ADVERTISEMENT

ನೀತಾ ನಟನಾ ವೈಖರಿ

ಸತೀಶ ಬೆಳ್ಳಕ್ಕಿ
Published 7 ನವೆಂಬರ್ 2019, 19:45 IST
Last Updated 7 ನವೆಂಬರ್ 2019, 19:45 IST
ನೀತಾ ಅಶೋಕ್‌
ನೀತಾ ಅಶೋಕ್‌   

ಕಿರುತೆರೆಯಲ್ಲಿ ಸಿಕ್ಕ ಜನಪ್ರಿಯತೆಯನ್ನು ಬೆನ್ನಿಗಿಟ್ಟುಕೊಂಡು ಇದೇ ಮೊದಲಬಾರಿಗೆ ಕೋಸ್ಟಲ್‌ವುಡ್‌ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿರುವ ನೀತಾ ಅಶೋಕ್‌ ಕರಾವಳಿಯ ಚೆಲುವೆ. ಕುಂದಾಪುರ ಬಳಿಯ ಕೋಟದಲ್ಲಿ ಹುಟ್ಟಿ ಬೆಳೆದ ಹುಡುಗಿಗೆ, ಕಿರುತೆರೆ ‘ಭಾರತ ದರ್ಶನ’ ಮಾಡಿಸಿದೆ. ಹಾಗೆಯೇ, ‘ಜಬರ್‌ದಸ್ತ್‌ ಶಂಕರ’ ತುಳು ಸಿನಿಮಾ ಬಣ್ಣದ ಲೋಕದ ಮತ್ತೊಂದು ಮಜಲು ಪರಿಚಯಿಸಿದೆ.

ಕನ್ನಡ ಹಾಗೂ ಹಿಂದಿ ಧಾರಾವಾಹಿಗಳಲ್ಲಿ ನಟಿಸಿ ಮನೆಮಾತಾಗಿರುವ ಚೆಲುವೆ ನೀತಾ ಅಶೋಕ್‌, ಶುಕ್ರವಾರ ತೆರೆಗೆ ಬರುತ್ತಿರುವ ‘ಜಬರ್‌ದಸ್ತ್‌ ಶಂಕರ’ ಚಿತ್ರದಲ್ಲಿ ಹಳ್ಳಿ ಹುಡುಗಿ ಪಾತ್ರವನ್ನು ಬಿಂದಾಸ್‌ ಆಗಿ ನಿರ್ವಹಿಸಿದ್ದು, ಪ್ರೇಕ್ಷಕರಿಗೆ ಕಚಗುಳಿ ಇಡಲು ರೆಡಿಯಾಗಿದ್ದಾರೆ.

2014ರಲ್ಲಿ ಕಿರುತೆರೆಗೆ ಪ್ರವೇಶಿಸಿದ ನೀತಾ, ಕಲರ್ಸ್‌ ಕನ್ನಡದಲ್ಲಿ ಮೂಡಿಬಂದ ‘ಯಶೋದೆ’, ‘ನಾ ನಿನ್ನ ಬಿಡಲಾರೆ’, ‘ನೀಲಾಂಬರಿ’ ಧಾರಾವಾಹಿಗಳಲ್ಲಿ ಮುಖ್ಯಪಾತ್ರಗಳನ್ನು ನಿರ್ವಹಿಸಿದವರು. ಇದರ ಜತೆಗೆ ಡಿಡಿ ಕಿಸಾನ್‌ ಹಾಗೂ ಸೋನಿ ವಾಹಿನಿಗಳ ಧಾರಾವಾಹಿಗಳಿಗೂ ಬಣ್ಣ ಹಚ್ಚಿದ್ದಾರೆ.

ADVERTISEMENT

‘ನಾನು ಅಭಿನಯಿಸಿದ ಮೊದಲ ಧಾರಾವಾಹಿ ‘ಯಶೋದೆ’. ಇದು ಕರಾವಳಿ ಜನರನ್ನು ಬಹುವಾಗಿ ಸೆಳೆಯಿತು. ಏಕೆಂದರೆ, ಈ ಧಾರಾವಾಹಿಯ ಹೆಚ್ಚಿನ ಭಾಗ ಚಿತ್ರೀಕರಣಗೊಂಡಿದ್ದು ಮಂಗಳೂರು, ಪಡುಬಿದ್ರಿ, ಹೆಜಮಾಡಿ, ಉಡುಪಿ ಭಾಗದಲ್ಲಿ. ಹಾಗಾಗಿ ಇಲ್ಲಿನ ಜನರು ಈ ಧಾರಾವಾಹಿ ಜತೆಗೆ ಹೆಚ್ಚು ಕನೆಕ್ಟ್‌ ಆದರು. ಆಮೇಲೆ, ಡಿಡಿ ಕಿಸಾನ್‌ಗಾಗಿ 86 ಎಪಿಸೋಡ್‌ಗಳ ಒಂದು ಧಾರಾವಾಹಿ ಮಾಡಿದೆ. ಸೈನ್ಯ ಸೇರುವ ಕನಸು ಹೊತ್ತ ಯುವತಿಯ ಕತೆಯನ್ನು ಹೇಳುವ ಧಾರಾವಾಹಿ ಇದು. ತುಂಬ ಚೆನ್ನಾಗಿ ಮೂಡಿಬಂದಿತ್ತು. ಆಮೇಲೆ ಸೋನಿ ವಾಹಿನಿಯ ಕೆಲವೊಂದು ಕ್ರೈಂ ಎಪಿಸೋಡ್‌ಗಳಲ್ಲಿ ಕಾಣಿಸಿಕೊಂಡಿದ್ದೆ’ ಎಂದು ತಮ್ಮ ಕಿರುತೆರೆಯ ಹಾದಿಯನ್ನು ಬಿಚ್ಚಿಟ್ಟರು ಅವರು.

