ADVERTISEMENT

ಭಗವದ್ಗೀತೆಗೆ ಅವಮಾನ ಆರೋಪ; ಓಪನ್‌ಹೈಮರ್‌ ಚಿತ್ರದ ವಿರುದ್ಧ ಆಕ್ರೋಶ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಜುಲೈ 2023, 9:31 IST
Last Updated 23 ಜುಲೈ 2023, 9:31 IST
   

ಅಣುಬಾಂಬ್‌ ಪಿತಾಮಹ ರಾಬರ್ಟ್ ಓಪನ್‌ಹೈಮರ್‌ ಜೀವನಾಧಾರಿತ 'ಓಪನ್‌ ಹೈಮರ್‌' ಚಿತ್ರಕ್ಕೆ ಭಾರತ ಸೇರಿ ವಿಶ್ವದಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ ಇದೀಗ ಚಿತ್ರದ ಒಂದು ದೃಶ್ಯ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಭಗವದ್ಗೀತೆಗೆ ಅವಮಾನ ಮಾಡುವ ಮೂಲಕ ಚಿತ್ರ ಹಿಂದೂಗಳ ಭಾವನೆಗೆ ಧಕ್ಕೆ ಉಂಟು ಮಾಡಿದೆ ಎಂಬ ಆರೋಪ ಕೇಳಿಬಂದಿದೆ.

ಹಾಲಿವುಡ್‌ನ ಖ್ಯಾತ ನಿರ್ದೇಶಕ ಕ್ರಿಸ್ಟೋಫರ್‌ ನೋಲನ್‌ ಈ ಸಿನಿಮಾ ನಿರ್ದೇಶಿಸಿದ್ದಾರೆ. ನಟ ಕಿಲಿಯನ್‌ ಮರ್ಫಿ ಚಿತ್ರದಲ್ಲಿ ಹೈಮರ್‌ ಪಾತ್ರ ನಿರ್ವಹಿಸಿದ್ದಾರೆ. ಚಿತ್ರದುದ್ದಕ್ಕೂ ಹೈಮರ್‌ ಅವರ ವಿಜ್ಞಾನದ ಬಗೆಗಿನ ನಿಲುವು, ಜೀವನ, ಪ್ರೀತಿ, ಅಣುಬಾಂಬ್‌ ತಯಾರಿ, ಭೌತಶಾಸ್ತ್ರ ಎಲ್ಲವನ್ನು ಅಚ್ಚುಕಟ್ಟಾಗಿ ತೋರಿಸಲಾಗಿದೆ. ನಟ ಮರ್ಫಿ ಚಿತ್ರದಲ್ಲಿ ಅದ್ಭುತವಾಗಿ ನಟಿಸಿದ್ದಾರೆ.

ರಾಬರ್ಟ್‌ ಓಪನ್‌ ಹೈಮರ್‌ ತಮ್ಮ ನಿಜ ಜೀವನದಲ್ಲಿ ಹಿಂದೂ ಧರ್ಮಗ್ರಂಥ ಭಗವದ್ಗೀತೆಯನ್ನು ಓದಿರುವುದಾಗಿ, ಅದರಿಂದ ಸ್ಫೂರ್ತಿ ಪಡೆದಿರುವುದಾಗಿ ತಿಳಿಸಿದ್ದಾರೆ. ಚಿತ್ರದಲ್ಲಿಯೂ ಭಗವದ್ಗೀತೆಗೆ ಪ್ರಾಮುಖ್ಯತೆ ನೀಡಲಾಗಿದೆ. ಚಿತ್ರದ ದೃಶ್ಯವೊಂದರಲ್ಲಿ ಹೈಮರ್‌ ಪಾತ್ರದಾರಿ ಗಟ್ಟಿಯಾಗಿ ಭಗವದ್ಗೀತೆ ಓದುತ್ತಿರುತ್ತಾರೆ. ಈ ವೇಳೆ ಮಹಿಳೆ ಆತನ ಮೇಲೆ ಎರಗಿ ಲೈಂಗಿಕ ಕ್ರಿಯೆಗೆ ಪ್ರಚೋದಿಸುತ್ತಾಳೆ. ಈ ದೃಶ್ಯ ಇದೀಗ ಆಕ್ರೋಶದ ವಸ್ತುವಾಗಿದೆ.

ADVERTISEMENT

ಈ ಬಗ್ಗೆ ಟ್ವೀಟ್ ಮಾಡಿರುವ 'ಸೇವ್ ಕಲ್ಚರ್ ಸೇವ್ ಇಂಡಿಯಾ ಫೌಂಡೇಶನ್' ಸ್ಥಾಪಕ ಉದಯ್ ಮಹೂರ್ಕರ್ ಚಿತ್ರದ ದೃಶ್ಯದ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 'ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (ಸಿಬಿಎಫ್‌ಸಿ) ಈ ದೃಶ್ಯವನ್ನು ನೋಡಿಯೂ ಚಿತ್ರ ಪ್ರದರ್ಶನಕ್ಕೆ ಅನುಮೋದನೆ ನೀಡತೇ?' ಎಂದು ಕೇಳಿದ್ದಾರೆ.

'ಈ ವಿಚಾರದ ಬಗ್ಗೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ತುರ್ತು ಆಧಾರದ ಮೇಲೆ ತನಿಖೆ ನಡೆಸಬೇಕು. ಇದರಲ್ಲಿ ಭಾಗಿಯಾಗಿರುವವರಿಗೆ ಸೂಕ್ತ ಶಿಕ್ಷೆ ನೀಡಬೇಕು. ಕೇಂದ್ರ ಸಚಿವ ಅನುರಾಗ್‌ ಠಾಕೂರ್‌ ಅವರು ಇದರ ಬಗ್ಗೆ ಗಮನಕೊಡಬೇಕಿದೆ' ಎಂದು ಒತ್ತಾಯಿಸಿದ್ದಾರೆ.

ಓಪನ್‌ ಹೈಮರ್‌ ಚಿತ್ರ ವಿದೇಶದಲ್ಲಿ 'ಆರ್‌' ರೇಟಿಂಗ್‌ (ರಿಸ್ಟ್ರಿಕ್ಟಡ್‌) ಪಡೆದಿದ್ದು, ಲೈಂಗಿಕ ದೃಶ್ಯಗಳನ್ನು ತೆಗೆದ ನಂತರ ಭಾರತೀಯ ಸೆನ್ಸಾರ್‌ ಮಂಡಳಿ ಚಿತ್ರಕ್ಕೆ ಯು/ಎ ರೇಟಿಂಗ್‌ ನೀಡಿತ್ತು ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.