ಶಿವರಾಜ್‌ಕುಮಾರ್, ನಿವೇದಿತಾ ಶಿವರಾಜ್‌ಕುಮಾರ್
ಶ್ರೀ ಮುತ್ತು ಸಿನಿ ಸರ್ವೀಸ್ ಆ್ಯಂಡ್ ಪ್ರೊಡಕ್ಷನ್ಸ್‌ನಡಿ ನಿವೇದಿತಾ ಶಿವರಾಜ್‌ಕುಮಾರ್ ನಿರ್ಮಾಣ ಮಾಡಿರುವ ಚೊಚ್ಚಲ ಸಿನಿಮಾ ‘ಫೈರ್‌ಫ್ಲೈ’ ಏ.24ರಂದು ತೆರೆಕಾಣಲಿದೆ. ಹಲವು ಕನಸುಗಳನ್ನು ಹೊತ್ತು ಈ ಕ್ಷೇತ್ರಕ್ಕೆ ಹೆಜ್ಜೆ ಇಟ್ಟಿರುವ ನಿವೇದಿತಾ ಹೊಸತನ, ಹೊಸತಂಡಗಳನ್ನು ಕಟ್ಟುವ ನಿರ್ಧಾರ ಮಾಡಿದ್ದಾರೆ.
‘ಓದು ಮುಗಿದ ಬಳಿಕ ಮುಂದೇನು ಮಾಡುವುದು ಎಂಬ ಗೊಂದಲದಲ್ಲಿದ್ದೆ. ಈ ಸಂದರ್ಭದಲ್ಲಿ ಉದ್ಯಮ ಆರಂಭಿಸುವ ಯೋಚನೆ ಮಾಡಿದ್ದೆ. ಅಪ್ಪ–ಅಮ್ಮನ ಬಳಿ ಈ ಕುರಿತು ಚರ್ಚಿಸಿದಾಗ ಕುಟುಂಬದ ಉದ್ಯಮವಾದ ಚಿತ್ರ ನಿರ್ಮಾಣವನ್ನೇ ಏಕೆ ಕೈಗೆತ್ತಿಕೊಳ್ಳಬಾರದು ಎಂಬ ಮಾತುಕತೆ ನಡೆಯಿತು. ನಟನೆಯತ್ತ ನನಗೆ ಯಾವ ಆಸಕ್ತಿಯೂ ಇರಲಿಲ್ಲ. ಸಿನಿಮಾ ನಿರ್ಮಾಣ ಕ್ಷೇತ್ರದ ಆಯ್ಕೆ ಒಂದು ಒಕ್ಕೊರಲ ನಿರ್ಧಾರವಾಗಿತ್ತು. ‘ಮಾನಸ ಸರೋವರ’ ಧಾರಾವಾಹಿ ಮೂಲಕ ನಿರ್ಮಾಣ ಕ್ಷೇತ್ರಕ್ಕೆ ಇಳಿದೆ. ಅದಾದ ಬಳಿಕ ಮೂರು ವೆಬ್ ಸರಣಿಗಳನ್ನು ನಿರ್ಮಾಣ ಮಾಡಿದೆ. ಈ ಪ್ರಕ್ರಿಯೆಲ್ಲಿ ನನಗೆ ಸಿನಿಮಾ ಬಗ್ಗೆ ಆಸಕ್ತಿ ಮೂಡಿತು. ನಾನು ಸಿನಿಮಾದ ಸುತ್ತವೇ ಬೆಳೆದವಳು. ನನ್ನದೇ ಆಲೋಚನೆಗಳುಳ್ಳ ಹೊಸಬರನ್ನು, ಯುವ ನಿರ್ದೇಶಕರನ್ನು ಭೇಟಿಯಾದಾಗ ಚಿತ್ರ ನಿರ್ಮಾಣದತ್ತ ಗಮನಹರಿಸಿದೆ’ ಎಂದು ಮಾತು ಆರಂಭಿಸಿದರು ನಿವೇದಿತಾ.
