ADVERTISEMENT

ಅಭಿಮಾನಿಗಳೊಟ್ಟಿಗೆ ‘ಪೈಲ್ವಾನ್’ ವೀಕ್ಷಿಸಿದ ನಟ ಸುದೀಪ್

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2019, 6:47 IST
Last Updated 12 ಸೆಪ್ಟೆಂಬರ್ 2019, 6:47 IST
   

ಕೃಷ್ಣ ನಿರ್ದೇಶನದ ನಟ ಸುದೀಪ್‌ ನಟನೆಯ ‘ಪೈಲ್ವಾನ್‌’ ಚಿತ್ರ ಕನ್ನಡ ಸೇರಿದಂತೆ ತೆಲುಗು, ತಮಿಳು ಮತ್ತು ಮಲಯಾಳ ಭಾಷೆಯಲ್ಲಿ ಇಂದು ತೆರೆಕಂಡಿದ್ದು ಭರ್ಜರಿ ಓಪನಿಂಗ್‌ ಸಿಕ್ಕಿದೆ.

ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲಾ ಕೇಂದ್ರಗಳಲ್ಲಿ ಮುಂಜಾನೆಯಿಂದಲೇ ಮೊದಲ ಪ್ರದರ್ಶನ ನಡೆದಿದೆ. ಬೆಂಗಳೂರಿನ ಜೆ.ಪಿ. ನಗರದಲ್ಲಿ ಇರುವ ಸಿದ್ದೇಶ್ವರ ಚಿತ್ರಮಂದಿರದಲ್ಲಿ ಮುಂಜಾನೆ 4ಗಂಟೆಗೆ ಮೊದಲ ಪ್ರದರ್ಶನ ಶುರುವಾಯಿತು. ಕೆ.ಜಿ. ರಸ್ತೆಯಲ್ಲಿ ಇರುವ ಸಂತೋಷ್‌ ಚಿತ್ರಮಂದಿರದ ಮುಂಭಾಗ ಕಿಚ್ಚನ ಅಭಿಮಾನಿಗಳು ಮತ್ತು ಪ್ರೇಕ್ಷಕರು ಸಿನಿಮಾ ವೀಕ್ಷಿಸಲು ಜಮಾಯಿಸಿದ್ದರು. ಸುದೀಪ್‌ ಅವರು ಚಿತ್ರಮಂದಿರಕ್ಕೆ ಭೇಟಿ ನೀಡಿದ ಅಭಿಮಾನಿಗಳೊಟ್ಟಿಗೆ ಸಿನಿಮಾ ವೀಕ್ಷಿಸಿದರು.

ಮುಂಜಾನೆಯಿಂದಲೇ ಅಭಿಮಾನಿಗಳು ಥಿಯೇಟರ್‌ಗಳ ಮುಂದೆ ಸಾಲುಗಟ್ಟಿ ನಿಂತಿದ್ದರು. ಸುದೀಪ್‌, ಸುನಿಲ್‌ ಶೆಟ್ಟಿ ಅವರ ಕಟೌಟ್‌ಗಳಿಗೆ ಹೂವಿನ ಅಲಂಕಾರ ಮಾಡಿದ್ದರು. ಎಲ್ಲೆಡೆ ಕಿಚ್ಚನ ಪರ ಘೋಷಣೆ ಕೇಳಿಬರುತ್ತಿತ್ತು.

ADVERTISEMENT

ಹಿಂದಿಯಲ್ಲಿ ಶುಕ್ರವಾರದಿಂದ ಚಿತ್ರ ಬಿಡುಗಡೆಯಾಗಲಿದೆ ಎಂದು ವಿತರಕರು ಹೇಳಿದ್ದರು. ಆದರೆ, ಮಹಾರಾಷ್ಟ್ರದ ಕೆಲವೆಡೆ ‘ಪೈಲ್ವಾನ್‌’ನ ಹಿಂದಿ ಅವತರಣಿಕೆ ಬಿಡುಗಡೆಯಾಗಿದೆ ಎಂದು ಸುದ್ದಿ ಸಾಮಾಜಿಕ ಜಾಲ ತಾಣದಿಂದ ಹೊರಬಿದ್ದಿದೆ. ಈ ಕುರಿತು ಅಭಿಮಾನಿಗಳು ಸುದ್ದಿ ಹಂಚಿಕೊಂಡಿದ್ದಾರೆ.

‘ಹೆಬ್ಬುಲಿ’ ಚಿತ್ರದ ಬಳಿಕ ಕೃಷ್ಣ ಮತ್ತು ಸುದೀಪ್‌ ಕಾಂಬಿನೇಷನ್‌ನಡಿ ಮೂಡಿಬರುತ್ತಿರುವುದು ಎರಡನೇ ಚಿತ್ರ ಇದು. ಹಾಗಾಗಿ, ಈ ಜೋಡಿ ಮೇಲೆ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿತ್ತು. ಕರ್ನಾಟಕದಲ್ಲಿ 400ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಪೈಲ್ವಾನ್‌ ಅಖಾಡಕ್ಕೆ ಇಳಿದಿದ್ದಾನೆ. ರಾಜ್ಯದ ವಿವಿಧೆಡೆ ಹಲವು ಕಾರಣಗಳಿಂದ ಸ್ಥಗಿತಗೊಂಡಿದ್ದ 20ಕ್ಕೂ ಹೆಚ್ಚು ಚಿತ್ರಮಂದಿರಗಳುಪೈಲ್ವಾನ್‌ಗಾಗಿಯೇ ನವೀಕರಣಗೊಂಡಿರುವುದು ವಿಶೇಷ.

ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳ ಭಾಷೆಯಲ್ಲಿ 3 ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗಿದೆ. ಹಿಂದಿಯಲ್ಲಿ 2,400ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ. ‘ಕೆಜಿಎಫ್‌ ಚಾಪ್ಟರ್‌ 1’ ಚಿತ್ರದ ಬಳಿಕ ಅತಿಹೆಚ್ಚಿನ ಚಿತ್ರಮಂದಿರಗಳಲ್ಲಿ ತೆರೆಕಂಡ ಶ್ರೇಯಕ್ಕೆ ಪೈಲ್ವಾನ್‌ ಪಾತ್ರವಾಗಿದೆ.

ಬಾಲಿವುಡ್‌ ನಟ ಸುನಿಲ್ ಶೆಟ್ಟಿ ಈ ಚಿತ್ರದ ಮೂಲಕ ಮೊದಲ ಬಾರಿಗೆ ಕನ್ನಡದಲ್ಲಿ ನಟಿಸಿದ್ದಾರೆ. ಜೊತೆಗೆ, ಹಿಂದಿಯ ಕಿರುತೆರೆ ನಟಿ ಆಕಾಂಕ್ಷಾ ಸಿಂಗ್‌ ಅವರು ಕಿಚ್ಚನಿಗೆ ಜೋಡಿಯಾಗಿದ್ದಾರೆ. ಸ್ವಪ್ನಾ ಕೃಷ್ಣ ಬಂಡವಾಳ ಹೂಡಿದ್ದಾರೆ. ಅರ್ಜುನ್‌ ಜನ್ಯ ಸಂಗೀತ ಸಂಯೋಜಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.