ADVERTISEMENT

ಶುಕ್ರದೆಸೆ ತಾರದ ಸಿನಿಮಾರಂಗ: ನಟ ಧರ್ಮ ಕೀರ್ತಿರಾಜ್‌ ಸಂದರ್ಶನ

ಪ್ರಜಾವಾಣಿ ವಿಶೇಷ
Published 13 ಜುಲೈ 2023, 23:31 IST
Last Updated 13 ಜುಲೈ 2023, 23:31 IST
ಧರ್ಮ ಕೀರ್ತಿರಾಜ್‌
ಧರ್ಮ ಕೀರ್ತಿರಾಜ್‌   

–ವಿನಾಯಕ ಕೆ.ಎಸ್‌.

ವಿಜಯ್‌ ರಾಘವೇಂದ್ರ, ಧರ್ಮ ಕೀರ್ತಿರಾಜ್‌ ನಟಿಸಿರುವ ‘ಓ ಮನಸೇ’ ಚಿತ್ರ ಇಂದು(ಜುಲೈ 14) ತೆರೆಗೆ ಬರುತ್ತಿದೆ. ಚಿತ್ರದಲ್ಲಿನ ಪಾತ್ರದ ಕುರಿತು ಒಂದಷ್ಟು ಮಾಹಿತಿಯನ್ನು ಧರ್ಮ ಕೀರ್ತಿರಾಜ್‌ ‘ಸಿನಿಮಾ ಪುರವಣಿ’ಯೊಂದಿಗೆ ಹಂಚಿಕೊಂಡಿದ್ದಾರೆ.

ಈ ಚಿತ್ರದಲ್ಲಿ ನಿಮ್ಮ ಪಾತ್ರವೇನು? ಖಳನಾಯಕನಾಗಿ ನಟಿಸಿದ್ದೀರಾ?

ADVERTISEMENT

ಎರಡು ಆಯಾಮ ಹೊಂದಿರುವ ಪಾತ್ರ. ಮೊದಲಾರ್ಧದಲ್ಲಿ ತುಂಬ ಸೌಮ್ಯ ಸ್ವಭಾವದ ಹುಡುಗ. ಕುಟುಂಬವನ್ನು ಪ್ರೀತಿಸುವ, ಸಕಾರಾತ್ಮಕ ಚಿಂತನೆಯನ್ನು ಹೊಂದಿರುವ ವ್ಯಕ್ತಿಯಾಗಿರುತ್ತೇನೆ. ದ್ವಿತೀಯಾರ್ಧದಲ್ಲಿ ನಕಾರಾತ್ಮಕ ಅಂಶಗಳು ತುಂಬಿರುವ, ಕೆಟ್ಟದ್ದನ್ನು ಯೋಚಿಸುವ ವ್ಯಕ್ತಿಯಾಗುವೆ. ಕಣ್ಣಿನಿಂದ ನೋಡಿದ್ದು ಕೂಡ ಕೆಲವೊಮ್ಮೆ ನಿಜವಾಗುವುದಿಲ್ಲ ಎಂಬುದನ್ನು ಸಾಬೀತುಪಡಿಸುವ ಪಾತ್ರ. ಯಾಕೆ ಈ ಪಾತ್ರ ಹೀಗಾಗುತ್ತದೆ ಎಂಬುದನ್ನು ಸಿನಿಮಾದಲ್ಲಿಯೇ ನೋಡಬೇಕು.

ಈ ಸಿನಿಮಾ ಎಲ್ಲೆಲ್ಲಿ ಚಿತ್ರೀಕರಣಗೊಂಡಿದೆ? ಅನುಭವ ಹೇಗಿತ್ತು?

ಮಡಿಕೇರಿ, ತಲಕಾವೇರಿಯಲ್ಲಿ ಬಹುಪಾಲು ಚಿತ್ರೀಕರಣಗೊಂಡಿದೆ. ಒಂದು ಹಾಡನ್ನು ಬ್ಯಾಂಕಾಕ್‌ನಲ್ಲಿ ಚಿತ್ರೀಕರಿಸಿದ್ದೇವೆ. ವಿಜಯ್‌ ರಾಘವೇಂದ್ರ ಅವರ ಜೊತೆ ಶೂಟಿಂಗ್‌ ಒಂದು ವಿಶಿಷ್ಟ ಅನುಭವ. 

