ADVERTISEMENT

71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ಶಾರುಕ್– ವಿಕ್ರಾಂತ್ ‘ಅತ್ಯುತ್ತಮ ನಟ’

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಆಗಸ್ಟ್ 2025, 13:37 IST
Last Updated 1 ಆಗಸ್ಟ್ 2025, 13:37 IST
   

ನವದೆಹಲಿ: 2023ನೇ ಸಾಲಿನ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಶುಕ್ರವಾರ ಘೋಷಿಸಲಾಗಿದ್ದು, ಬಾಲಿವುಡ್‌ ನಟ ಶಾರುಕ್‌ ಖಾನ್‌ ಮತ್ತು ವಿಕ್ರಾಂತ್‌ ಮೇಸಿ ಅವರು ‘ಆತ್ಯುತ್ತಮ ನಟ’ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ. 

‘ಮಿಸ್ಟ್ರೆಸ್ ಚಟರ್ಜಿ ವರ್ಸಸ್‌ ನಾರ್ವೆ’ ಚಿತ್ರದ ಅಭಿನಯಕ್ಕಾಗಿ ಬಾಲಿವುಡ್‌ ನಟಿ ರಾಣಿ ಮುಖರ್ಜಿ ಅವರು ‘ಅತ್ಯುತ್ತಮ ನಟಿ’ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಶಾರುಕ್‌ ಅವರು ತಮ್ಮ 37 ವರ್ಷಗಳ ವೃತ್ತಿಜೀವನದಲ್ಲಿ ಅತ್ಯುತ್ತಮ ನಟನೆಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದಿರುವುದು ಇದೇ ಮೊದಲು. ‘ಜವಾನ್‌’ ಚಿತ್ರದ ಅಭಿನಯಕ್ಕಾಗಿ ಅವರಿಗೆ ಈ ಗೌರವ ಸಂದಿದೆ. ವಿಕ್ರಾಂತ್‌ ಅವರು ‘ಟ್ವೆಲ್ತ್‌ ಫೇಲ್‌’ ಚಿತ್ರದ ಅಭಿನಯಕ್ಕೆ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ADVERTISEMENT

71ನೇ ರಾಷ್ಟ್ರೀಯ ಪ್ರಶಸ್ತಿ ಇದಾಗಿದ್ದು, ಪುರಸ್ಕೃತರ ಪಟ್ಟಿಯನ್ನು ತೀರ್ಪುಗಾರರ ಮಂಡಳಿಯ ಅಧ್ಯಕ್ಷ, ಚಲನಚಿತ್ರ ನಿರ್ಮಾಪಕ ಅಶುತೋಷ್ ಗೋವಾರಿಕರ್ ಘೋಷಿಸಿದರು.  

ವಿಧು ವಿನೋದ್ ಚೋಪ್ರಾ ನಿರ್ದೇಶನದ ‘ಟ್ವೆಲ್ತ್‌ ಫೇಲ್’ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು ಪಡೆದರೆ, ‘ದಿ ಕೇರಳ ಸ್ಟೋರಿ’ ಚಿತ್ರಕ್ಕಾಗಿ ಸುದಿಪ್ತೋ ಸೇನ್ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಪಡೆದರು.

ಚಿತ್ರ ನಿರ್ಮಾಪಕ ಕರಣ್ ಜೋಹರ್ ಅವರ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾಗೆ ಅತ್ಯುತ್ತಮ ಮನರಂಜನಾ ಸಿನಿಮಾ ಪ್ರಶಸ್ತಿ ಲಭಿಸಿದೆ. ಮೇಘನಾ ಗುಲ್ಜಾರ್ ಅವರ ‘ಸ್ಯಾಮ್ ಬಹಾದೂರ್‌’ ಸಿನಿಮಾ ರಾಷ್ಟ್ರೀಯ, ಸಾಮಾಜಿಕ ಮತ್ತು ಪರಿಸರ ಮೌಲ್ಯಗಳನ್ನು ಉತ್ತೇಜಿಸುವ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಪಡೆದುಕೊಂಡಿದೆ.

