ADVERTISEMENT

ತ್ರಿಭಾಷೆಯಲ್ಲಿ ನಮಿತಾ ಮಂದಸ್ಮಿತ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2018, 20:00 IST
Last Updated 9 ಡಿಸೆಂಬರ್ 2018, 20:00 IST
ನಮಿತಾ ಪ್ರಮೋದ್‌ 
ನಮಿತಾ ಪ್ರಮೋದ್‌    

ಮಲೆಯಾಳಂ ಕಿರುತೆರೆಯಲ್ಲಿ ನಟನೆಯ ಓಂಕಾರ ಕಲಿತು ಚಿತ್ರರಂಗಕ್ಕೆ ಕಾಲಿಟ್ಟ ಪ್ರತಿಭಾವಂತ ನಟಿ ನಮಿತಾ ಪ್ರಮೋದ್‌. ಈಗ ಮಾತೃಭಾಷೆಯೊಂದಿಗೆ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿಯೂ ಬಹುಬೇಡಿಕೆಯ ನಟಿ.

ಮಗುವಿನಂತೆ ಮುಗ್ಧವಾದ ನಗುವಿನಲ್ಲೇ ಸೆಳೆಯುವ ಈ ಸುಂದರಿಗೆ ಈಗಿನ್ನೂ 22ರ ಹರೆಯ. ಬಾಲ್ಯದಿಂದಲೂ ನಟನೆಯೆಡೆಗೆ ಸೆಳೆತ. ಏಳನೇ ತರಗತಿಯಲ್ಲಿರುವಾಗಲೇ ‘ವೇಲಾಂಕಣಿ ಮಾತಾವು’ ಧಾರಾವಾಹಿಯಲ್ಲಿ ಮಾತಾವು ಪಾತ್ರವನ್ನು ಸಮರ್ಥವಾಗಿ ನಿಭಾಯಿಸಿದ್ದರು. ನಂತರ ‘ಅಮ್ಮೆ ದೇವಿ’, ‘ಎಂಟೆ ಮಾನಸ ಪುತ್ರಿ’ಯಲ್ಲಿಯೂ ಸಿಕ್ಕಿದ್ದು ನಾಯಕಿ ಪಾತ್ರಗಳೇ.

ಒಂದೆಡೆ ಬಣ್ಣದ ಲೋಕದ ಆಕರ್ಷಣೆ ಇನ್ನೊಂದೆಡೆಓದು ಮುಖ್ಯ ಎಂಬ ದೂರದೃಷ್ಟಿಯ ಲೆಕ್ಕಾಚಾರ. ಗೊಂದಲದಲ್ಲಿ ಭವಿಷ್ಯದ ದಾರಿ ತಪ್ಪುವುದು ಬೇಡ ಎಂದು ಗಟ್ಟಿ ತೀರ್ಮಾನ ತೆಗೆದುಕೊಂಡ ತಂದೆ ಪ್ರಮೋದ್‌ ಮತ್ತು ತಾಯಿ ಇಂದು, ಮಗಳಿಗೆ ಓದೇ ಮುಖ್ಯ ಎಂದು ತಿಳಿಹೇಳಿದರು. ಆದರೆ ಒಂದಾದ ಮೇಲೊಂದರಂತೆ ಕಾಲ್‌ಶೀಟ್‌ ತಂದ ನಿರ್ದೇಶಕರು, ನಿರ್ಮಾಪಕರನ್ನು ನಿರಾಸೆಗೊಳಿಸಲಾಗದೆ ಧಾರಾವಾಹಿಗಳಲ್ಲಿ ನಟಿಸಲೇಬೇಕಾಯಿತು. 2006ರಿಂದ 2010ರವರೆಗೂ ನಿರಂತರವಾಗಿ ಕಿರುತೆರೆಯಲ್ಲಿ ಕಾಣಿಸಿಕೊಂಡ ನಮಿತಾ, ಮಲೆಯಾಳಿಗಳ ಮನೆಮಾತಾಗಿಬಿಟ್ಟರು.