‘ಜಬರ್‌ದಸ್ತ್‌ ಶಂಕರ’ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿದ್ದು ಹೇಗೆ ಎಂಬ ಪ್ರಶ್ನೆಗೆ ನೀತಾ ಉತ್ತರಿಸಿದ್ದು ಹೀಗೆ:

‘ನೀಲಾಂಬರಿ’ ಧಾರಾವಾಹಿ ಮುಗಿದ ನಂತರ ‘ಜಬರ್‌ದಸ್ತ್‌ ಶಂಕರ’ ಸಿನಿಮಾದಲ್ಲಿ ನಟಿಸುವಂತೆ ಆಫರ್‌ ಬಂದಿತು. ನಾನು ಮತ್ತು ಅರ್ಜುನ್‌ ಕಾಪಿಕಾಡ್‌ ಒಂದೇ ಶಾಲೆಯಲ್ಲಿ ಓದಿದವರು. ಅವರು ನನ್ನ ಸೀನಿಯರ್‌ ಆಗಿದ್ದರು. ನಾನು ಕಿರುತೆರೆಯ ಕಲಾವಿದೆ ಆಗಿದ್ದರಿಂದ ಸಿನಿಮಾ ಮಾಡುವ ಬಗ್ಗೆ ಭಯವಂತೂ ಇತ್ತು. ಆದರೆ, ಅರ್ಜುನ್‌ ನನ್ನ ಗೆಳೆಯ ಆದ್ದರಿಂದ, ದೇವದಾಸ್‌ ಕಾಪಿಕಾಡ್‌ ಅವರೂ ಕೂಡ ಗೊತ್ತಿದ್ದರಿಂದ ಈ ಸಿನಿಮಾವನ್ನು ಒಪ್ಪಿಕೊಂಡೆ’.

‘ಈ ಸಿನಿಮಾದಲ್ಲಿನ ನನ್ನ ಪಾತ್ರ ತುಂಬ ಚಾಲೆಂಜಿಂಗ್‌ ಅನಿಸಿತು. ಲಾವಣ್ಯ ಪಾತ್ರವನ್ನು ವಿಭಿನ್ನವಾಗಿ ತೋರಿಸಿದ್ದಾರೆ. ಚಿತ್ರದಲ್ಲಿ ನನ್ನ ಪಾತ್ರಕ್ಕೆ ಮಾತು ಕಡಿಮೆ. ಭಾವಾಭಿವ್ಯಕ್ತಿ ವಿಚಾರವಾಗಿ ಆ ಪಾತ್ರದಲ್ಲಿ ಆಟವಾಡಲು ಸಾಕಷ್ಟು ಅವಕಾಶಗಳಿದ್ದವು. ಲಾವಣ್ಯ ಹಳ್ಳಿ ಹುಡುಗಿ. ಸದಾಕಾಲ ನಗುನಗುತ್ತಾ ಎಲ್ಲರೊಂದಿಗೂ ಮಜಾ ಮಾಡಿಕೊಂಡು ಇರುವ ಸ್ವಭಾವದವಳು. ಮನಸ್ಸಿಗೆ ಬಂದಿದ್ದನ್ನು ಹೇಳುವ ಗುಣದವಳು. ಪಕ್ಕಾ ಹಳ್ಳಿ ಹುಡುಗಿ ಪಾತ್ರ ನಿರ್ವಹಿಸಿದ್ದು ಖುಷಿ ಕೊಟ್ಟಿದೆ’ ಎಂದು ಚಿತ್ರದಲ್ಲಿನ ಪಾತ್ರದ ಬಗ್ಗೆ ಹೇಳುತ್ತಾರೆ ನೀತಾ.