ಚಿತ್ರರಂಗದಲ್ಲಿನ ಈವರೆಗಿನ ಪಯಣ ಹೇಗನ್ನಿಸಿದೆ?

ಸಾಕಷ್ಟು ಏಳು–ಬೀಳು ಕಂಡಿರುವೆ. 2009ರಲ್ಲಿ ‘ನವಗ್ರಹ’ ಚಿತ್ರದಲ್ಲಿ ಹಾಡು ಹಿಟ್‌ ಆಗಿದ್ದು ನನ್ನನ್ನು ಚಿತ್ರರಂಗ ಗುರುತಿಸುವಂತೆ ಮಾಡಿತು. ಅದಾದ ಬಳಿಕ ತಕ್ಷಣಕ್ಕೆ ಚಿತ್ರಗಳು ಸಿಗಲಿಲ್ಲ. ಒಂದೆರಡು ಸಿನಿಮಾ ಬಂದವು. ಆದರೆ ಚಿತ್ರೀಕರಣ ಪೂರ್ತಿಗೊಂಡು ಬಿಡುಗಡೆಯಾಗಲಿಲ್ಲ. ನಂತರ ‘ಒಲವೇ ವಿಸ್ಮಯ’ ಚಿತ್ರದಲ್ಲಿ ನಟಿಸಿದೆ. ಸಿನಿಮಾ ಚೆನ್ನಾಗಿತ್ತು. ಅದು ಹಿಟ್‌ ಆಗಲಿಲ್ಲ. ‘ಮಮ್ತಾಜ್‌’ ಸಿನಿಮಾ ಕೂಡ ಜನರನ್ನು ತಲುಪಲಿಲ್ಲ. ಹೀಗಾದಾಗ ಬಹಳ ಬೇಸರವಾಗುತ್ತಿತ್ತು. ಆದರೂ  ಮುಂದಿನ ಸಿನಿಮಾದಲ್ಲಿ ಒಳ್ಳೆದಾಗುತ್ತೆ ಎಂಬ ಭರವಸೆಯಲ್ಲಿ ಪ್ರತಿ ಸಿನಿಮಾ ಬಿಡುಗಡೆಗಾಗಿ ಕಾಯುತ್ತಿದ್ದೆ.

ಹಾಗಿದ್ದರೆ ನಿಮಗೆ ಮತ್ತೆ ಬ್ರೇಕ್‌ ನೀಡಿದ ಸಿನಿಮಾ ಯಾವುದು?

‘ಚಾಣಾಕ್ಷ’ ಸಿನಿಮಾದಿಂದ ಆ್ಯಕ್ಷನ್‌ ಹೀರೊ ವರ್ಚಸ್ಸು ಸಿಕ್ಕಿತು. ಮತ್ತೆ ಗ್ಯಾಪ್‌ ಆಯ್ತು. ‘ಜೋಗಿಗುಡ್ಡ’ ಎಂಬೊಂದು ಸಿನಿಮಾ ಮಾಡಿದೆ. ಅದು ಕೂಡ ಪೂರ್ತಿಯಾಗಲಿಲ್ಲ. ಹೀಗಾಗಿ ಮತ್ತೆ ಗ್ಯಾಪ್‌ ಹೆಚ್ಚಾಯಿತು. ಮಾಡಿದ ಸಿನಿಮಾಗಳ ಬಗ್ಗೆ ಅಸಮಾಧಾನವಿಲ್ಲ. ಇನ್ನೂ ಉತ್ತಮವಾದ ಕಥೆ ಸಿಕ್ಕಿದ್ದರೆ ಚೆನ್ನಾಗಿತ್ತು ಅನ್ನಿಸಿದ್ದಿದೆ. ಪ್ರತಿ ನಟನಿಗೂ ಆ ರೀತಿಯ ಭಾವನೆ ಇರುತ್ತದೆ.