ADVERTISEMENT

2014ರಲ್ಲಿ ಪದವಿ ಮುಗಿಸುವ ಹೊತ್ತಿಗೆ ಮಲೆಯಾಳಂ ಚಿತ್ರರಂಗದ ಮುದ್ದಿನ ಕಣ್ಮಣಿಯೂ ಆಗಿಬಿಟ್ಟಿದ್ದರು. ಅವರು ಮಾಲಿವುಡ್‌ಗೆ ಕಾಲಿಟ್ಟದ್ದು 2011ರಲ್ಲಿ. ಅದು ರಾಜೇಶ್‌ ಪಿಳ್ಳೈ ನಿರ್ದೇಶನದ ‘ಟ್ರಾಫಿಕ್‌’ ಸಿನಿಮಾ. ಸಿಕ್ಕಿದ್ದು ಸಣ್ಣ ಪಾತ್ರವಾದರೂ ನಮಿತಾ ಅವರ ಸಿನಿಪಯಣಕ್ಕೆ ಒಳ್ಳೆಯ ಬ್ರೇಕ್‌ ಕೊಟ್ಟ ಚಿತ್ರವದು. ಅವರು ಮಾತೃಭಾಷೆಯಲ್ಲಿ ಪೂರ್ಣಪ್ರಮಾಣದ ನಾಯಕಿಯಾಗಿ ಕಾಣಿಸಿಕೊಂಡಿದ್ದು 2012ರಲ್ಲಿ. ಮುಂದೆ ಮಾಲಿವುಡ್‌ಮತ್ತು ತಮಿಳು ಚಿತ್ರರಂಗದಲ್ಲಿ ಕೈತುಂಬಾ ಅವಕಾಶಗಳು ಅವರನ್ನು ಅರಸಿ ಬಂದವು. 2013 ಮತ್ತು 2014 ಅವರ ಪಾಲಿಗೆ ಸುವರ್ಣ ವರ್ಷಗಳೆನ್ನಬಹುದು. ನಂತರ ತೆಲುಗು ಚಿತ್ರರಂಗಕ್ಕೂ ಪ್ರವೇಶ ಪಡೆದ ನಮಿತಾ ಬಿಡುವಿಲ್ಲದ ನಟಿ.

‘ಅಮರ್‌ ಅಕ್ಬರ್‌ ಅಂತೋಣಿ’ ಚಿತ್ರದಲ್ಲಿ ನೃತ್ಯಗಾರ್ತಿಯಾಗಿ ಅವರು ನಟಿಸಿದ ಪರಿ ಮರೆಯಲಾಗದು. ರಂಗಕರ್ಮಿ ನಾದಿರ್‌ ಶಾ ನಿರ್ದೇಶನದ ಈ ಚಿತ್ರದಲ್ಲಿ ಪೃಥ್ವಿರಾಜ್‌, ಜಯಸೂರ್ಯ ಮತ್ತು ಇಂದ್ರಜಿತ್‌ ನಾಯಕರಾಗಿದ್ದರು. ಚಿತ್ರರಂಗದ ಜೊತೆಗೆನಮಿತಾ ಜಾಹೀರಾತು ಕ್ಷೇತ್ರದಲ್ಲಿಯೂ ಮಿಂಚಿದ್ದಾರೆ.