‘ಅಮ್ಮನ (ಗೀತಾ ಶಿವರಾಜ್‌ಕುಮಾರ್) ಪ್ರೊಡಕ್ಷನ್ ಹೌಸ್‌ನಿಂದ ಅಪ್ಪನ 125ನೇ ಸಿನಿಮಾ ಮೊದಲನೆಯದಾಗಿ ಬಂತು. ದೊಡ್ಡ ಬಜೆಟ್‌ನ ಸಿನಿಮಾಗಳನ್ನು ಅವರು ಮಾಡುತ್ತಿದ್ದಾರೆ. ನಾನು ವೆಬ್ ಸರಣಿಯಿಂದ ಚಿಕ್ಕದಾಗಿ ನನ್ನ ಪ್ರೊಡಕ್ಷನ್ ಹೌಸ್ ಆರಂಭಿಸಿದೆ. ಹೊಸದೇನಾದರೂ ಮಾಡಬೇಕು ಎನ್ನುವ ತುಡಿತ ನನ್ನಲ್ಲಿ ಇತ್ತು. ಬೇಕಿದ್ದರೆ ನನಗೂ ಸಿನಿಮಾ ಮಾಡಬಹುದಿತ್ತು. ಆದರೆ ಹೊಸಬರನ್ನು, ಹೊಸದಾದ ಭಿನ್ನ ವಿಷಯಗಳನ್ನು ಪ್ರೇಕ್ಷಕರಿಗೆ ನೀಡಬೇಕು ಎನ್ನುವ ಆಲೋಚನೆ ಇತ್ತು. ಅಜ್ಜಿ (ಪಾರ್ವತಮ್ಮ ರಾಜ್‌ಕುಮಾರ್) ಅವರಿಗೆ ನನ್ನನ್ನು ಹೋಲಿಸುತ್ತಿದ್ದಾರೆ. ಇದು ಅತಿಶಯೋಕ್ತಿ. ಇದು ನನ್ನ ಮೊದಲ ಸಿನಿಮಾ. ಅವರು ಸಿನಿಮಾ ನಿರ್ಮಾಣ ಆರಂಭಿಸಿದಾಗ ಪುರುಷ ಪ್ರಧಾನ ಇಂಡಸ್ಟ್ರಿ ನಮ್ಮದಾಗಿತ್ತು. ಹೀಗಿದ್ದ ಸಂದರ್ಭದಲ್ಲಿ ಅವರು ಎಲ್ಲವನ್ನು ಮೀರಿ ನಿಂತು ಸಾಧಿಸಿದರು. ಇದೇ ನನಗೆ ಸ್ಫೂರ್ತಿ. ಕಾದಂಬರಿ ಆಧಾರಿತ ಸಿನಿಮಾಗಳನ್ನು ಅವರು ಮಾಡಿದರು. ನಾನೂ ಕಾದಂಬರಿಗಳನ್ನು ಓದುತ್ತೇನೆ. ಮುಂದೆ ಕಾದಂಬರಿ ಆಧಾರಿತ ಸಿನಿಮಾಗಳನ್ನೂ ಮಾಡುವ ಆಸೆ ಇದೆ’ ಎಂದರು.
‘ಮೂರು ವೆಬ್ ಸರಣಿಗಳನ್ನು ನಿರ್ಮಾಣ ಮಾಡಿದ ಬಳಿಕವೂ ಕನ್ನಡದಲ್ಲಿ ವೆಬ್ ಸರಣಿಗಳ ಮಾರಾಟ ಕಷ್ಟವಾಗಿತ್ತು. ಮಾರುಕಟ್ಟೆಯ ಕಡೆಗೂ ನಾನು ಗಮನಹರಿಸಬೇಕಿತ್ತು. ವಂಶಿ ಅವರು ಈ ಸಿನಿಮಾ ಕಥೆ ಹೇಳಿದಾಗ ಬಹಳ ಇಷ್ಟವಾಯಿತು. ಇದರ ಕಥೆಯಲ್ಲಿನ ಪಾತ್ರಗಳ ಲುಕ್, ಹೇಳುವ ರೀತಿ ಭಿನ್ನವಾಗಿರಬಹುದು, ಆದರೆ ಭಾವನೆಗಳು ಎಲ್ಲರಿಗೂ ಅರ್ಥವಾಗುತ್ತದೆ. ನನ್ನ ಮೊದಲ ಸಿನಿಮಾಗೆ ಇದನ್ನೇ ಆಯ್ಕೆ ಮಾಡಿಕೊಳ್ಳಬಹುದು ಎಂದು ನಿರ್ಧರಿಸಿದೆ. ಸದ್ಯದ ಸ್ಥಿತಿಯಲ್ಲಿ ಗುಣಮಟ್ಟದ, ಒಳ್ಳೆಯ ವಿಷಯಗಳು ಇರುವ ಸಿನಿಮಾಗಳನ್ನು ನೀಡಬೇಕಿದೆ. ಚಿತ್ರರಂಗವೂ ಶ್ರಮ ಹಾಕಬೇಕು. ಹೊಸಬರು ಆಗಿರಲಿ ಅಥವಾ ಸ್ಟಾರ್‌ಗಳು ಆಗಿರಲಿ ನಿರಂತರವಾಗಿ ಸಿನಿಮಾ ಮಾಡಬೇಕಿದೆ’ ಎಂದು ನಿವೇದಿತಾ ಅಭಿಪ್ರಾಯಪಟ್ಟರು.
