
ಡಿಸೆಂಬರ್ ಅಂತ್ಯದಲ್ಲಿ ಸ್ಟಾರ್‌ಗಳ ಎರಡು ಸಿನಿಮಾಗಳು ಬಿಡುಗಡೆಗೊಂಡ ಪರಿಣಾಮ ಈ ವಾರ ಚಿತ್ರಮಂದಿರಗಳಲ್ಲಿ ಪೈಪೋಟಿ ಇಲ್ಲ. ಹೊಸ ವರ್ಷದ ಮೊದಲ ವಾರ ಎರಡು ಸಿನಿಮಾಗಳು ಮಾತ್ರ ತೆರೆ ಕಾಣುತ್ತಿವೆ.
ತೀರ್ಥರೂಪ ತಂದೆಯವರಿಗೆ
‘ಹೊಂದಿಸಿ ಬರೆಯಿರಿ’ ಸಿನಿಮಾದ ಮೂಲಕ ಗುರುತಿಸಿಕೊಂಡಿದ್ದ ರಾಮೇನಹಳ್ಳಿ ಜಗನ್ನಾಥ್ ನಿರ್ದೇಶನದ ಚಿತ್ರ ಗುರುವಾರವೇ ತೆರೆಕಂಡಿದೆ. ಬದುಕಿನಲ್ಲಾದ ಒಂದು ಚಿಕ್ಕ ತಪ್ಪು ಕುಟುಂಬವನ್ನು ಎಷ್ಟು ದೂರ ಮಾಡುತ್ತದೆ, ಒಂದಾಗಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬ ಆಶಯದ ಜೊತೆಗೆ ತಂದೆ ತಾಯಿ ಮೌಲ್ಯಗಳನ್ನು ಸಾರುವ ಚಿತ್ರವಿದು.
ನಿಹಾರ್ ಮುಖೇಶ್ ನಾಯಕ. ಸಿತಾರಾ, ರಾಜೇಶ್ ನಟರಂಗ ಪ್ರಮುಖ ಪಾತ್ರಗಳಲ್ಲಿದ್ದಾರೆ. ರವೀಂದ್ರ ವಿಜಯ್, ಅಜಿತ್ ಹಂದೆ ಸೇರಿದಂತೆ ಅನುಭವಿ ತಾರಾಬಳಗ ಚಿತ್ರದಲ್ಲಿದೆ. ಚಿತ್ರವು ‘ಜೈ ಚಾಮುಂಡೇಶ್ವರಿ ಪ್ರೊಡಕ್ಷನ್ಸ್’ ಮೂಲಕ ನಿರ್ಮಾಣವಾಗಿದ್ದು, ರಾಮೇನಹಳ್ಳಿ ಜಗನ್ನಾಥ್ ಅವರೇ ಕಥೆ ಬರೆದಿದ್ದಾರೆ.
ಕನ್ನಡ ಮತ್ತು ತೆಲುಗು ಎರಡೂ ಭಾಷೆಗಳಲ್ಲಿ ಚಿತ್ರೀಕರಣಗೊಂಡಿದೆ. ಚಿತ್ರಕ್ಕೆ ದೀಪಕ್ ಯರಗೇರಾ ಛಾಯಾಚಿತ್ರಗ್ರಹಣ, ಜೋ ಕಾಸ್ಟ್ ಸಂಗೀತ ಸಂಯೋಜನೆ ಮತ್ತು ಪ್ರಶಾಂತ್ ರಾಜಪ್ಪ ಸಂಭಾಷಣೆಯಿದೆ.
ಶಿವಲೀಲಾ
ಲಿಂಗತ್ವ ಅಲ್ಪಸಂಖ್ಯಾತರ ಕುರಿತಾದ ಕಥೆಯನ್ನು ಹೊಂದಿರುವ ಚಿತ್ರವಿದು. ಮಂಜಮ್ಮ ಜೋಗತಿ ಪ್ರಮುಖ ಪಾತ್ರದಲ್ಲಿದ್ದಾರೆ. ಅಶೋಕ್ ಜೈರಾಮ್ ನಿರ್ದೇಶನ ಮತ್ತು ನಿರ್ಮಾಣವಿದೆ.
ಸಮಾಜದಲ್ಲಿ ಲಿಂಗತ್ವ ಅಲ್ಪಸಂಖ್ಯಾತರು ಹಾಗೂ ಸಾಮಾನ್ಯರ ನಡುವೆ ಇರುವ ಭಿನ್ನಾಭಿಪ್ರಾಯಗಳನ್ನು ತೊಡೆದು ಹಾಕುವ ಬಲವಾದ ಪ್ರಯತ್ನವಿದು. ದೇಹದಲ್ಲಿ ಆಗುವ ಬದಲಾವಣೆಯಿಂದ ಬಹುತೇಕ ಮಕ್ಕಳನ್ನು ಮನೆಯಿಂದ ಹೊರಗೆ ಹಾಕುತ್ತಾರೆ. ಆ ಮಕ್ಕಳು ಸಮಾಜದಲ್ಲಿ ಬದುಕಲು ಪಡುವ ಯಾತನೆ, ಎದುರಾಗುವ ತೊಂದರೆಗಳನ್ನು ಚಿತ್ರದಲ್ಲಿ ತೋರಿಸಲಾಗಿದೆ ಎಂದಿದೆ ಚಿತ್ರತಂಡ.
ದಿವಾಕರ್‌ಗೆ ಸಂಸ್ಕೃತಿ ಜೋಡಿಯಾಗಿದ್ದಾರೆ. ರಮೇಶ್ ಕೃಷ್ಣ ಸಂಗೀತ, ಪ್ರವೀಣ್ ಶೆಟ್ಟಿ ಛಾಯಾಚಿತ್ರಗ್ರಹಣವಿದೆ. ⇒v
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.