ADVERTISEMENT

ಆಸ್ಕರ್‌ ಪ್ರಶಸ್ತಿ ವೇದಿಕೆ ಸಿದ್ಧ: ’ನಾಟು–ನಾಟು’ ಗೀತೆ ಮೇಲೆ ಎಲ್ಲರ ಕಣ್ಣು

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2023, 14:29 IST
Last Updated 12 ಮಾರ್ಚ್ 2023, 14:29 IST
   

ಲಾಸ್‌ ಏಂಜಲಸ್‌: ಬಹುನಿರೀಕ್ಷಿತ ಆಸ್ಕರ್‌ ಪ್ರಶಸ್ತಿ 2023ಕ್ಕೆ ಕ್ಷಣಗಣನೆ ಆರಂಭವಾಗಿದೆ. ಇಂದು ರಾತ್ರಿ 8 ಗಂಟೆಗೆ(ಅಮೆರಿಕದ ಸಮಯ) ಲಾಸ್‌ ಏಂಜಲಸ್‌ನ ಡಾಲ್ಬಿ ಥಿಯೇಟರ್‌ನಲ್ಲಿ 95ನೇ ಆಸ್ಕರ್‌ ಪ್ರಶಸ್ತಿ ಪ್ರಧಾನ ಸಮಾರಂಭದ ನಡೆಯಲಿದ್ದು, ಭಾರತದಿಂದ ನಾಮನಿರ್ದೇಶಿತ ‘ಆರ್‌ಆರ್‌ಆರ್‌’ ಚಿತ್ರದ ನಾಟು–ನಾಟು ಗೀತೆಯ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.

ಪೀಪಲ್ ಮ್ಯಾಗಜೀನ್ ವರದಿ ಪ್ರಕಾರ, ಜಿಮ್ಮಿ ಕಿಮ್ಮೆಲ್ ಈ ವರ್ಷದ ಪ್ರಶಸ್ತಿ ಕಾರ್ಯಕ್ರಮ ಆಯೋಜನೆ ಮಾಡಲಿದ್ದಾರೆ. ಅವರು ಈ ಹಿಂದೆ 2017 ಮತ್ತು 2018 ರಲ್ಲಿ ಕಾರ್ಯಕ್ರಮ ನಡೆಸಿಕೊಟ್ಟಿದ್ದರು. ಕಳೆದ ವರ್ಷ ಆಮಿ ಶುಮರ್, ವಂಡಾ ಸೈಕ್ಸ್ ಮತ್ತು ರೆಜಿನಾ ಹಾಲ್ ಕಾರ್ಯಕ್ರಮ ನಡೆಸಿಕೊಟ್ಟಿದ್ದರು.

ಈ ವರ್ಷದ ಆಸ್ಕರ್ ನಿರೂಪಕರ ಪಟ್ಟಿಯಲ್ಲಿ ಭಾರತದ ನಟಿ ದೀಪಿಕಾ ಪಡುಕೋಣೆ ಸ್ಥಾನ ಪಡೆದಿದ್ದಾರೆ. ಡ್ವೇನ್ ಜಾನ್ಸನ್, ಮೈಕೆಲ್ ಬಿ. ಜೋರ್ಡಾನ್, ರಿಜ್ ಅಹ್ಮದ್, ಎಮಿಲಿ ಬ್ಲಂಟ್, ಗ್ಲೆನ್ ಕ್ಲೋಸ್, ಟ್ರಾಯ್ ಕೋಟ್ಸೂರ್, ಡ್ವೇನ್ ಜಾನ್ಸನ್, ಜೆನ್ನಿಫರ್ ಕೊನ್ನೆಲ್ಲಿ ಮೊದಲಾದವರು ಆಸ್ಕರ್‌ನ ಈ ಅಧಿಕೃತ ಪಟ್ಟಿಯಲ್ಲಿದ್ದಾರೆ.

