ADVERTISEMENT

ಜ. 31ಕ್ಕೆ ‘ನಮೋ’ ಸಿನಿಮಾ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 23 ಜನವರಿ 2020, 11:29 IST
Last Updated 23 ಜನವರಿ 2020, 11:29 IST

ಹುಬ್ಬಳ್ಳಿ: ಹೊಸ ಪ್ರತಿಭೆಗಳು ಸೇರಿ ನಿರ್ಮಿಸಿರುವ ‘ನಮೋ’ ಸಿನಿಮಾ ಜ. 31ಕ್ಕೆ ರಾಜ್ಯದಾದ್ಯಂತ ಬಿಡುಗಡೆಯಾಗುತ್ತಿದೆ. ಚಿತ್ರದ ಪ್ರಚಾರಾರ್ಥವಾಗಿ ಹುಬ್ಬಳ್ಳಿಗೆ ಬಂದಿದ್ದ ಚಿತ್ರತಂಡ, ತಮ್ಮ ಚಿತ್ರದ ಬಗ್ಗೆ ಹಲವು ಮಾಹಿತಿಗಳನ್ನು ಹಂಚಿಕೊಂಡಿತು.

‘ಸ್ಕ್ರಿಫ್ಟ್ ಕೆಲಸದಲ್ಲಿ ಹಾಗೂ ಸಣ್ಣ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ನಾನು ಮೊದಲ ಸಲ ಆ್ಯಕ್ಷನ್ ಕಟ್ ಹೇಳುವ ಜತೆಗೆ, ಮುಖ್ಯ ಪಾತ್ರದಲ್ಲೂ ಕಾಣಿಸಿಕೊಂಡಿದ್ದೇನೆ’ ಎಂದರು ನಿರ್ದೇಶಕ ಪುಟ್ಟರಾಜ ಸ್ವಾಮಿ.

‘ಮಾಧ್ಯಮಗಳಲ್ಲಿ ಪ್ರಕಟವಾಗುವ ಸುದ್ದಿಗಳೇ ಕಥೆಗೆ ಮೂಲ ಪ್ರೇರಣೆ. ಎಲ್ಲರೂ ಒಂದಾದರೆ ದೇಶ ಸುಭದ್ರ ಎನ್ನುವುದು ಚಿತ್ರದ ಒನ್‌ಲೈನ್ ಸ್ಟೋರಿ’ ಎಂದ ಅವರು, ‘ಪ್ರಧಾನಿ ಮೋದಿ ಅವರ ತತ್ವ –ಸಿದ್ಧಾಂತಗಳೂ ಚಿತ್ರವನ್ನು ಪ್ರಭಾವಿಸಿವೆ’ ಎಂದು ಸಿನಿಮಾದ ಶೀರ್ಷಿಕೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ADVERTISEMENT

‘ಚಿತ್ರ ಬಿಡುಗಡೆ ಹಂತದವರೆಗೆ ಬರಲು ಬೆನ್ನೆಲುಬಾಗಿ ನಿಂತ ವೆಂಕಣ್ಣ ಕರಡಿ ಕೂಡ ಚಿತ್ರದಲ್ಲಿ ಪಾತ್ರವೊಂದನ್ನು ನಿರ್ವಹಿಸಿದ್ದಾರೆ. ನಾಯಕಿಯಾಗಿ ರಶ್ಮಿತಾ ಗೌಡ ಕಾಣಿಸಿಕೊಂಡಿದ್ದಾರೆ’ ಎಂದರು.

ನಿರ್ಮಾಪಕ ಮಧುಸೂದನ್ ಮಾತನಾಡಿ, ‘ಕಥೆಯೇ ಚಿತ್ರ ನಿರ್ಮಿಸಲು ಪ್ರೇರಣೆ. ಚಿತ್ರದಲ್ಲಿ ನಾಯಕಿ ಸೇರಿ ಐದು ಪಾತ್ರಗಳು ಪ್ರಮುಖವಾಗಿವೆ. ಹಾಗಾಗಿ, ಇಲ್ಲಿ ಕಥೆಯೇ ನಾಯಕನಿದ್ದಂತೆ. ಶಕ್ತಿ ಶೇಖರ್ ಸಿನಿಮಾಟೊಗ್ರಫಿಯಲ್ಲಿ ಚಿತ್ರ ಚನ್ನಾಗಿ ಮೂಡಿ ಬಂದಿದೆ. ಸಿನಿಮಾ ರಾಜ್ಯದಾದ್ಯಂತ 60 ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ’ ಎಂದು ಹೇಳಿದರು.

‘ಮೊದಲ ಸಲ ಬೆಳ್ಳಿತೆರೆ ನಟನೆಗೆ ಅವಕಾಶ ಕೊಟ್ಟಿದ್ದಕ್ಕಾಗಿ ನಿರ್ದೇಶಕರು ಹಾಗೂ ನಿರ್ಮಾಪಕರಿಗೆ’ ಹುಬ್ಬಳ್ಳಿಯ ನಟ ರಾಮ್ ಶರ್ಮಾ ಕೃತಜ್ಞತೆ ಸಲ್ಲಿಸಿದರು.

ಸಂಗೀತ ನಿರ್ದೇಶಕ ಸಾಯಿ ಸರ್ವೇಶ್, ‘ಚಿತ್ರದಲ್ಲಿ 6 ಹಾಡುಗಳಿವೆ. ಸಂಗೀತ ನಿರ್ದೇಶನದ ಜತೆಗೆ, ಸಾಹಿತ್ಯದ ಹೊಣೆಯನ್ನು ನಿರ್ವಹಿಸಿದ್ದೇನೆ’ ಎಂದು ಹೇಳಿದರು.

ನಟರಾದ ಭೈರವ, ಮಣಿಕಂಠ, ಮಹೇಶ್‌ರಾಜ್, ರವಿಚಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.