ADVERTISEMENT

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತ ‘ಕಂದೀಲು’ ಚಿತ್ರ ತೆರೆಗೆ ಬರಲು ಸಿದ್ಧ 

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2025, 0:30 IST
Last Updated 11 ಅಕ್ಟೋಬರ್ 2025, 0:30 IST
ಚಿತ್ರತಂಡ
ಚಿತ್ರತಂಡ   

ಈಗಾಗಲೇ ಹಲವು ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡು, ಪ್ರಶಸ್ತಿ ಪಡೆದುಕೊಂಡಿರುವ ‘ಕಂದೀಲು’ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ಯಶೋಧ ಕೊಟ್ಟುಕತ್ತಿರ ನಿರ್ದೇಶನದ ಚಿತ್ರಕ್ಕೆ 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಕೂಡ ಲಭಿಸಿತ್ತು.

‘ಏಳೆಂಟು ವರ್ಷಗಳಿಂದ ಚಿತ್ರರಂಗದಲ್ಲಿ ಗುರುತಿಸಿಕೊಂಡು ಎರಡು ಕೊಡವ, ಎರಡು ಕನ್ನಡ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದೇನೆ. ಸುಮನ್ ನಗರ್‌ಕರ್ ನಟನೆಯ ‘ರಂಗಪವ್ರೇಶ’ ಚಿತ್ರದ ಮೂಲಕ ನಿರ್ದೇಶಕಿಯಾಗಿ ಪರಿಚಯವಾದೆ. ಪ್ರೇಮಾ ಕಾರಂತ್, ಕವಿತಾ ಲಂಕೇಶ್ ನಂತರ ರಾಷ್ಟ್ರ ಪ್ರಶಸ್ತಿ ಪಡೆದ ನಿರ್ದೇಶಕಿ ಅಂತ ಹೇಳಿಕೊಳ್ಳಲು ಖುಷಿಯಾಗುತ್ತದೆ. ‘ಆಯ್ದ ಹೆಣ’ ಎನ್ನುವ ಕಥೆ ಆಧರಿಸಿದ ಚಿತ್ರವಿದು. 2008ರಲ್ಲಿ ನಡೆದ ಸತ್ಯ ಘಟನೆ ಆಧಾರಿತವಾಗಿದೆ. ಅಂದಿನ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಭಾರತ ಮೂಲದವರೊಬ್ಬರ ಹೆಣವನ್ನು ವಿದೇಶದಿಂದ ತರಿಸಿಕೊಡಲು ಸಹಾಯ ಮಾಡಿದ್ದರು. ಆದರೂ ಹೆಣ ತಲುಪುವುದು ವಿಳಂಬವಾಗಿತ್ತು. ಅಂತಹ ಸಮಯದಲ್ಲಿ ಮನೆಯ ಪರಿಸ್ಥಿತಿ, ಧಾರ್ಮಿಕ ಹಾಗೂ ರಾಜಕೀಯ ಸ್ಥಿತಿಗಳು ಹೇಗೆ ಇರುತ್ತವೆ ಎಂಬುದೇ ಚಿತ್ರಕಥೆ’ ಎಂದರು ನಿರ್ದೇಶಕಿ.

ಪ್ರಕಾಶ್ ಕಾರ್ಯಪ್ಪ ಬಂಡವಾಳ ಹೂಡಿದ್ದಾರೆ. ನಾಗೇಶ್.ಎನ್ ಸಂಭಾಷಣೆ ಜೊತೆಗೆ ಸಂಕಲನವನ್ನೂ ನಿಭಾಯಿಸಿದ್ದಾರೆ. ಸುರೇಶ್ ಸಂಗೀತ, ಪಿ.ವಿ.ಆರ್.ಸ್ವಾಮಿ ಛಾಯಾಚಿತ್ರಗ್ರಹಣವಿದೆ. ಪ್ರಭಾಕರ.ಬ.ಕುಂದರ, ವನಿತಾ ರಾಜೇಶ್, ಖುಷಿ ಕಾವೇರಮ್ಮ ಮುಂತಾದವರು ಚಿತ್ರದಲ್ಲಿದ್ದಾರೆ. ಮುಂದಿನ ತಿಂಗಳು ಚಿತ್ರವನ್ನು ತೆರೆಗೆ ತರಲು ತಂಡ ಆಲೋಚಿಸಿದೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.