
ವಿರಾಣಿಕಾ ಶೆಟ್ಟಿ ಮತ್ತು ದಿವ್ಯಾ ಸುರೇಶ್
ಈ ವಾರ ಕನ್ನಡದ ನಾಲ್ಕು ಸಿನಿಮಾಗಳು ತೆರೆಕಾಣುತ್ತಿವೆ. ಅವು ಯಾವೆಲ್ಲಾ ಎನ್ನುವ ಪಟ್ಟಿ ಇಲ್ಲಿದೆ.
ಧರ್ಮಂ
ಜಾತಿ, ಧರ್ಮದ ಕಥೆ ಹೊಂದಿರುವ ಚಿತ್ರವಿದು. ಚಿತ್ರಕ್ಕೆ ನಾಗಮುಖ ಆ್ಯಕ್ಷನ್ ಕಟ್ ಹೇಳಿದ್ದಾರೆ.
‘ಜಾತಿ ಮತ್ತು ಹಿಂದೂ ಧರ್ಮದ ಹಿನ್ನೆಲೆ ಇಟ್ಟುಕೊಂಡು ಈ ಚಿತ್ರ ಮಾಡಲಾಗಿದೆ. ಹಿಂದೂ ಧರ್ಮವನ್ನು ಎತ್ತಿ ಹಿಡಿಯುವ ಕೆಲಸ ಈ ಸಿನಿಮಾದಿಂದ ಆಗುತ್ತದೆ ಎಂಬ ನಂಬಿಕೆಯಿದೆ. ಮೇಲು, ಕೀಳಿನಿಂದ, ಜಾತಿ ಸಂಘರ್ಷಗಳಿಂದ ನಮ್ಮ ಧರ್ಮ ಹೇಗೆ ಸೊರಗುತ್ತಿದೆ ಎಂಬುದೇ ಚಿತ್ರಕಥೆ’ ಎಂದರು ನಿರ್ದೇಶಕ.
ಸಾಯಿ ಶಶಿಕುಮಾರ್‌ಗೆ ವಿರಾಣಿಕ ಶೆಟ್ಟಿ ಜೋಡಿಯಾಗಿದ್ದಾರೆ. ಸರವಣ ಸಂಗೀತ, ನಾಗಶೆಟ್ಟಿ ಛಾಯಾಚಿತ್ರಗ್ರಹಣವಿದೆ.
ಕೆಂಪು ಹಳದಿ ಹಸಿರು
ಬಹುತೇಕ ಹೊಸಬರಿಂದಲೇ ಕೂಡಿರುವ ಚಿತ್ರ ‘ಕೆಂಪು ಹಳದಿ ಹಸಿರು’. ಮಣಿ ಕಾರ್ತಿಕೇಯನ್ ನಿರ್ದೇಶನವಿದೆ. ಸನ್‌ರೈಸ್ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಮೂಲಕ ಪ್ರಸಾದ್‌ಕುಮಾರ್ ನಾಯ್ಕ್ ಬಂಡವಾಳ ಹೂಡಿದ್ದಾರೆ.
‘ಕೆಂಪು, ಹಳದಿ, ಹಸಿರು ಎನ್ನುವಂಥ ಮೂರು ಪಾತ್ರಗಳು ಚಿತ್ರದಲ್ಲಿವೆ. ಅವು ನಮ್ಮ ಬದುಕಿನ ಪ್ರತಿಬಿಂಬಗಳಾಗಿವೆ. ತ್ರಿಕೋನ ಪ್ರೇಮಕಥೆಯೊಂದಿಗೆ ಸಸ್ಪೆನ್ಸ್, ಥ್ರಿಲ್ಲರ್, ಕಾಮಿಡಿ ಜಾನರ್‌ನ ಚಿತ್ರ. ಸಣ್ಣ ಎಳೆ ಬಿಟ್ಟುಕೊಟ್ಟರೂ ಒಟ್ಟಾರೆ ಸಿನಿಮಾದ ಸಾರ ತಿಳಿಸಿದಂತೆ ಆಗುತ್ತದೆ. ಹೀಗಾಗಿ ಈಗಲೇ ಕಥೆ ಹೇಳುವುದಿಲ್ಲ. ಮಂಗಳೂರು, ಉಡುಪಿ ಮುಂತಾದೆಡೆ ಚಿತ್ರೀಕರಣ ನಡೆಸಲಾಗಿದೆ’ ಎಂದಿದ್ದಾರೆ ನಿರ್ದೇಶಕ.
