ADVERTISEMENT

ಚಿತ್ರಮಂದಿರದಲ್ಲಿ ಶೇ 50ರಷ್ಟು ಆಸನ ಭರ್ತಿ ನಿರ್ಬಂಧಕ್ಕೆ ತೀವ್ರ ವಿರೋಧ

ಕೇಂದ್ರ ಕೊಟ್ಟರೂ ರಾಜ್ಯ ಬಿಡಲಿಲ್ಲ!!

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2021, 10:38 IST
Last Updated 3 ಫೆಬ್ರುವರಿ 2021, 10:38 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬೆಂಗಳೂರು: ಮಾರ್ಕೆಟ್‌ನಲ್ಲಿ ಗಿಜಿಗಿಜಿ ಜನ, ಬಸ್‌ನಲ್ಲೂ ಫುಲ್‌ರಶ್‌ ಹೀಗಿದ್ದರೂ ಚಿತ್ರಮಂದಿರಕ್ಕೆ ಮಾತ್ರ ಏಕೆ ಶೇ50 ನಿರ್ಬಂಧ ಎಂಬ ಪೋಸ್ಟರ್‌ ಇದೀಗ ಟ್ವಿಟರ್‌ನಲ್ಲಿ ಟ್ರೆಂಡ್‌ ಆಗಿದೆ.

ಕೇಂದ್ರ ಸರ್ಕಾರವು ಚಿತ್ರಮಂದಿರಗಳಲ್ಲಿ ಫೆ. 1ರಿಂದ ಪೂರ್ಣ ಪ್ರಮಾಣದ ಆಸನ ಭರ್ತಿಗೆ ಅವಕಾಶ ಕೊಟ್ಟಿದ್ದರೂ ರಾಜ್ಯ ಸರ್ಕಾರ ಶೇ 50ರಷ್ಟು ಆಸನ ಭರ್ತಿಗೆ ಮಾತ್ರ ಅವಕಾಶ ನೀಡಿ ನಿರ್ಬಂಧ ಮುಂದುವರಿಸಿರುವುದು ಈ ಆಕ್ರೋಶಕ್ಕೆ ಕಾರಣ. ಈ ಸಂಬಂಧ ಮುಖ್ಯಮಂತ್ರಿಯನ್ನು ಭೇಟಿಯಾಗಿ ಸಮಸ್ಯೆ ಬಗೆಹರಿಸುವಂತೆ ಕೋರಲು ಚಿತ್ರರಂಗದ ಪ್ರಮುಖರು ನಿರ್ಧರಿಸಿದ್ದಾರೆ. ಪೂರ್ಣ ಪ್ರಮಾಣದ ಆಸನ ಭರ್ತಿಗೆ ಅವಕಾಶ ಕೊಡಬೇಕು ಎಂದು ಒತ್ತಾಯಿಸಿ ಸಿನಿರಂಗದ ಪ್ರಮುಖರು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಆರಂಭಿಸಿದ್ದಾರೆ. ತಮಿಳುನಾಡು, ಪಶ್ಚಿಮ ಬಂಗಾಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಪೂರ್ಣ ಪ್ರಮಾಣದ ಆಸನ ಭರ್ತಿಗೆ ಅಲ್ಲಿನ ರಾಜ್ಯ ಸರ್ಕಾರಗಳು ಅನುಮತಿ ನೀಡಿವೆ. ಇಲ್ಲೇನು ಅಡ್ಡಿ? ಎಂಬುದು ಸಿನಿರಂಗದವರ ಧ್ವನಿ.

ಫೆಬ್ರುವರಿಯಲ್ಲಿ ಕೋವಿಡ್‌ ಎರಡನೇ ಅಲೆ ಅಪ್ಪಳಿಸುವ ಆತಂಕ ಇರುವುದರಿಂದ ಈ ನಿರ್ಬಂಧ ಮುಂದುವರಿಯಲಿದೆ ಎಂಬುದು ರಾಜ್ಯ ಸರ್ಕಾರದ ವಾದ.