ಫ್ಯಾಷನ್‌ ಮತ್ತು ಟ್ರೆಂಡ್‌ ಮಾತು ಬಂದಾಗ ತಮ್ಮನ್ನು ನೆನಪಿಸಿಕೊಳ್ಳುವಂತಿರಬೇಕು ಎಂಬುದು ನಮಿತಾ ಬಯಸುತ್ತಾರೆ. ಅದಕ್ಕಾಗಿ ತಮ್ಮ ಪ್ರತಿ ಚಿತ್ರದಲ್ಲಿಯೂ ಉಡುಗೆ ತೊಡುಗೆಗಳು ವಿಭಿನ್ನ ಮತ್ತು ಅತ್ಯಾಕರ್ಷಕವಾಗಿರಬೇಕು ಎಂಬುದು ಅವರ ಚಿಂತನೆ. ಗೆಟಪ್‌, ಉಡುಗೆ ತೊಡುಗೆಗಳು ಪುನರಾವರ್ತನೆಯಾಗದಂತೆ ಅವರು ಎಚ್ಚರ ವಹಿಸುವುದು ಇದೇ ಕಾರಣಕ್ಕೆ ಅಂತೆ.

ನಮಿತಾಗೆ ಸಾಕು ನಾಯಿಗಳೆಂದರೆ ಇಷ್ಟ. ಚಿತ್ರೀಕರಣದ ಮಧ್ಯೆ ಬಿಡುವು ಮಾಡಿಕೊಂಡು ತಮ್ಮ ನಾಯಿ ‘ಪೊಪ್ಪೊ’ ಜೊತೆ ಮಾತನಾಡಿದರೆ ಅವರಿಗೆ ಹೊಸ ಚೈತನ್ಯ ಬರುತ್ತದೆಯಂತೆ!

ತ್ರೀಡಿ ಸಿನಿಮಾದ ಹುಚ್ಚು
ಪ್ರತಿಯೊಬ್ಬ ಕಲಾವಿದರಿಗೂ ನಿರ್ದಿಷ್ಟ ಬಗೆಯ ಪಾತ್ರ ಅಥವಾ ಚಿತ್ರದಲ್ಲಿ ನಟಿಸುವ ಮಹತ್ವಾಕಾಂಕ್ಷೆ ಇರುತ್ತದೆ. ನಮಿತಾ ಕೂಡಾ ಇದಕ್ಕೆ ಹೊರತಾಗಿಲ್ಲ. ತ್ರೀಡಿ ಅನಿಮೇಷನ್‌ ಸಿನಿಮಾಗಳಲ್ಲಿ ನಟಿಸುವುದು ಅವರ ಕನಸು. ‘ಅವತಾರ್‌’ ಸಿನಿಮಾವನ್ನು ಚಿತ್ರಮಂದಿರದಲ್ಲಿ ವೀಕ್ಷಿಸುವಾಗ, ‘ಅಬ್ಬಾ ಇದನ್ನೆಲ್ಲ ಹೇಗೆ ಮಾಡುತ್ತಾರಪ್ಪ, ನನಗೂ ಇಂತಹ ಅವಕಾಶ ಸಿಕ್ಕಿದ್ದರೆ’ ಎಂದು ಆಸೆಪಟ್ಟಿದ್ದರಂತೆ.

ಮಾಲಿವುಡ್‌ ಹೆಸರಾಂತ ಲೇಖಕ ಮತ್ತು ನಿರ್ದೇಶಕರಾದ ರಫಿ ತಮ್ಮ ‘ಪ್ರೊಫೆಸರ್‌ ಡಿಂಕನ್‌’ ತ್ರೀಡಿ ಚಿತ್ರಕ್ಕೆ ಆಫರ್‌ ಮಾಡಿದಾಗ ನಮಿತಾಗೆ ನಂಬಲು ಆಗಲಿಲ್ಲವಂತೆ. ‘ಇದು ತ್ರೀಡಿ ಚಿತ್ರವೇ ತಾನೆ?’ ಎಂದು ಪದೇ ಪದೇ ರಫಿ ಅವರನ್ನು ವಿಚಾರಿಸಿದ್ದರಂತೆ. ಈ ಚಿತ್ರವನ್ನು ತ್ರೀಡಿ ಕ್ಯಾಮೆರಾದಲ್ಲೇ ಚಿತ್ರೀಕರಿಸಿರುವುದು ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.