ADVERTISEMENT

ತೆರೆಯ ಮೇಲೆ ‘ಟೊಳ್ಳುಗಟ್ಟಿ’ ನಾಟಕ

​ಪ್ರಜಾವಾಣಿ ವಾರ್ತೆ
Published 1 ಮೇ 2019, 8:42 IST
Last Updated 1 ಮೇ 2019, 8:42 IST
‘ಮೂಕವಿಸ್ಮಿತ’ ಚಿತ್ರತಂಡ
‘ಮೂಕವಿಸ್ಮಿತ’ ಚಿತ್ರತಂಡ   

ಕನ್ನಡ ರಂಗಭೂಮಿಗೆ ಹೊಸ ಆಯಾಮ ನೀಡಿದ ಹಿರಿಮೆ ಟಿ.ಪಿ. ಕೈಲಾಸಂ ಅವರದು. ಅವರ ಪ್ರಸಿದ್ಧ ನಾಟಕಗಳಲ್ಲಿ ‘ಟೊಳ್ಳುಗಟ್ಟಿ’ಯೂ ಒಂದಾಗಿದೆ. ಇದು ಈಗ ಬೆಳ್ಳಿ ಪರದೆ ಮೇಲೆ ದೃಶ್ಯರೂಪ ತಳೆದು ಪ್ರೇಕ್ಷಕರನ್ನು ರಂಜಿಸಲು ಸಿದ್ಧವಾಗಿದೆ.

ಈ ನಾಟಕ ನಿರ್ದೇಶಿಸಿರುವುದು ಗುರುದತ್‌ ಶ್ರೀಕಾಂತ್. ಸಿನಿಮಾಕ್ಕೆ ‘ಮೂಕವಿಸ್ಮಿತ’ ಎಂದು ಹೆಸರಿಡಲಾಗಿದೆ. ‘ಟೊಳ್ಳು ನಿರೀಕ್ಷೆ ಗಟ್ಟಿ ಸಿನಿಮಾ’ ಎಂಬ ಅಡಿಬರಹದ ಮೂಲಕ ನಿರ್ದೇಶಕರು ನೋಡುಗರಲ್ಲಿ ಕುತೂಹಲ ಕೂಡ ಮೂಡಿಸಿದ್ದಾರೆ. ಇದೇ ತಿಂಗಳು ಚಿತ್ರ ತೆರೆಗೆ ಬರಲು ಸಜ್ಜಾಗಿದ್ದು ಈ ಕುರಿತು ಮಾಹಿತಿ ಹಂಚಿಕೊಳ್ಳಲು ಚಿತ್ರತಂಡ ಸುದ್ದಿಗೋಷ್ಠಿಗೆ ಹಾಜರಾಗಿತ್ತು.

‘ನಾಟಕದ ಮೂಲ ಆಶಯಕ್ಕೆ ಯಾವುದೇ ಧಕ್ಕೆಯಾಗದಂತೆ ಸಿನಿಮಾ ಮಾಡಿದ್ದೇವೆ. ರಂಗದ ಮೇಲೆ ಇದು ಇಪ್ಪತ್ತೈದು ನಿಮಿಷದ ನಾಟಕ. ತೆರೆಯ ಮೇಲೆ ಇದನ್ನು ಎಂಬತ್ತು ನಿಮಿಷದವರೆಗೆ ವಿಸ್ತರಿಸಿದ್ದೇವೆ’ ಎಂದು ಮಾಹಿತಿ ನೀಡಿದರು ಗುರುದತ್‌ ಶ್ರೀಕಾಂತ್‌.

ADVERTISEMENT

ನಿರ್ದೇಶನದ ಜೊತೆಗೆ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯದ ನೊಗವನ್ನು ಅವರೇ ಹೊತ್ತಿದ್ದಾರೆ. ಚಿತ್ರದಲ್ಲಿ ಸಸ್ಪೆನ್ಸ್‌ ಕೂಡ ಇದೆಯಂತೆ.

‘ವಾರ್ತಾ ಇಲಾಖೆಗೆ ಪ್ರಮಾಣ ಪತ್ರ ಸಲ್ಲಿಸಿ ಈ ನಾಟಕವನ್ನು ಸಿನಿಮಾ ಮಾಡುವ ಅನುಮತಿ ಪಡೆಯಲಾಯಿತು’ ಅವರು ಎಂದು ಹೇಳಿಕೊಂಡರು.

ನಟ ಸಂದೀಪ್‌ ಮಲಾನಿ ಚಿತ್ರದ ಮುಖ್ಯಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ. ‘ಮನೆಯಲ್ಲಿ ಸಿಟ್ಟು, ಗರ್ವ ಇರುವ ವ್ಯಕ್ತಿಯ ಪಾತ್ರ ನನ್ನದು. ನಿರ್ದೇಶಕರು ಹೇಳಿದಂತೆ ನಟಿಸಿದ್ದೇನೆ’ ಎಂದರು.

ಸಾಗರ, ಶಿವಮೊಗ್ಗ, ಭದ್ರಾವತಿಯ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಡಾ.ಚಿನ್ಮಯ ಎಂ. ರಾವ್‌ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಸಿದ್ದು ಜಿ.ಎಸ್‌. ಅವರದು. ಶುಭರಕ್ಷಾ, ವಾಣಿಶ್ರೀ ಭಟ್‌, ಮಾವಳ್ಳಿ ಕಾರ್ತಿಕ್‌, ಚಂದ್ರಕೀರ್ತಿ ತಾರಾಗಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.