ADVERTISEMENT

ಬಾಂಗ್ಲಾದೇಶದಲ್ಲಿ ‘ಪಠಾಣ್‌’ : 8 ವರ್ಷಗಳ ಬಳಿಕ ಬಾಲಿವುಡ್‌ ಸಿನಿಮಾ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2023, 9:51 IST
Last Updated 21 ಫೆಬ್ರುವರಿ 2023, 9:51 IST
   

ಗಳಿಕೆಯಲ್ಲಿ ₹1000 ಕೋಟಿ ಕ್ಲಬ್‌ ಸೇರಿರುವ ಶಾರುಖ್‌ ಖಾನ್‌, ದೀಪಿಕಾ ಪಡುಕೋಣೆ ಅಭಿನಯದ ‘ಪಠಾಣ್‌’ ಚಿತ್ರ ಫೆ.24ರಂದು ಬಾಂಗ್ಲಾದೇಶದಲ್ಲಿಯೂ ತೆರೆ ಕಾಣಲಿದೆ. ಇದರೊಂದಿಗೆ 8 ವರ್ಷಗಳ ಬಳಿಕ ಮೊದಲ ಸಲ ಬಾಂಗ್ಲಾದಲ್ಲಿ ಬಾಲಿವುಡ್‌ ಚಿತ್ರವೊಂದು ಬಿಡುಗಡೆಗೊಳ್ಳುತ್ತಿದೆ.

‘ಹಿಂದಿ ಚಿತ್ರವನ್ನು ಬಾಂಗ್ಲಾದೇಶದಲ್ಲಿ ಬಿಡುಗಡೆ ಮಾಡುವುದರಿಂದ ಸ್ಥಳೀಯ ಉದ್ಯಮಕ್ಕೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಚಿತ್ರೋದ್ಯಮದ 19 ಒಕ್ಕೂಟಗಳು ನಿರ್ಧಾರ ಮಾಡಿವೆ. ಹೀಗಾಗಿ ಫೆ.24ರಿಂದ ಬಾಂಗ್ಲಾದಲ್ಲಿ ಪಠಾಣ್‌ ಚಿತ್ರ ಪ್ರದರ್ಶನಗೊಳ್ಳಲಿದೆ’ ಎಂದು ಬಾಂಗ್ಲಾದ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹೇಳಿದೆ.

ಸ್ಥಳೀಯ ಸಿನಿಮಾ ಗಳಿಕೆಗೆ ಹೊಡೆತವಾಗಲಿದೆ ಎಂಬ ಕಾರಣಕ್ಕೆ ಬಾಂಗ್ಲಾದಲ್ಲಿ ಬಾಲಿವುಡ್‌ ಸಿನಿಮಾ ಪ್ರದರ್ಶನಕ್ಕೆ ಅವಕಾಶ ನೀಡುತ್ತಿರಲಿಲ್ಲ. ಕಳೆದ 5 ದಶಕಗಳಿಂದ ಭಾರತೀಯ ಚಿತ್ರ ಪ್ರದರ್ಶನಕ್ಕೆ ಬಾಂಗ್ಲಾದಲ್ಲಿ ನಿಷೇಧವಿತ್ತು. 2015ರಲ್ಲಿ ಸಲ್ಮಾನ್​ ಖಾನ್​ ಅವರ ‘ವಾಂಟೆಡ್​(2009)’ ಚಿತ್ರ ಬಾಂಗ್ಲಾದಲ್ಲಿ ತೆರೆ ಕಂಡಿತ್ತು. ಆದರೆ ಸ್ಥಳೀಯ ಚಿತ್ರೋದ್ಯಮ ಒಕ್ಕೂಟಗಳಿಂದ ತೀವ್ರ ವಿರೋಧ ವ್ಯಕ್ತವಾಗಿದ್ದರಿಂದ ಈ ಚಿತ್ರವನ್ನು ಅಲ್ಲಿ ಬ್ಯಾನ್‌ ಮಾಡಲಾಗಿತ್ತು. ಅದಾದ ಬಳಿಕ ಯಾವುದೇ ಬಾಲಿವುಡ್‌ ಚಿತ್ರ ಬಿಡುಗಡೆಗೊಂಡಿರಲಿಲ್ಲ.

ADVERTISEMENT

ಬಾಂಗ್ಲಾದಲ್ಲಿ ಹಾಲಿವುಡ್‌ ಚಿತ್ರ ಪ್ರದರ್ಶನಕ್ಕೆ ಅವಕಾಶವಿದೆ. ಹೀಗಾಗಿ ಬಾಲಿವುಡ್‌ ಚಿತ್ರಗಳಿಗೆ ನಿಷೇಧ ಹೇರುವುದರಲ್ಲಿ ಅರ್ಥವಿಲ್ಲ ಎಂಬ ಅಭಿಪ್ರಾಯ ಚಿತ್ರೋದ್ಯಮ ಒಕ್ಕೂಟಗಳ ಸಭೆಯಲ್ಲಿ ವ್ಯಕ್ತವಾಗಿದ್ದು, ಪಠಾಣ್‌ಗೆ ಅವಕಾಶ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.