ಹಿಂದಿ ಸಿನಿಮಾಗಳು ಪ್ರಮುಖ ವಿಭಾಗಗಳಲ್ಲಿ ಪ್ರಾಬಲ್ಯ ಸಾಧಿಸಿದರೆ, ಪ್ರಾದೇಶಿಕ ಸಿನಿಮಾಗಳು ಅತ್ಯುತ್ತಮ ಪೋಷಕ ನಟ, ಪೋಷಕ ನಟಿ ಮತ್ತು ತಾಂತ್ರಿಕ ವಿಭಾಗಗಳಲ್ಲಿ ಹೆಚ್ಚು ಪ್ರಶಸ್ತಿಗಳನ್ನು ಗೆದ್ದುಕೊಂಡವು.

ಮಲಯಾಳಂ ಸಿನಿಮಾ ‘ಪೂಕ್ಕಳಂ’ನ ಅಭಿನಯಕ್ಕಾಗಿ ವಿಜಯರಾಘವನ್, ತಮಿಳು ಸಿನಿಮಾ ‘ಪಾರ್ಕಿಂಗ್‌’ನ ಅಭಿನಯಕ್ಕಾಗಿ ಮುತ್ತುಪೆಟ್ಟೈ ಸೋಮು ಭಾಸ್ಕರ್ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಯನ್ನು ಹಂಚಿಕೊಂಡರು.

ಮಲಯಾಳಂ ಚಿತ್ರ ‘ಉಳ್ಳೊಝುಕ್ಕ್’ನ ಅಭಿನಯಕ್ಕಾಗಿ ಊರ್ವಶಿ ಮತ್ತು ಗುಜರಾತಿ ಸಿನಿಮಾ ‘ವಶ್’ನ ಅಭಿನಯಕ್ಕಾಗಿ ಜಾನಕಿ ಬೋದೀವಾಲಾ ಅವರು ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಗೆದ್ದುಕೊಂಡರು.

ಕನ್ನಡದ ಅತ್ಯುತ್ತಮ ಚಿತ್ರ ‘ಕಂದೀಲು’:

ಕೆ.ಯಶೋಧ ಪ್ರಕಾಶ್ ನಿರ್ದೇಶನದ ‘ಕಂದೀಲು’ ಕನ್ನಡದ ಅತ್ಯುತ್ತಮ ಚಿತ್ರವಾಗಿ ಹೊರಹೊಮ್ಮಿದೆ. ಚಿದಾನಂದ ನಾಯ್ಕ್ ಅವರ ‘ಸೂರ್ಯಕಾಂತಿ ಹೂಗೆ ಮೊದಲು ಗೊತ್ತಾಗಿದ್ದು’ ಸಿನಿಮಾ ನಾನ್ ಫೀಚರ್‌ ವಿಭಾಗದಲ್ಲಿ ‘ಅತ್ಯುತ್ತಮ ಚಿತ್ರಕಥೆ’ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.

2023ನೇ ಸಾಲಿನ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರು:

ಅತ್ಯುತ್ತಮ ನಟ: ಶಾರುಖ್‌ ಖಾನ್‌(ಜವಾನ್‌), ವಿಕ್ರಾಂತ್‌ ಮ್ಯಾಸ್ಸೆ (12th ಫೇಲ್‌)

ಅತ್ಯುತ್ತಮ ನಟಿ: ರಾಣಿ ಮುಖರ್ಜಿ (ಮಿಸ್‌. ಚರ್ಟಜಿ ವರ್ಸಸ್‌ ನಾರ್ವೆ)

ಅತ್ಯುತ್ತಮ ನಿರ್ದೇಶಕ: ಸುದೀಪ್ತೊ ಸೇನ್ (ದಿ ಕೇರಳ ಸ್ಟೋರಿ)

ಅತ್ಯುತ್ತಮ ಚಲನಚಿತ್ರ: 12th ಫೇಲ್‌ (ಹಿಂದಿ)

ಅತ್ಯುತ್ತಮ ಮನೋರಂಜನಾ ಚಲನಚಿತ್ರ: ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ (ಹಿಂದಿ)

ಅತ್ಯುತ್ತಮ ಕನ್ನಡ ಚಿತ್ರ: ಕಂದೀಲು

ಅತ್ಯುತ್ತಮ ಪೋಷಕ ನಟ: ವಿಜಯ್‌ ರಾಘವನ್‌ (ಪೂಕ್ಕಾಲಂ) – ಮಲೆಯಾಳಂ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.