ಕಿರುತೆರೆ ಮತ್ತು ಬೆಳ್ಳಿತೆರೆಯ ಕೆಲಸದಲ್ಲಿನ ವ್ಯತ್ಯಾಸ ಕುರಿತಂತೆ ನೀತಾ ಹೇಳುವುದು ಹೀಗೆ: ‘ದೇವದಾಸ್‌ ಕಾಪಿಕಾಡ್‌ ಅವರು ಒಂದು ಸಿನಿಮಾ ಕೈಗೆತ್ತಿಕೊಂಡರೆ ಅದರ ಚಿತ್ರೀಕರಣವನ್ನು ತುಂಬ ಬೇಗ ಮುಗಿಸುತ್ತಾರೆ. ಧಾರಾವಾಹಿಯಲ್ಲಿ ಒಂದು ದಿನಕ್ಕೆ 10–15 ಸನ್ನಿವೇಶಗಳನ್ನು ಚಿತ್ರೀಕರಣ ಮಾಡುತ್ತಾರೆ. ಸಿನಿಮಾದಲ್ಲಿ ಆದರೆ ಒಂದು ಅಥವಾ ಎರಡು ಸನ್ನಿವೇಶಗಳನ್ನು ಮಾತ್ರ ಚಿತ್ರೀಕರಿಸುತ್ತಾರೆ. ಆದರೆ, ಕಾಪಿಕಾಡ್‌ ಅವರು ದಿನವೊಂದಕ್ಕೆ 3–4 ಸೀನ್‌ಗಳನ್ನು ಚಿತ್ರೀಕರಿಸುತ್ತಿದ್ದರು. ಅವರದ್ದು ವೇಗದ ಚಿತ್ರೀಕರಣ ಆದ್ದರಿಂದ ಅಷ್ಟೊಂದು ವ್ಯತ್ಯಾಸ ಕಾಣಲಿಲ್ಲ’.

ಧಾರಾವಾಹಿಯಲ್ಲಿ ವಿಭಿನ್ನ ಪಾತ್ರಗಳಿಗೆ ಮೈಯೊಡ್ಡಿರುವ ನೀತಾಗೆ ಸಿನಿಮಾಗಳಲ್ಲಿ ಇಂತಹದ್ದೇ ಪಾತ್ರ ನಿರ್ವಹಿಸಬೇಕು ಎಂಬ ಆಸೆಗಳೇನಿಲ್ಲವಂತೆ. ಆದರೆ, ನಿರ್ವಹಿಸುವ ಪಾತ್ರಗಳು ಚಿಕ್ಕದಾಗಿದ್ದರೂ ಕೂಡ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯುವಂತೆ ಇರಬೇಕು ಹಾಗೂ ಸಿನಿಮಾ ನೋಡಿದ ಪ್ರೇಕ್ಷಕರು ನೀತಾ ಚೆನ್ನಾಗಿ ಅಭಿನಯಿಸುತ್ತಾಳೆ ಎಂದು ಕಮೆಂಟ್‌ ಮಾಡಬೇಕು ಎಂಬ ಆಸೆ ಹೊಂದಿದ್ದಾರೆ.

‘ಜಬರ್‌ದಸ್ತ್‌ ಶಂಕರ’ ಚಿತ್ರದ ಬಗ್ಗೆ ತುಂಬ ನಿರೀಕ್ಷೆಗಳಿವೆ. ತುಳು ಸಿನಿಮಾಗಳೆಂದರೆ ಕಾಮಿಡಿ ಸಿನಿಮಾ ಎಂದು ಬ್ರ್ಯಾಂಡ್‌ ಆಗಿಬಿಟ್ಟಿದೆ. ಆದರೆ, ಈ ಸಿನಿಮಾದಲ್ಲಿ ಕಾಮಿಡಿ, ಆ್ಯಕ್ಷನ್‌, ಎಮೋಷನ್‌ ಎಲ್ಲವೂ ಇವೆ. ನನಗೆ ಅನ್ನಿಸುವ ಮಟ್ಟಿಗೆ ಈವರೆಗೆ ತುಳುವಿನಲ್ಲಿ ಸೀರಿಯಸ್‌ ಜಾನರ್‌ನ ಸಿನಿಮಾ ಮೂಡಿಬಂದಿಲ್ಲ. ಆ ಕೊರತೆಯನ್ನು ‘ಜಬರ್‌ದಸ್ತ್‌ ಶಂಕರ’ ನೀಗಿಸಲಿದ್ದಾನೆ. ಚಿತ್ರದ ಕತೆ ಪ್ರೇಕ್ಷಕರ ಇಷ್ಟವಾಗುತ್ತದೆ. ಹಾಗೆಯೇ, ನನ್ನ ನಟನೆ ಕೂಡ ಸಹೃದಯಿ ವೀಕ್ಷಕರ ಎದೆಗಿಳಿಯುತ್ತದೆ’ ಎಂಬ ವಿಶ್ವಾಸ ವ್ಯಕ್ತಪಡಿಸುತ್ತಾರೆ ನೀತಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.