ADVERTISEMENT

‘ನಮ್ಮ ಪ್ರೀತಿಯ ಶಾಲೆ’ಗೆ ಮುಹೂರ್ತ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2020, 10:23 IST
Last Updated 3 ಸೆಪ್ಟೆಂಬರ್ 2020, 10:23 IST
ನಮ್ಮ ಪ್ರೀತಿಯ ಶಾಲೆ ಚಿತ್ರದ ಪೋಸ್ಟರ್‌
ನಮ್ಮ ಪ್ರೀತಿಯ ಶಾಲೆ ಚಿತ್ರದ ಪೋಸ್ಟರ್‌   

ಸರ್ಕಾರಿ ಶಾಲೆ ಮುಚ್ಚದಂತೆ ಉಳಿಸಿಕೊಳ್ಳಲು ಮಕ್ಕಳು, ಪೋಷಕರು ಹಾಗೂ ಶಿಕ್ಷಕರು ನಡೆಸುವ ಹೋರಾಟದ ಕಥೆಯನ್ನು ರಿಷಬ್‌ ಶೆಟ್ಟಿ ನಿರ್ದೇಶನದ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಚಿತ್ರ ಸಿನಿರಸಿಕರಿಗೆ ಮನಮುಟ್ಟುವಂತೆ ದಾಟಿಸಿತ್ತು. ಈಗ ಅಂತದ್ದೇ ಕಥೆಯ ಜಾಡಿನಲ್ಲಿ ಸಾಗುವ ‘ನಮ್ಮ ಪ್ರೀತಿಯ ಶಾಲೆ’ ಮಕ್ಕಳ ಚಿತ್ರ ಸ್ಯಾಂಡಲ್‌ವುಡ್‌ನಲ್ಲಿ ಸೆಟ್ಟೇರಿದೆ. ಚಿತ್ರದ ರಚನೆ, ನಿರ್ದೇಶನ ಹಾಗೂ ಜತೆಗೆಛಾಯಾಗ್ರಹಣ ಸೆಲ್ವಂ ಅವರದು.

ಇತ್ತೀಚೆಗಷ್ಟೇ ಬೆಂಗಳೂರಿನ ಮಿನಿ ಇಸ್ಕಾನ್‌ ಆವರಣದಲ್ಲಿರುವಲಕ್ಷೀ ನರಸಿಂಹ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ಸರಳವಾಗಿ ನಡೆಯಿತು. ಮಾಸ್ಟರ್ ಜಿವಿತ್‍ ಭೂಷಣ್ (ಸೆಲ್ವಂ ಪುತ್ರ) ಮತ್ತು ಮಾಸ್ಟರ್ ಮಹಾನಿಧಿ ನಟಿಸಿರುವಮೊದಲ ದೃಶ್ಯವನ್ನು ಚಿತ್ರೀಕರಿಸಲಾಯಿತು.ಬೆಂಗಳೂರು ಮತ್ತು ಕೋಲಾರದ ಸುತ್ತಮುತ್ತ ಚಿತ್ರೀಕರಣ ನಡೆಸಲು ಚಿತ್ರತಂಡ ಯೋಜಿಸಿದೆ.

ಮಕ್ಕಳ ಹಾಜರಾತಿ ಕ್ಷೀಣಿಸಿದೆ ಎಂದು ಸರ್ಕಾರಿ ಶಾಲೆಯೊಂದನ್ನು ಮುಚ್ಚಲಾಗುತ್ತದೆ. ಪೋಷಕರು ಗ್ರಾಮಪಂಚಾಯಿತಿ ಅಧ್ಯಕ್ಷರನ್ನು ಪ್ರಶ್ನಿಸಿದರೆ, ‘ಮುಖ್ಯಮಂತ್ರಿ ಆದೇಶದಂತೆ ಶಾಲೆ ಮುಚ್ಚಲಾಗಿದೆ’ ಎಂಬ ಕಾರಣ ನೀಡುತ್ತಾರೆ. ಇದನ್ನು ಕೇಳಿಸಿಕೊಂಡ ಇಬ್ಬರು ಮಕ್ಕಳು ಯಾರಿಗೂ ಹೇಳದೆ, ಕೇಳದೆ ಮುಖ್ಯಮಂತ್ರಿ ಭೇಟಿ ಮಾಡಲು ಬೆಂಗಳೂರಿನ ಹಾದಿ ಹಿಡಿಯುತ್ತಾರೆ. ಸಿಎಂ ಭೇಟಿ ಮಾಡುವ ಹಾದಿಯಲ್ಲಿ ಈ ಮಕ್ಕಳು ಏನೆಲ್ಲ ಕಷ್ಟ–ನಷ್ಟ ಅನುಭವಿಸುತ್ತಾರೆ ಎನ್ನುವ ಕಥಾಹಂದರವನ್ನು ಈ ಚಿತ್ರ ಒಳಗೊಂಡಿದೆ. ಮಕ್ಕಳ ಶ್ರಮ ಸಾರ್ಥಕವಾಗುತ್ತಾ? ಶಾಲೆ ಪುನಃ ಬಾಗಿಲು ತೆರೆಯುತ್ತಾ? ಎನ್ನುವುದು ಕ್ಲೈಮ್ಯಾಕ್ಸ್‌ ಸಿನಿಪ್ರೇಕ್ಷಕರ ಕುತೂಹಲ ಹೆಚ್ಚಿಸಲಿದೆಯಂತೆ.

ADVERTISEMENT

ಶ್ರೀ ಯೋಗ ಲಕ್ಷೀನರಸಿಂಹ ಸ್ವಾಮಿ ಕಂಬೈನ್ಸ್ ಬ್ಯಾನರ್‌ನಡಿಹೈದರಾಬಾದ್‍ನ ವೈ.ಆರ್. ವೇಮಿರೆಡ್ಡಿ ಮತ್ತು ಸೆಲ್ವಂ ಬಂಡವಾಳ ಹೂಡಿದ್ದಾರೆ. ತಾರಾಗಣದಲ್ಲಿ ಅಚ್ಯುತಕುಮಾರ್, ದತ್ತಣ್ಣ, ಕೆಜಿಎಫ್ ಚಿತ್ರ ಖ್ಯಾತಿಯ ಕೃಷ್ಣೋಜಿರಾವ್ ಇದ್ದಾರೆ. ಚಿತ್ರದಲ್ಲಿನಮುಖ್ಯಮಂತ್ರಿ ಪಾತ್ರಕ್ಕೆ ಸ್ಟಾರ್ ನಟರೊಬ್ಬರನ್ನು ಕರೆತರಲು ಚಿತ್ರತಂಡ ಸಿದ್ಧತೆಯಲ್ಲಿದೆ.ಎರಡು ಹಾಡುಗಳಿಗೆ ಪಳನಿ ಡಿ.ಸೇನಾಪತಿ ಸಂಗೀತ ಸಂಯೋಜನೆ ಇದೆ. ಸಂಕಲನ ಕೆ.ಎಂ.ಪ್ರಕಾಶ್, ಸಂಭಾಷಣೆ ಶಿವತೇಜಸ್, ನೃತ್ಯ ಹರಿಕೃಷ್ಣ, ಶ್ರೀಶೈಲಂ ಅವರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.