ADVERTISEMENT

ಜಾಲತಾಣದ ಅಭಿಯಾನ ಹೀಗಿದೆ: ಫೆ.19ರಂದು ಬಿಡುಗಡೆಗೆ ಸಿದ್ಧವಾಗಿರುವ ಪೊಗರು ಚಿತ್ರದ ನಾಯಕ ಧ್ರುವ ಸರ್ಜಾ ಮಾಡಿರುವ ಈ ಟ್ವೀಟ್‌ ಅನ್ನು ಚಂದನವನದ ಬಹುತೇಕ ನಟರು ರಿಟ್ವೀಟ್‌ ಮಾಡಿದ್ದು, ರಾಜ್ಯ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿದ್ದಾರೆ. ತಮ್ಮ ಟ್ವೀಟ್‌ನಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ್‌ ಹಾಗೂ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಅವರನ್ನು ಸರ್ಜಾ ಟ್ಯಾಗ್‌ ಮಾಡಿದ್ದಾರೆ. ಜೊತೆಗೆ ಚಿತ್ರಮಂದಿರದಲ್ಲಿ ಶೇ 100 ಭರ್ತಿಗೆ ಅವಕಾಶ ನೀಡಬೇಕು ಎಂದು ಕನ್ನಡ ಚಿತ್ರೋದ್ಯಮ ಮನವಿ ಮಾಡುತ್ತದೆ ಎಂದು ಅವರು ಉಲ್ಲೇಖಿಸಿದ್ದಾರೆ.

ಖಾಸಗಿ ಸಮಾರಂಭಗಳು, ಪ್ರಾರ್ಥನಾ ಮಂದರಿಗಳು, ಸಾರ್ವಜನಿಕ ಸಾರಿಗೆ, ಮಾರುಕಟ್ಟೆ, ಪ್ರವಾಸಿ ತಾಣಗಳು ಎಂದಿನಂತೆ ಕಾರ್ಯನಿರ್ವಹಿಸಲು ಅವಕಾಶ ನೀಡಿರುವ ಸಂದರ್ಭದಲ್ಲಿ ಚಿತ್ರಮಂದಿರಗಳಿಗೆ ಏಕೆ ಅವಕಾಶ ನೀಡಬಾರದು ಎಂದು ನಟ ಪುನೀತ್‌ ರಾಜ್‌ಕುಮಾರ್ ಕೂಡಾ ಟ್ವೀಟ್‌ ಮೂಲಕ ಪ್ರಶ್ನಿಸಿದ್ದಾರೆ.

‘ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗಂಜಿದಡೆಂತಯ್ಯಾ? ಊರೆಲ್ಲ ಜನಜಂಗುಳಿ ತುಂಬಿ ತುಳುಕಿರಲು ಥಿಯೇಟರ್‌ ಒಳಗೆ ಮಾತ್ರ ಕೊರೊನಾಗೆ ಅಂಜಿದೊಡೆಂತಯ್ಯ’ ಎಂದು ತಮ್ಮದೇ ಶೈಲಿಯಲ್ಲಿ ನಟ ಧನಂಜಯ್‌ ಸರ್ಕಾರದ ನಿರ್ಧಾರವನ್ನು ಟೀಕಿಸಿದ್ದಾರೆ. ರಾಜ್ಯದಾದ್ಯಂತ ಹಲವರಿಗೆ ಸಿನಿಮಾ ಜೀವನಾಧಾರವಾಗಿದೆ ಎನ್ನುವುದನ್ನು ನಾವು ಮರೆಯುತ್ತಿದ್ದೇವೆಯೇ ಎಂದು ನಟ ರಕ್ಷಿತ್‌ ಶೆಟ್ಟಿ ಧ್ವನಿಗೂಡಿಸಿದ್ದಾರೆ. ನಟ ದುನಿಯಾ ವಿಜಯ್‌, ಚಿತ್ರ ನಿರ್ದೇಶಕ ಪ್ರಶಾಂತ್‌ ನೀಲ್‌ ಸೇರಿದಂತೆ ಹಲವರೂ ಈ ಕುರಿತು ಟ್ವೀಟ್‌ ಮಾಡಿದ್ದಾರೆ.