ಎಂತಹ ಸಿನಿಮಾಗಳನ್ನು ಎದುರು ನೋಡುತ್ತಿರುವಿರಿ?

ಕಥೆ ಚೆನ್ನಾಗಿರಬೇಕು. ಉತ್ತಮವಾದ ಪರಿಕಲ್ಪನೆ ಇರಬೇಕು. ಹೊಸತಾಗಿರುವುದನ್ನು ಜನ ಬಯಸುತ್ತಿದ್ದಾರೆ. ನಾಯಕನನ್ನು ಚೆನ್ನಾಗಿ ಬಿಂಬಿಸುವಂತಹ ಕಥೆ ಬೇಕು. 

ನಿಮ್ಮ ಮುಂದಿನ ಸಿನಿಮಾಗಳು?

‘ರಾನಿ’ ಸಿನಿಮಾ ಬಿಡುಗಡೆಗೆ ಸಿದ್ಧವಿದೆ. ನಟ ತಿಲಕ್‌, ನಟಿ ಸೋನು ಗೌಡ ಜೊತೆ ಮಾಡಿರುವ ‘ವಸುಂಧರಾ ದೇವಿ’ ಚಿತ್ರ ಕೂಡ ಪೂರ್ತಿಗೊಂಡಿದೆ. ಅದರಲ್ಲೊಂದು ವಿಶಿಷ್ಟವಾದ ಪಾತ್ರವಿದೆ. ‘ಟೆಕ್ಕಿಲ’ ಚಿತ್ರದಲ್ಲೊಂದು ಭಿನ್ನ ಪಾತ್ರ. ಇದಲ್ಲದೇ ಕೆಲ ಕಥೆಗಳನ್ನು ಕೇಳಿದ್ದೇನೆ. 

ನಿಮ್ಮ ಸಾಮರ್ಥ್ಯಕ್ಕೆ ತಕ್ಕ ಅವಕಾಶ ಸಿಗಲಿಲ್ಲ ಎನ್ನಿಸಿದೆಯಾ?

14 ವರ್ಷ ಆಯ್ತು ಚಿತ್ರರಂಗಕ್ಕೆ ಬಂದು. ಜನ ದೊಡ್ಡ ಮಟ್ಟದಲ್ಲಿ ಗುರುತಿಸುವ ಸಿನಿಮಾ ಮಾಡಲಿಲ್ಲ. ನಿರ್ಮಾಪಕನಿಗೆ ಹಾಕಿದ ಬಂಡವಾಳ ಮರಳಿ ಬರಲಿಲ್ಲ ಎಂದಾಗ ತುಂಬ ಬೇಸರವಾಗುತ್ತದೆ. ಕೆಲವು ಕಡೆ ನನ್ನ ತಪ್ಪಿಲ್ಲ. ಕಥೆ ಕೇಳಿದಾಗ ಒಂದು ಕಲ್ಪನೆ ಇರುತ್ತದೆ. ಚಿತ್ರವಾಗಿ ಬರುವಾಗ ಅದು ಮತ್ತೊಂದಾಗಿರುತ್ತದೆ. ಕೆಲವು ಕಡೆ ನನ್ನ ನಟನೆ ಕೂಡ ಚೆನ್ನಾಗಿ ಆಗಬಹುದಿತ್ತು ಅನ್ನಿಸಿದ್ದಿದೆ. ಎಲ್ಲ ಅಸಮಾಧಾನಗಳನ್ನು ನೀಗಿಸುವ ಒಂದು ಸಿನಿಮಾ ಕೊಡಬೇಕು. ಯಾವತ್ತೂ ಚಿತ್ರರಂಗದಿಂದ ಬೇರೆಡೆಗೆ ಹೋಗಲಿಲ್ಲ. ತಂದೆ ಅವರ 40 ವರ್ಷದ ಅನುಭವದಿಂದ ನಾನು ಕಲಿತಿದ್ದು ಸಾಕಷ್ಟು. ಏಳು–ಬೀಳಿನ ನಡುವೆ ಭರವಸೆ ಗಟ್ಟಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.