ADVERTISEMENT

ಗಾಂಧಿನಗರದ ಒಂಬತ್ತನೇ ಅದ್ಭುತ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2019, 8:46 IST
Last Updated 23 ಏಪ್ರಿಲ್ 2019, 8:46 IST
ನಯನಾ ಸಾಯಿ
ನಯನಾ ಸಾಯಿ   

ಗಾಂಧಿನಗರ ಹಲವು ಅದ್ಭುತಗಳ ಆಗರ. ಪ್ರತಿದಿನ ಇಲ್ಲಿ ಅದ್ಭುತ ಸೃಷ್ಟಿಸುವ ಸಿನಿಮಾ ಮಂದಿಗೆ ಕೊರತೆಯಿಲ್ಲ. ಹೊಸತಂಡವೊಂದು ಒಂಬತ್ತನೆ ಅದ್ಭುತ ಸೃಷ್ಟಿಸಲು ಮುಂದಾಗಿರುವುದು ಹೊಸ ಸುದ್ದಿ.

ಜಗತ್ತಿನ ಏಳು ಅದ್ಭುತಗಳ ಬಗ್ಗೆ ಕೇಳಿದ್ದೇವೆ. ಇದ್ಯಾವುದು ಒಂಬತ್ತನೇ ಅದ್ಭುತ ಎಂದು ಹುಬ್ಬೇರಿಸಬೇಡಿ. ಇದು ಸಿನಿಮಾದ ಹೆಸರು. ಸಂತೋಷ್ ಕುಮಾರ್ ಬಟಗೇರಿ ಈ ಅದ್ಭುತದ ಸೃಷ್ಟಿಕರ್ತರು. ಕಾಮ, ಕ್ರೋದ, ಮದ, ಮಾತ್ಸರ್ಯವನ್ನು‌‌ ಮೀರುವುದೇ ಒಂಬತ್ತನೇ ಅದ್ಭುತವಂತೆ. ಮೇ 3ರಂದು ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು, ಈ ಕುರಿತು ಮಾಹಿತಿ ಹಂಚಿಕೊಳ್ಳಲು ಚಿತ್ರತಂಡ ಸುದ್ದಿಗೋಷ್ಠಿಗೆ ಹಾಜರಾಗಿತ್ತು.

ಒಂದು ದಶಕಕ್ಕೂ ಹೆಚ್ಚು ಕಾಲ ಸಿನಿಮಾ ರಂಗದಲ್ಲಿ ದುಡಿದ ಅನುಭವ ಇರುವ ಸಂತೋಷ್‌ ಈ ಚಿತ್ರ ನಿರ್ದೇಶಿಸಿದ್ದಾರೆ. ಜೊತೆಗೆ, ಅವರೇ ನಾಯಕ ನಟನಾಗಿ ಬಣ್ಣ ಹಚ್ಚಿದ್ದಾರೆ. ನಗುವಿನಹಳ್ಳಿಯಲ್ಲಿ ಮೊಟೆಗೌಡ ಎಂಬ ವೃದ್ಧ ಇರುತ್ತಾರೆ. ಆ ವ್ಯಕ್ತಿಯ ಸಾವಿನ ಸುತ್ತ ಕಾಮಿಡಿ ಕಥೆ‌ ಹೊಸೆಯಲಾಗಿದೆಯಂತೆ.

ADVERTISEMENT

‘ಇದು ರೆಗ್ಯುಲರ್ ಸಬ್ಜೆಕ್ಟ್ ಅಲ್ಲ. ಭಿನ್ನವಾಗಿ ಸಿನಿಮಾ ಮಾಡಿದ್ದೇವೆ. ನಾನು ವೈಯಕ್ತಿಕ ಬದುಕಿನಲ್ಲಿ ಇರುವಂತೆಯೇ ಸ್ಕ್ರಿಪ್ಟ್ ಮಾಡಿದ್ದೇನೆ’ ಎಂದರು ಸಂತೋಷ್‌.

ನಯನಾ ಸಾಯಿ ಈ ಚಿತ್ರದ ನಾಯಕಿ. ಇದು ಅವರ ಮೊದಲ ಚಿತ್ರ. ‘ನಾನು ಮಾಡೆಲಿಂಗ್ ಮಾಡುತ್ತಿದ್ದೇನೆ. ಅನ್‌ಮೆಚ್ಯೂರ್‌ ಆಗಿರುವ ಕಾಲೇಜು ಹುಡುಗಿಯ ಪಾತ್ರ ನನ್ನದು’ ಎಂದು ಮಾಹಿತಿ ನೀಡಿದರು.

ಸ್ಥಿರ ಛಾಯಾಗ್ರಾಹಕರಾಗಿ ಕೆಲಸ ಮಾಡಿರುವ ರಾಘವೇಂದ್ರ ಬಿ. ಕೋಲಾರ್ ಮೊದಲ ಬಾರಿಗೆ ಸಿನಿಮಾ ಛಾಯಾಗ್ರಾಹಕರಾಗಿ ಬಡ್ತಿ ಪಡೆದಿದ್ದಾರೆ. ಚಿತ್ರದಲ್ಲಿ ಎರಡು ಹಾಡುಗಳಿದ್ದು, ಸುನಿಲ್‌ ಕೋಶಿ ಸಂಗೀತ ಸಂಯೋಜಿಸಿದ್ದಾರೆ. ಸೆಂಚುರಿ ಗೌಡ, ರಘು ಪಾಂಡೇಶ್ವರ್, ಮೈಕಲ್‌ ಮಧು, ಪ್ರಯಣಮೂರ್ತಿ, ನರಸಿಂಹ ಜೋಶಿ, ಸಂತೋಷ್‌, ಶೇಖರ್‌ ಗೌಡ, ಅರವಿಂದ್ ಗೌಡ, ಆನಂದ್‌ ಶನ್ನು ತಾರಾಗಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.