ಚಿತ್ರಮಂದಿರದಲ್ಲಿ ಶೇ 100ರಷ್ಟು ಆಸನ ಭರ್ತಿ: ಮುಖ್ಯಮಂತ್ರಿ ಜೊತೆ ಸಭೆ

ಕೇಂದ್ರ ಸರ್ಕಾರವು ಚಿತ್ರಮಂದಿರಗಳಲ್ಲಿ ಫೆ. 1ರಿಂದ ಪೂರ್ಣ ಪ್ರಮಾಣದ ಆಸನ ಭರ್ತಿಗೆ ಅವಕಾಶ ಕೊಟ್ಟಿದ್ದರೂ ರಾಜ್ಯ ಸರ್ಕಾರ ಶೇ 50ರಷ್ಟು ಆಸನ ಭರ್ತಿಗೆ ಮಾತ್ರ ಅವಕಾಶ ನೀಡಿ ನಿರ್ಬಂಧ ಮುಂದುವರಿಸಿರುವುದಕ್ಕೆ ಚಂದನವನದ ಹಲವು ನಟರು ವಿರೋಧ ವ್ಯಕ್ತಪಡಿಸಿದ ಬೆನ್ನಲ್ಲೇ, ಈ ಕುರಿತು ಮುಖ್ಯಮಂತ್ರಿ ಜೊತೆ ಸಭೆ ನಡೆಸಿ ನಿರ್ಧಾರ ಕೈಗೊಳ್ಳುವುದಾಗಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಟ್ವೀಟ್‌ ಮಾಡಿದ್ದಾರೆ.

‘ಕೊರೊನಾ ಬಿಕ್ಕಟ್ಟಿನಿಂದ ಉಂಟಾದ ಲಾಕ್‌ಡೌನ್‌ಮತ್ತು ನಂತರದ ದಿನಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಹೇರಲಾಗಿದ್ದ ನಿರ್ಬಂಧಗಳಿಂದ ನಷ್ಟ ಅನುಭವಿಸಿದ ಕ್ಷೇತ್ರಗಳಲ್ಲಿ ಚಿತ್ರರಂಗವೂ ಒಂದು ಎಂಬ ಅರಿವಿದೆ. ಚಿತ್ರರಂಗ ಜನರಿಗೆ ಮನರಂಜನೆ ನೀಡುವುದಷ್ಟೇ ಅಲ್ಲದೆ ಸಾವಿರಾರು ಜನರಿಗೆ ಜೀವನೋಪಾಯ ಒದಗಿಸಿರುವ ಉದ್ಯಮವೂ ಹೌದು. ನಾಡಿನ ಸಮಸ್ತ ಜನರ ಆರೋಗ್ಯ ಮತ್ತು ಚಿತ್ರೋದ್ಯಮದ ಒಳಿತು ಎರಡನ್ನೂ ಗಮನದಲ್ಲಿ ಇಟ್ಟುಕೊಂಡು ತಜ್ಞ ವೈದ್ಯರು ಹಾಗೂ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಚಿತ್ರಮಂದಿರಗಳನ್ನು ಪೂರ್ಣ ಪ್ರಮಾಣದಲ್ಲಿ ತೆರೆಯುವ ಕುರಿತು ಶೀಘ್ರವೇ ಸೂಕ್ತ ನಿರ್ಧಾರ ಕೈಗೊಳ್ಳುವ ಭರವಸೆ ನೀಡುತ್ತೇನೆ’ ಎಂದು ಸುಧಾಕರ್‌ ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.