ADVERTISEMENT

‘ಗಮನಂ’ನಲ್ಲಿ ಕಂಡ ನಗರ ಬದುಕಿನ ಚದುರಿದ ಚಿತ್ರಗಳು

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2020, 9:06 IST
Last Updated 18 ಸೆಪ್ಟೆಂಬರ್ 2020, 9:06 IST
‘ಗಮನಂ’ ಚಿತ್ರದಲ್ಲಿ ನಟಿ ನಿತ್ಯಾ ಮೆನನ್
‘ಗಮನಂ’ ಚಿತ್ರದಲ್ಲಿ ನಟಿ ನಿತ್ಯಾ ಮೆನನ್   

ಮುರಿದುಬಿದ್ದ ಕನಸುಗಳನ್ನೆಲ್ಲಾ ಹರವಿಕೊಂಡು ಮತ್ತೆ ಜೋಡಿಸಲು ಕುಳಿತ ಮನಸು. ಇದು ಸಾಧ್ಯವೇ? ಎಂದು ಅಣಕಿಸುವ ವಾಸ್ತವತೆ. ಅದರೊಟ್ಟಿಗೆ ಬೆರೆತ ನಿರ್ಗತಿಕ ಜೀವಿಗಳ ತೊಳಲಾಟ ನಗರ ಜೀವನದಲ್ಲಿನ ಸಾಮಾನ್ಯ ಚಿತ್ರಣ. ಇದರ ಸುತ್ತವೇ ‘ಗಮನಂ’ ಚಿತ್ರದ ಕಥೆ ಹೆಣೆಯಲಾಗಿದೆಯಂತೆ.

ತೆಲುಗು, ಕನ್ನಡ, ತಮಿಳು, ಮಲಯಾಳ ಹಾಗೂ ಹಿಂದಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಚಿತ್ರಮಂದಿರಗಳು ಪುನರಾಂಭಕ್ಕೆ ಚಿತ್ರತಂಡ ಎದುರು ನೋಡುತ್ತಿದೆ.

ಇದಕ್ಕೆ ಆ್ಯಕ್ಷನ್‌ ಕಟ್‌ ಹೇಳಿರುವುದು ಸುಜನಾ ರಾವ್. ಫ್ಯಾಷನ್ ಡಿಸೈನಿಂಗ್ ಕಲಿಕೆಯ ಜೊತೆಗೆ ಎಡಿಟಿಂಗ್ ಕೋರ್ಸ್ ಮುಗಿಸಿ ದೆಹಲಿಯ ರಂಗಭೂಮಿಯಲ್ಲಿ ಕಾರ್ಯ ನಿರ್ವಹಿಸಿ, ಹಲವು ಜಾಹೀರಾತುಗಳನ್ನು ನಿರ್ದೇಶಿಸಿರುವುದು ಅವರ ಹೆಗ್ಗಳಿಕೆ. ‘ಗಮನಂ’ ಚಿತ್ರದ ಮೂಲಕ ಅವರು ಮೊದಲ ಬಾರಿಗೆ ನಿರ್ದೇಶಕಿಯ ಟೋಪಿ ಧರಿಸುತ್ತಿರುವ ಖುಷಿಯಲ್ಲಿದ್ದಾರೆ.

ADVERTISEMENT

ನಟ ಚಾರು ಹಾಸನ್, ಶ್ರಿಯಾ ಶರಣ್, ಪ್ರಿಯಾಂಕಾ ಜವಾಲ್ಕರ್, ಶಿವ ಕಂದುಕುರಿ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ. ಸಂಜಯ್ ಸ್ವರೂಪ್, ಇಂದೂ ಆನಂದ್, ಪ್ರಿಯಾ, ಸುಹಾಸ್, ಮಾಸ್ಟರ್ ನೇಹಾಂತ್, ಬಿತಿರಿ ಸತ್ತಿ, ರವಿಪ್ರಕಾಶ್ ಪೋಷಕ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ಬಹುಭಾಷಾ ನಟಿ ನಿತ್ಯಾ ಮೆನನ್ ಇದರಲ್ಲಿ ಅತಿಥಿ ಪಾತ್ರದಲ್ಲಿ ಕಾಣಸಿಕೊಂಡಿದ್ದಾರೆ. ಅವರ ಹೊಸ ಪೋಸ್ಟರ್‌ ಕೂಡ ಬಿಡುಗಡೆಯಾಗಿದೆ.

ಇದಕ್ಕೆ ಇಳೆಯರಾಜ ಅವರ ಸಂಗೀತ ಸಂಯೋಜನೆಯಿದೆ. ಜ್ಞಾನಶೇಖರ್ ವಿ.ಎಸ್. ಅವರ ಛಾಯಾಗ್ರಹಣವಿದೆ. ಸಾಯಿ ಮಾಧವ ಬುರಾ ಸಂಭಾಷಣೆ ಬರೆದಿದ್ದಾರೆ. ರಮೇಶ್ ಕರುತೂರಿ, ವೆಂಕಿ ಪುಶದಾಪು ಮತ್ತು ಜ್ಞಾನಶೇಖರ್ ವಿ.ಎಸ್. ಅವರು ಕ್ರಿಯಾ ಫಿಲ್ಮ್ಸ್ ಕಾರ್ಪ್ ಮೂಲಕ ಇದಕ್ಕೆ ಬಂಡವಾಳ ಹೂಡಿದ್ದಾರೆ.

ಕ್ರಿಕೆಟ್ ಆಟಗಾರನಾಗಬೇಕು ಎಂಬ ಹಂಬಲಿಸುವ ಯುವಕ. ಆದರೆ, ತನ್ನದೇ ಕುಟುಂಬದ ಸಾಂಪ್ರದಾಯಿಕ ಕೆಲಸವನ್ನೇ ಮುಂದುವರಿಸಿಕೊಂಡು ಸುರಕ್ಷಿತವಾಗಿರಲಿ ಎಂದು ಬಯಸುವ ಆತನ ಅಜ್ಜ. ಕೊಳೆಗೇರಿಯಲ್ಲಿ ವಾಸಿಸುವ ಶ್ರವಣದೋಷವುಳ್ಳ ಮಹಿಳೆಗೆ ತನ್ನ ಮುದ್ದು ಕಂದನ ಧ್ವನಿ ಕೇಳಬೇಕೆಂಬ ಆಸೆ. ಇಬ್ಬರು ಅನಾಥ ಮಕ್ಕಳು. ಅವರಿಗೆ ಎದುರಾಗುವ ಸವಾಲು –ಹೀಗೆ ನಗರ ಬದುಕಿನ ಚದುರಿದ ಚಿತ್ರಗಳು ಚಿತ್ರದಲ್ಲಿ ಮಿಳಿತವಾಗಿವೆ ಎಂಬುದು ಚಿತ್ರತಂಡದ ವಿವರಣೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.