ADVERTISEMENT

‘ಜೊತೆಯಾಗಿರಲು’ ಹೊಸಬರ ದಂಡು

​ಪ್ರಜಾವಾಣಿ ವಾರ್ತೆ
Published 23 ಜುಲೈ 2020, 19:45 IST
Last Updated 23 ಜುಲೈ 2020, 19:45 IST
ಸತೀಶ್‌ ಕುಮಾರ್‌
ಸತೀಶ್‌ ಕುಮಾರ್‌   

ಹೊಸ ನಾಯಕ– ನಾಯಕಿ, ಹೊಸ ನಿರ್ದೇಶಕ, ಹೊಸ ನಿರ್ಮಾಪಕ ಹೀಗೆ ಎಲ್ಲರೂ ಬಹುತೇಕ ಹೊಸಬರೇ ಸೇರಿ ಮಾಡಿದ ಚಿತ್ರ ‘ಜತೆಯಾಗಿರು’. ಕೊರೊನಾ ಆವರಿಸದಿದ್ದರೆ ಈ ಚಿತ್ರ ಇಷ್ಟೊತ್ತಿಗಾಗಲೆ ತೆರೆಕಾಣಲಿತ್ತು. ಚಿತ್ರದ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದ್ದು, ಚಿತ್ರೀಕರಣೋತ್ತರ ಕೆಲಸಗಳಷ್ಟೇ ಬಾಕಿ ಇವೆ. ಇದಕ್ಕೆ ಆ್ಯಕ್ಷನ್‌ ಕಟ್‌ ಹೇಳಿರುವುದು ನಿರ್ದೇಶಕ ಸತೀಶ್‌ ಕುಮಾರ್‌. ತಮ್ಮ ಚಿತ್ರದ ಕುರಿತು ಹಲವು ಮಾಹಿತಿಗಳನ್ನು ಅವರು ‘ಸಿನಿಮಾ ಪುರವಣಿ’ಯೊಂದಿಗೆ ತೆರೆದಿಟ್ಟಿದ್ದಾರೆ.

‘ಇದೊಂದು ಲವ್‌ ಸ್ಟೋರಿಯ ಸಬ್ಜೆಕ್ಟ್‌ ಇರುವ ಚಿತ್ರ. ತಿಳಿವಳಿಕೆ ಇಲ್ಲದ ವಯಸ್ಸಿನಲ್ಲಿ ಪ್ರೀತಿಯ ಬಲೆಯಲ್ಲಿ ಬಿದ್ದರೆ ಏನೆಲ್ಲಾ ಆಗುತ್ತದೆ? ಹಾಗೆಯೇ ಪೋಷಕರು ತಮ್ಮ ಮಕ್ಕಳ ತಪ್ಪು–ಒಪ್ಪುಗಳನ್ನು ಸ್ವೀಕರಿಸದೇ ಏನೆಲ್ಲಾತಪ್ಪುಗಳನ್ನು ಮಾಡುತ್ತಾರೆ ಎನ್ನುವುದು ಈ ಚಿತ್ರದ ಕಥೆಯ ಒಂದೆಳೆ. ಸಮಾಜಕ್ಕೆ ಸಂದೇಶವನ್ನು ನೀಡುತ್ತದೆ ಈ ಚಿತ್ರ’ ಎಂದು ಅವರು ಮಾತಿಗಾರಂಭಿಸಿದರು.

ಸತೀಶ್‌ಗೆ ಈ ಚಿತ್ರದ ಮುಖೇನ ಸ್ವತಂತ್ರ ನಿರ್ದೇಶಕನಾಗುವ ಖುಷಿ ಇದೆ. ‘ಆಟ’, ‘ಅಲೆ’ ಮತ್ತು ‘ಅಜರಾಮರ’ ಚಿತ್ರಗಳು ಸೇರಿ ಸುಮಾರು 15 ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ದುಡಿದ ಅನುಭವ ಅವರ ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸಿದೆ. ‘ಹಾಗಾಗಿಯೇ ಸ್ವತಂತ್ರ ನಿರ್ದೇಶನದ ಸಾಹಸಕ್ಕೆ ಕೈಹಾಕಿದೆ. ಜತೆಗೆಕಥೆ– ಚಿತ್ರಕಥೆ ಹೊಸೆದಿರುವೆ. ನನ್ನ ಆಕಾಂಕ್ಷೆಗಳಿಗೆ ಮೂವರು ಸ್ನೇಹಿತರು ಕೈಜೋಡಿಸಿದ್ದಾರೆ.ರೇಣು ಮೂವಿಸ್‌ ಬ್ಯಾನರ್‌ನಡಿ ಈ ಚಿತ್ರಕ್ಕೆ ಅವರು ಬಂಡವಾಳ ಹೂಡಿದ್ದಾರೆ’ ಎನ್ನುವ ಮಾತು ಸೇರಿಸಿದರು.