ಮಗಳ ಮೊದಲ ಸಿನಿಮಾದಲ್ಲಿ ನಟಿಸಲೇಬೇಕು ಎಂದು ಅಪ್ಪನಿಗೆ ಆಸೆ ಇತ್ತು ಎಂದುಕೊಂಡಿದ್ದೇನೆ. ಅಪ್ಪ ತುಂಬಾ ಖುಷಿ ಪಟ್ಟು ಇಷ್ಟಪಟ್ಟು ಮಾಡಿದ ಪಾತ್ರವಿದು. ಪಾತ್ರ ಸಣ್ಣದಾಗಿದ್ದರೂ ಬಹಳ ಮುದ್ದು ಮುದ್ದಾಗಿದೆ. –ನಿವೇದಿತಾ ಶಿವರಾಜ್‌ಕುಮಾರ್ ನಿರ್ಮಾಪಕಿ
---
ಸಿನಿಮಾ ಜೊತೆಗೆ ವೆಬ್ ಸರಣಿ
‘ಕನ್ನಡ ವೆಬ್ ಸರಣಿಗಳಿಗೆ ಖಂಡಿತಾ ಭವಿಷ್ಯವಿದೆ. ಸಿನಿಮಾ ಜೊತೆಗೆ ಮುಂದೆ ವೆಬ್ ಸರಣಿಗಳನ್ನೂ ಮಾಡಲಿದ್ದೇನೆ. ನಾನು ವೆಬ್ ಸರಣಿ ಮಾಡಿದ ಬಳಿಕ ಅದನ್ನು ಮಾರಾಟ ಮಾಡಲು ಎರಡು ವರ್ಷ ತೆಗೆದುಕೊಂಡೆ. ‘ಹನಿಮೂನ್’ ಮೊದಲಿಗೆ ಮಾರಾಟವಾಗಿದ್ದು ತೆಲುಗಿನಲ್ಲಿ. ಕನ್ನಡದಲ್ಲಿ ಯಾರೂ ತೆಗೆದುಕೊಳ್ಳಲಿಲ್ಲ. ತೆಲುಗಿನಲ್ಲಿ ಬಂದ ಬಳಿಕ ಕನ್ನಡದಲ್ಲಿ ಮಾರಾಟವಾಯಿತು. ಒಟಿಟಿ ವೇದಿಕೆಗಳು ಬೆಂಗಳೂರಿನ ಅಂಕಿ ಅಂಶದ ಆಧಾರದ ಮೇಲೆ ವೆಬ್ ಸರಣಿಗಳನ್ನು ನಿರ್ಮಾಣ ಮಾಡುತ್ತಿವೆ ಅಥವಾ ಖರೀದಿಸುತ್ತಿವೆ. ಇದು ನನ್ನ ವೈಯಕ್ತಿಕ ಅಭಿಪ್ರಾಯ. ಒಟ್ಟಾರೆ ರಾಜ್ಯದಲ್ಲಿ ಅಥವಾ ವಿಶ್ವದೆಲ್ಲೆಡೆ ಕನ್ನಡದ ವೀಕ್ಷಕರು ಹೆಚ್ಚಿದ್ದಾರೆ’ ಎನ್ನುತ್ತಾರೆ ನಿವೇದಿತಾ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.