಂದಿನ ವಾರದಿಂದ ಸಕಲೇಶಪುರದಲ್ಲಿ ಮೊದಲ ಹಂತದ ಶೂಟಿಂಗ್‌ ಶುರುವಾಗಲಿದೆ. ನಂತರ ಕುದುರೆಮುಖ, ತೀರ್ಥಹಳ್ಳಿ, ಸಾಗರ, ಕಾಸರಗೋಡಿನ ಸುತ್ತಮುತ್ತ ಚಿತ್ರೀಕರಣ ನಡೆಸಲು ಚಿತ್ರತಂಡ ನಿರ್ಧರಿಸಿದೆ.

ಮನುರಂಜನ್‌ ಎರಡು ವರ್ಷದ ಹಿಂದೆಯೇ ಈ ಕಥೆ ಕೇಳಿದ್ದರಂತೆ. ‘ಚಿತ್ರದಲ್ಲಿ ನನ್ನ ಹೇರ್‌ಸ್ಟೈಲ್‌ ಕೂಡ ಬದಲಾಗಲಿದೆ. ಪಾತ್ರಕ್ಕೆ ಸದೃಢ ಮೈಕಟ್ಟು ಬೇಕಿತ್ತು. ನಿರ್ಮಾಪಕರ ಒತ್ತಾಯದ ಮೇರೆಗೆ ಜಿಮ್‌ನಲ್ಲಿ ಸಾಕಷ್ಟು ಬೆವರುಹರಿಸಿದ್ದೇನೆ’ ಎಂದು ವಿವರಿಸಿದರು.

ಕಯಾದು ಲೋಹರ್ ಈ ಚಿತ್ರದ ನಾಯಕಿ. ಆಕೆ ಬಿ.ಕಾಂ ಪದವಿ ಓದುತ್ತಿದ್ದಾರೆ. ‘ನನ್ನದು ಬಬ್ಲಿ ಹಾಗೂ ಮುಗ್ಧ ಯುವತಿಯ ಪಾತ್ರ’ ಎಂದ ಅವರು, ಕೆಲವೇ ದಿನಗಳಲ್ಲಿ ಸಂಪೂರ್ಣವಾಗಿ ಕನ್ನಡ ಕಲಿತು ಮಾತನಾಡುತ್ತೇನೆ ಎಂದು ಹೇಳುವುದನ್ನು ಮರೆಯಲಿಲ್ಲ.

ಮೋತಿ ಮೂವಿ ಮೇಕರ್ಸ್‌ನಡಿ ರಕ್ಷಾ ವಿಜಯ್‌ಕುಮಾರ್ ಹಾಗೂ ಮೋತಿ ಮಹೇಶ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ರಂಗಾಯಣ ರಘು, ಅವಿನಾಶ್, ತಾರಾ, ಸಾಧುಕೋಕಿಲ ತಾರಾಗಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.