ADVERTISEMENT

ಲೇಡಿ ಗಾಗಾ ಹೊರತುಪಡಿಸಿ, ಈ ವರ್ಷದ ಅತ್ಯುತ್ತಮ ಮೂಲ ಗೀತೆಗಾಗಿ ಎಲ್ಲಾ ಆಸ್ಕರ್ ನಾಮನಿರ್ದೇಶಿತರು ಮಾರ್ಚ್ 12 ರ ಸಮಾರಂಭದಲ್ಲಿ ಪ್ರದರ್ಶನ ನೀಡುವುದನ್ನು ಖಚಿತಪಡಿಸಲಾಗಿದೆ. ಆಸ್ಕರ್ ಸಮಾರಂಭದಲ್ಲಿ ಎಲ್ಲಾ ನಾಮನಿರ್ದೇಶಿತ ಹಾಡುಗಳನ್ನು ಹಾಡಲಾಗುತ್ತದೆ. ಈ ವರ್ಷ ರಾಹುಲ್ ಸಿಪ್ಲಿಗುಂಜ್ ಮತ್ತು ಕಾಲ ಭೈರವ (ನಾಟು– ನಾಟು), ರಿಹಾನ್ನಾ (ಲಿಫ್ಟ್ ಮಿ ಅಪ್), ಸೋಫಿಯಾ ಕಾರ್ಸನ್ ಮತ್ತು ಡಯೇನ್ ವಾರೆನ್, ಸ್ಟೆಫನಿ ಹ್ಸು, ಮತ್ತು ಡೇವಿಡ್ ಬೈರ್ನ್ ಮತ್ತು ಸನ್ ಲಕ್ಸ್ (ದಿಸ್ ಈಸ್ ಎ ಲೈಫ್) ನಾಮನಿರ್ದೇಶಿತರ ಪಟ್ಟಿಯಲ್ಲಿದ್ದಾರೆ.

ವಿಶ್ವದ ಅಗ್ರ ಗಣ್ಯರು ಆಸ್ಕರ್​ಗೆ ಬರಲಿದ್ದು, ಅವರಿಗೆಲ್ಲ ಆಯೋಜಕರ ಕಡೆಯಿಂದ ವಿಶೇಷ ಉಡುಗೊರೆಗಳು ದೊರೆಯಲಿವೆ. ಆಸ್ಕರ್​ಗೆ ನಾಮಿನೇಟ್ ಆಗಿರುವವರಿಗೆ ಒಂದು ಕೋಟಿಗೂ ಹೆಚ್ಚು ಮೌಲ್ಯದ ವಸ್ತುಗಳುಳ್ಳ ಗಿಫ್ಟ್ ಬ್ಯಾಗ್ ದೊರೆಯಲಿದೆ.

ಭಾರತಕ್ಕೆ ಈ ವರ್ಷದ ಆಸ್ಕರ್‌ ಪ್ರಶಸ್ತಿ ಸಮಾರಂಭ ಅತ್ಯಂತ ವಿಶೇಷವಾಗಿದೆ. ಈ ಬಾರಿ, ಮೂರು ಭಾರತೀಯ ಚಲನಚಿತ್ರಗಳು ಆಸ್ಕರ್‌ಗೆ ನಾಮನಿರ್ದೇಶನಗೊಂಡಿವೆ. ಗೋಲ್ಡನ್ ಗ್ಲೋಬ್ ಪ್ರಶಸ್ತಿಯನ್ನು ಗೆದ್ದ ನಾಟು–ನಾಟು ನೃತ್ಯ ಗೀತೆಗಾಗಿ ‘ಆರ್‌ಆರ್‌ಆರ್‌’ ಅತ್ಯುತ್ತಮ ಮೂಲ ಗೀತೆಗಾಗಿ ಶಾರ್ಟ್‌ಲಿಸ್ಟ್‌ ಆಗಿದೆ. ಶೌನಕ್ ಸೇನ್ ಅವರ ‘ಆಲ್ ದಟ್ ಬ್ರೀಥ್ಸ್’ ಅತ್ಯುತ್ತಮ ಸಾಕ್ಷ್ಯಚಿತ್ರಕ್ಕಾಗಿ ಮತ್ತು ಗುನೀತ್ ಮೊಂಗಾ ಅವರ ‘ದಿ ಎಲಿಫೆಂಟ್ ವಿಸ್ಪರರ್ಸ್’ ಅತ್ಯುತ್ತಮ ಸಾಕ್ಷ್ಯಚಿತ್ರ– ಕಿರುಚಿತ್ರ ವಿಭಾಗದಲ್ಲಿ ನಾಮನಿರ್ದೇಶನಗೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.