ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಜೀವನಾಧರಿತ ಚಿತ್ರ ತೆರೆಗೆ ಬರಲಿದೆ. ಸಿಲ್ವರ್ ಕ್ಯಾಸ್ಟ್ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ವೀರ್ ರೆಡ್ಡಿ ಎಂ. ನಿರ್ಮಿಸುತ್ತಿರುವ ಈ ಚಿತ್ರಕ್ಕೆ 'ಮಾ ವಂದೇ' ಎಂದು ಹೆಸರಿಡಲಾಗಿದೆ.
ಅವರ ಜನ್ಮ ದಿನದ ಅಂಗವಾಗಿ ಸಿನಿಮಾದ ಪೋಸ್ಟರ್ ಅನ್ನು ರಿವೀಲ್ ಮಾಡಲಾಗಿದೆ. ಚಿತ್ರದಲ್ಲಿ ಮಲಯಾಳದ ನಟ ಉಣ್ಣಿ ಮುಕುಂದನ್ ನರೇಂದ್ರ ಮೋದಿ ಅವರ ಪಾತ್ರದಲ್ಲಿ ನಟಿಸಲಿದ್ದಾರೆ.
ಈ ಬಗ್ಗೆ ನಟ ಉಣ್ಣಿ ಮುಕುಂದನ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಕ್ರಾಂತಿ ಕುಮಾರ್ ನಿರ್ದೇಶನದ 'ಮಾ ವಂದೇ' ಚಿತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪಾತ್ರವನ್ನು ನಾನು ನಿರ್ವಹಿಸುತ್ತಿದ್ದೇನೆ ಎಂಬ ವಿಚಾರವನ್ನು ಹಂಚಿಕೊಳ್ಳಲು ನನಗೆ ಹರ್ಷವಾಗುತ್ತಿದೆ.
ಅಹಮದಾಬಾದ್‌ನಲ್ಲಿ ಬೆಳೆದ ನನಗೆ, ಬಾಲ್ಯದಲ್ಲಿ ಅವರು(ಮೋದಿ) ನಮ್ಮ ಮುಖ್ಯಮಂತ್ರಿ ಎಂದು ತಿಳಿದಿತ್ತು. ವರ್ಷಗಳ ನಂತರ, 2023ರ ಏಪ್ರಿಲ್‌ನಲ್ಲಿ ಅವರನ್ನು ವೈಯಕ್ತಿಕವಾಗಿ ಭೇಟಿಯಾಗುವ ಸೌಭಾಗ್ಯ ಸಿಕ್ಕಿತು. ಆದು ನನ್ನ ಪಾಲಿಗೆ ಮರೆಯಲಾಗದ ಕ್ಷಣ ಎಂದಿದ್ದಾರೆ.
ಒಬ್ಬ ನಟನಾಗಿ, ಈ ಪಾತ್ರವನ್ನು ನಿರ್ವಹಿಸುವುದು ಕಷ್ಟವಾದರೂ, ಸ್ಪೂರ್ತಿದಾಯಕವಾಗಿದೆ. ಅವರ ರಾಜಕೀಯ ಪ್ರಯಾಣವು ಅದ್ಭುತವಾಗಿದೆ. ಆದರೆ ಈ ಚಿತ್ರದಲ್ಲಿ, ರಾಜಕಾರಣಿಯನ್ನು ಮೀರಿದ ವ್ಯಕ್ತಿಯನ್ನು, ವಿಶೇಷವಾಗಿ ಆ ಮಹಾನ್ ಚೈತನ್ಯವನ್ನು ರೂಪಿಸಿದ ಅವರ ತಾಯಿಯೊಂದಿಗಿನ ಬಾಂಧವ್ಯವನ್ನು ಭಾವನಾತ್ಮಕವಾಗಿ ತೋರಿಸುವ ಆಲೋಚನೆ ಇದೆ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.