ADVERTISEMENT

ಎನ್‌ಎಫ್‌ಟಿಯಲ್ಲಿ ವಿಕ್ರಾಂತ್ ರೋಣ ಚಿತ್ರದ ಪ್ರೀಮಿಯರ್‌ ಟಿಕೆಟ್‌

​ಪ್ರಜಾವಾಣಿ ವಾರ್ತೆ
Published 18 ಜುಲೈ 2022, 0:51 IST
Last Updated 18 ಜುಲೈ 2022, 0:51 IST
   

ಬೆಂಗಳೂರು: ‘ವಿಕ್ರಾಂತ್‌ ರೋಣ’ ಚಿತ್ರದ ಪ್ರೀಮಿಯರ್‌ ಷೋ ಟಿಕೆಟ್‌ ಅನ್ನು ಎನ್‌ಎಫ್‌ಟಿ ವ್ಯವಸ್ಥೆಯ ಮೂಲಕ ವಿತರಿಸಲಾಗುತ್ತಿದೆ.

ಕಿಚ್ಚ ಸುದೀಪ್‌ ಅವರ ಕಿಚ್ಚ ಕ್ರಿಯೇಷನ್ಸ್‌, ಸುದೀಪ್‌ ಪತ್ನಿ ಪ್ರಿಯಾ ಸುದೀಪ್‌ ಅವರ ಕಾಫಿ ಆ್ಯಂಡ್‌ ಬನ್‌ ಮತ್ತು ಬ್ಲಾಕ್‌ ಟಿಕೆಟ್ಸ್‌ ಕಂಪನಿಗಳ ಸಹಯೋಗದಲ್ಲಿ ಹೊಸ ಯೋಜನೆಯನ್ನು ನಟ ಸುದೀಪ್‌ ಭಾನುವಾರ ಬಿಡುಗಡೆಗೊಳಿಸಿದರು.

ಏನಿದು ಎನ್‌ಎಫ್‌ಟಿ?
‘ಎನ್‌ಎಫ್‌ಟಿ ಎಂದರೆ ನಾನ್‌ ಫಂಜಿಬಲ್‌ ಟೋಕನ್‌. ಇದು ಬ್ಲಾಕ್‌ ಚೈನ್‌ ತಂತ್ರಜ್ಞಾನ ಆಧಾರಿತ ವ್ಯವಸ್ಥೆ. ಟಿಕೆಟ್‌ ಅನ್ನು ನಕಲು ಮಾಡಲಾಗದಂತೆ, ದುರ್ಬಳಕೆ ಆಗದಂತೆ ವೀಕ್ಷಕರಿಗೆ ವಿಶೇಷ ಅನುಭವ ನೀಡುವ ಡಿಜಿಟಲ್‌ ವ್ಯವಸ್ಥೆ ಇದು. ದೇಶದಲ್ಲಿ ಮೊದಲ ಬಾರಿಗೆ ನಾವು ಈ ವ್ಯವಸ್ಥೆಯನ್ನು ಪರಿಚಯಿಸುತ್ತಿದ್ದೇವೆ’ ಎಂದು ಸುದೀಪ್‌ ಮತ್ತು ಬ್ಲಾಕ್‌ ಟಿಕೆಟ್ಸ್‌ನ ಸಂಸ್ಥಾಪಕ ಅಭಿನವ್‌ ಗಾರ್ಗ್‌ ಹೇಳಿದರು. ಟಿಕೆಟ್‌ ಮಾರಾಟವನ್ನು ಬ್ಲಾಕ್‌ ಟಿಕೆಟ್ಸ್‌ ಕಂಪನಿಯೇ ನಿರ್ವಹಿಸಲಿದೆ.

ADVERTISEMENT

‘ಸಿಲ್ವರ್‌, ಗೋಲ್ಡ್‌, ಪ್ಲಾಟಿನಂ ಮತ್ತು ಡೈಮಂಡ್‌ ಹೆಸರಿನ ಟಿಕೆಟಿಂಗ್‌ ಯೋಜನೆಗಳಿವೆ. ದರ ಕನಿಷ್ಠ ₹15 ಸಾವಿರದಿಂದ, ₹5 ಲಕ್ಷದವರೆಗೆ ಇರಲಿದೆ. ಆಯಾ ಯೋಜನೆಯಲ್ಲಿರುವ ಪ್ರಕಾರ ಪ್ರೀಮಿಯರ್‌ ವೀಕ್ಷಣೆಗೆ ಅವಕಾಶ, ಸುದೀಪ್‌ ಅವರ ಜೊತೆ ಫೋಟೋ ತೆಗೆಸಿಕೊಳ್ಳುವುದು, ಉಡುಗೊರೆಗಳನ್ನು ಪಡೆಯುವುದು, ಮಾತುಕತೆ ಹಾಗೂ ಔತಣ ಕೂಟದ ಅವಕಾಶಗಳು ಇಲ್ಲಿವೆ’ ಎಂದು ಗಾರ್ಗ್‌ ವಿವರಿಸಿದರು.ಜುಲೈ 26ರಂದು ದುಬೈನಲ್ಲಿ ‘ವಿಕ್ರಾಂತ್‌ ರೋಣ’ದ ಪ್ರೀಮಿಯರ್‌ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.