ADVERTISEMENT

‘ನಾನು ಮತ್ತು ಗುಂಡ–2’ ಶೀರ್ಷಿಕೆ ಗೀತೆ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 2 ಮೇ 2025, 1:25 IST
Last Updated 2 ಮೇ 2025, 1:25 IST
ಪ್ರೇಮ್‌ 
ಪ್ರೇಮ್‌    

ರಘುಹಾಸನ್‌ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ‘ನಾನು ಮತ್ತು ಗುಂಡ -2’ ಚಿತ್ರದ ಶೀರ್ಷಿಕೆ ಗೀತೆಯನ್ನು ನಿರ್ದೇಶಕ ಪ್ರೇಮ್‌ ಇತ್ತೀಚೆಗೆ ಬಿಡುಗಡೆಗೊಳಿಸಿದರು.  

2020ರಲ್ಲಿ ತೆರೆಕಂಡಿದ್ದ ಚಿತ್ರದ ಮೊದಲ ಭಾಗದಲ್ಲಿ ನಟ ಶಿವರಾಜ್ ಕೆ.ಆರ್. ಪೇಟೆ ನಾಯಕನಾಗಿ ನಟಿಸಿದ್ದರು. ಅದರ ಮುಂದುವರಿದ ಭಾಗವಾದ ಈ ಚಿತ್ರದಲ್ಲಿ ರಾಕೇಶ್ ಅಡಿಗ ನಾಯಕನಾಗಿ ಬಣ್ಣಹಚ್ಚಿದ್ದು, ರಚನಾ ಇಂದರ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. 

‘ರಘು ನನ್ನ ಜೊತೆ ಹಲವು ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒಂದು ನಾಯಿಯನ್ನು ಪಳಗಿಸಿ ಅದರಿಂದ ನಟನೆಯನ್ನು ತೆಗಿಸುವುದು ಸುಲಭದ ಮಾತಲ್ಲ. ಆರ್.ಪಿ.ಪಟ್ನಾಯಕ್ ಅವರು ಮಾಡಿರುವ ‘ಎಕ್ಸ್‌ಕ್ಯೂಸ್‌ ಮಿ’ ಚಿತ್ರದ ಹಾಡುಗಳು ಇವತ್ತಿಗೂ ಹಸಿರಾಗಿವೆ. ಅವರೇ ಈ ಚಿತ್ರಕ್ಕೂ ಸಂಗೀತ ಸಂಯೋಜಿಸಿದ್ದಾರೆ. ಶೀರ್ಷಿಕೆ ಗೀತೆಯೇ ಸಿನಿಮಾದ ಕಥೆ ಹೇಳಿದೆ’ ಎಂದರು ಪ್ರೇಮ್‌. 

ADVERTISEMENT

ಚಿತ್ರದ 6 ಹಾಡುಗಳಿಗೆ ಆರ್.ಪಿ.ಪಟ್ನಾಯಕ್ ಸಂಗೀತ ಸಂಯೋಜಿಸಿದ್ದಾರೆ. ‘ಚಿತ್ರದ ಫಸ್ಟ್ ಕಾಪಿ ಸಿದ್ಧವಾಗಿದ್ದು, ಸದ್ಯದಲ್ಲೇ ಸೆನ್ಸಾರ್‌ಗೆ ಹೋಗಲಿದೆ. ಶೀಘ್ರದಲ್ಲೇ ಇನ್ನೊಂದು ಹಾಡು ಹಾಗೂ ಟ್ರೇಲರ್‌ ಬಿಡುಗಡೆ ಮಾಡುತ್ತೇವೆ’ ಎಂದರು ರಘು. 

ಊಟಿ, ಶಿವಮೊಗ್ಗ, ತೀರ್ಥಹಳ್ಳಿ, ಬಾಳೆಹೊನ್ನೂರು ಸುತ್ತಮುತ್ತ ಚಿತ್ರದ ಶೂಟಿಂಗ್ ನಡೆಸಲಾಗಿದ್ದು, ತನ್ವಿಕ್ ಛಾಯಾಚಿತ್ರಗ್ರಹಣ ಸಿನಿಮಾಗಿದೆ. ಕನ್ನಡ, ತೆಲುಗು, ಹಿಂದಿ ಸೇರಿ ಐದು ಭಾಷೆಗಳಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ. ಸಿಂಬು ಹಾಗೂ ಬಂಟಿ ಎಂಬ ಹೆಸರಿನ ಎರಡು ಶ್ವಾನಗಳು ಈ ಸಿನಿಮಾದಲ್ಲಿ ನಟಿಸಿವೆ. ಪೊಯೆಮ್ ಪಿಕ್ಚರ್ಸ್ ಲಾಂಛನದಲ್ಲಿ ಈ ಚಿತ್ರ ತಯಾರಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.