ಶ್ರೀಹನ್ ದೀಪಕ್ ಚಿತ್ರದ ನಾಯಕ. ದಿವ್ಯಾ ಸುರೇಶ್ ನಾಯಕಿ. ತುಳು ಚಿತ್ರರಂಗದ ಖ್ಯಾತ ಹಾಸ್ಯ ನಟ ಅರವಿಂದ್ ಬೋಳಾರ್, ಶೈಲಾಶ್ರೀ ಮುಲ್ಕಿ, ಚಿಂದೋಡಿ ವಿಜಯ್ ಕುಮಾರ್ ಮುಂತಾದವರು ಅಭಿನಯಿಸಿದ್ದಾರೆ. ಮಂಜುನಾಥ್ ನಾಯಕ್ ಛಾಯಾಚಿತ್ರಗ್ರಹಣ, ವಿಕಾಸ್ ವಿಶ್ವಕರ್ಮ ಸಂಗೀತ, ಸತೀಶ್ ಈರ್ಲಾ ಸಂಕಲನವಿದೆ.
ಚಿತ್ರಲಹರಿ
ಕೆ.ಆರ್ ಸುರೇಶ್ ನಿರ್ದೇಶನದ ಚಿತ್ರವಿದು. ಕೇಸರಿ ನಂದನ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ನವನೀತ ಲಕ್ಷ್ಮೀ ನಿರ್ಮಿಸಿದ್ದಾರೆ.
‘ಎರಡು ಕಥೆಗಳ ಸುತ್ತ ಈ ಚಿತ್ರದ ಕಥೆ ಸಾಗುತ್ತದೆ. ಆದರೆ ಕ್ಲೈಮ್ಯಾಕ್ಸ್ ಒಂದೇ ಆಗಿರುತ್ತದೆ. ಬೆಂಗಳೂರಿನಲ್ಲೇ ಬಹುತೇಕ ಚಿತ್ರೀಕರಣ ನಡೆದಿದೆ. ಚಿತ್ರ ತೆರೆಗೆ ಬರಲು ಸಿದ್ಧವಿದೆ. ಪ್ರೀತಿ, ಆ್ಯಕ್ಷನ್, ಸೆಂಟಿಮೆಂಟ್...ಹೀಗೆ ನೋಡುಗರಿಗೆ ಬೇಕಾದ ಎಲ್ಲಾ ಅಂಶಗಳಿರುವ ಚಿತ್ರ’ ಎಂದರು ನಿರ್ದೇಶಕ.
ವರುಣ್ ದೇವಯ್ಯ ಮತ್ತು ಶ್ರೀಕಾಂತ್ ನಾಯಕರು. ಗಾನ್ವಿ ಹಾಗೂ ಹರ್ಷಿತ ನಾಯಕಿಯರು. ಸೂರ್ಯತೇಜ, ಶ್ರೀನಾಥ್, ಪ್ರದೀಪ್, ಚಂದ್ರು, ರಂಗ, ಸತೀಶ್ ಗೌಡ, ತೇಜಸ್ವಿನಿ, ಪದ್ಮ ಮುಂತಾದವರು ತಾರಾಬಳಗದಲ್ಲಿದ್ದಾರೆ.
ಸತೀಶ್ ಸಂಗೀತ, ಸೆಂಥಿಲ್ ಕುಮಾರ್ ಛಾಯಾಚಿತ್ರಗ್ರಹಣವಿದೆ.
ವಿಶ್ವರೂಪಿಣಿ ಶ್ರೀವಾಸವಿ
ವೇಮಗಲ್ ಜಗನ್ನಾಥ್ ರಾವ್ ನಿರ್ದೇಶನ ಚಿತ್ರವಿದು. ಪಾರ್ವತಿ ದೇವಿ ಮಹಿಮೆ ಕುರಿತಾದ ಭಕ್ತಿ ಪ್ರಧಾನ ಕಥೆಯನ್ನು ಹೊಂದಿದೆ. ರೋಹಿತ್ ನಾಗೇಶ್ ಶಿವನಾಗಿ, ಅಮೃತಾ ಮೂರ್ತಿ ದೇವಿಯಾಗಿ ಕಾಣಿಸಿಕೊಂಡಿದ್ದಾರೆ.
ವಿಕ್ರಂ ಕೆ.ವಿ. ಚಿತ್ರಕ್ಕೆ ಬಂಡವಾಳ ಹೂಡಿದ್ದು, ಬಿ.ಎಂ.ಪ್ರಸಾದ್ ಸಂಗೀತ, ಸಾಗರ್ ನೆಲಮನೆ ಛಾಯಾಚಿತ್ರಗ್ರಹಣವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.