ADVERTISEMENT

ಲವ್‌ ಸಬ್ಜೆಕ್ಟ್‌ ಇರುವುದರಿಂದ ಚಿತ್ರಕ್ಕೆ ಮ್ಯೂಸಿಕಲ್‌ ಟಚ್‌ ಕೂಡ ಇರಲೇಬೇಕೆಂಬ ಸಿದ್ಧ ಥಿಯರಿಗೆ ಅವರು ಅಂಟಿಕೊಂಡಂತಿದೆ. ಚಿತ್ರದಲ್ಲಿ ಎರಡು ಬಿಟ್ ಸಾಂಗ್‌ಗಳು ಸೇರಿ ಏಳು ಹಾಡುಗಳಿವೆ.ಗೀತರಚನೆ, ಸಂಗೀತ ನಿರ್ದೇಶನದಲ್ಲೂ ಸೈ ಎನಿಸಿಕೊಂಡಿರುವ ಕೆ.ಕಲ್ಯಾಣ್‌ ಅವರು ಈ ಚಿತ್ರಕ್ಕೆ ಎರಡು ಹಾಡುಗಳನ್ನು ಬರೆದಿದ್ದಾರೆ. ಜತೆಗೆ ಇದೇ ಮೊದಲ ಬಾರಿಗೆ ಈ ಚಿತ್ರದಲ್ಲಿ ಹಾಡುವ ಮೂಲಕ ಗಾಯಕರಾಗಿಯೂ ಕಲ್ಯಾಣ್‌ ಗುರುತಿಸಿಕೊಂಡಿದ್ದಾರೆ. ಮನ್ವರ್ಷಿ ಎಂಬುವವರು ಮೂರು ಹಾಡುಗಳನ್ನು ಬರೆದಿದ್ದಾರಂತೆ.

45 ದಿನಗಳ ಕಾಲ ಶೂಟಿಂಗ್‌ ನಡೆಸಲಾಗಿದೆ. ಬೆಂಗಳೂರು, ಕನಕಪುರ, ಚನ್ನಪಟ್ಟಣ, ಕಳಸ, ಸಕಲೇಶಪುರ, ಕುಂದಾಪುರ ಹಾಗೂ ಮಡಿಕೇರಿ ಭಾಗದಲ್ಲಿ ಚಿತ್ರೀಕರಣ ಮಾಡಿದ್ದೆವು. ಜುಲೈ ತಿಂಗಳಲ್ಲಿ ಚಿತ್ರ ತೆರೆಕಾಣಿಸುವ ಯೋಜನೆ ಇತ್ತು. ಈಗ ಕೊರೊನಾ ಲಾಕ್‌ಡೌನ್‌ ನಮ್ಮ ಯೋಜನೆಯನ್ನು ತಲೆ ಕೆಳಗು ಮಾಡಿದೆ.ಪೋಸ್ಟ್ ಪ್ರೊಡಕ್ಷನ್‌ ಕೆಲಸಗಳು ಬಾಕಿ ಇವೆ. ಚಿತ್ರಮಂದಿರಗಳ ಬಾಗಿಲು ತೆರೆಯುವುದನ್ನು ಕಾಯುವಂತಾಗಿದೆ. ಚಿತ್ರೋದ್ಯಮದ ಚಟುವಟಿಕೆಗಳು ಸಹಜ ಸ್ಥಿತಿಗೆ ಮರಳಿದ ನಂತರವೇ ಬಾಕಿ ಇರುವ ಡಿ.ಐ ಕೆಲಸ ಮತ್ತು ಟೀಸರ್‌ ಕೆಲಸ ಕೈಗೆತ್ತಿಕೊಳ್ಳಬೇಕಿದೆ. ಬಾಕಿ ಕೆಲಸ ಪೂರ್ಣಗೊಳಿಸಿದ ನಂತರವೇ ಚಿತ್ರ ಬಿಡುಗಡೆಗೆ ಪರ್ಯಾಯ ಮಾರ್ಗ ಒಟಿಟಿ ಕಂಪನಿಗಳತ್ತ ಗಮನ ಹರಿಸುವ ಆಲೋಚನೆಯೂ ಇದೆ ಎನ್ನುತ್ತಾರೆ ಸತೀಶ್‌.

ಚಿತ್ರದಲ್ಲಿ ಇಬ್ಬರು ನಾಯಕರು ಮತ್ತು ಇಬ್ಬರು ನಾಯಕಿಯರು ಇದ್ದಾರೆ. ನಾಲ್ವರು ಹೊಸ ಮುಖಗಳನ್ನೇ‍ಪರಿಚಯಿಸುತ್ತಿದ್ದೇವೆ. ನಾಯಕರಾಗಿ ವೆಂಕಟೇಶ್‌, ಸುನಿಲ ಕಾಂಚನ, ರಶ್ಮಿ ಹಾಗೂ ಪೂಜಾ ನಾಯಕಿಯರಾಗಿ ನಟಿಸಿದ್ದಾರೆ. ಪ್ರಮುಖ ಪಾತ್ರದಲ್ಲಿ ‘ಮಜಾಭಾರತ’ ಖ್ಯಾತಿಯರಾಜಶೇಖರ್‌ ಕಾಣಿಸಿಕೊಂಡಿದ್ದು, ಈ ಚಿತ್ರಕ್ಕಾಗಿ ಸಂಭಾಷಣೆಯನ್ನೂ ಬರೆದಿದ್ದಾರೆ ಎಂದರು.

ಛಾಯಾಗ್ರಹಣ ರಾಜಾ ಶಿವಶಂಕರ್‌ ಮತ್ತು ಆನಂದ ಇಳಯರಾಜ, ಸಂಕಲನಸತೀಶ್‌ ಚಂದ್ರಯ್ಯ ಅವರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.