ADVERTISEMENT

ಫಿಲಿಪೀನ್ಸ್‌ನಲ್ಲಿ ಯೂಟರ್ನ್‌ ಸದ್ದು

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2020, 19:30 IST
Last Updated 16 ಮಾರ್ಚ್ 2020, 19:30 IST
‘ಯೂಟರ್ನ್‌’ ಚಿತ್ರದ ‍ಪೋಸ್ಟರ್
‘ಯೂಟರ್ನ್‌’ ಚಿತ್ರದ ‍ಪೋಸ್ಟರ್   

ಫಿಲಿಪಿನೊ ಭಾಷೆಯಲ್ಲಿ ಪವನ್‌ ಕುಮಾರ್ ನಿರ್ದೇಶನದ ‘ಯೂಟರ್ನ್‌’ ಚಿತ್ರದ ರಿಮೇಕ್‌ಗೆ ಸಿದ್ಧತೆ ನಡೆದಿದೆ. ಈ ಭಾಷೆಯಲ್ಲಿ ರಿಮೇಕ್‌ ಆದ ಕನ್ನಡದ ಮೊದಲ ಸಿನಿಮಾ ಎಂಬ ಹೆಗ್ಗಳಿಕೆಗೂ ಇದು ಪಾತ್ರವಾಗಲಿದೆ. ಈ ಕುರಿತು ಪವನ್ ಅವರೇ ತಮ್ಮ ಟ್ವಿಟರ್, ಫೇಸ್‌ಬುಕ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

‘ಭಾರತದ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸು ಕಂಡ ಯೂಟರ್ನ್‌ ಚಿತ್ರವನ್ನು ಕಿಮ್ ಚಿಯು, ಡ ಗಜ್ಮಾನ್‌ ಮತ್ತು ಟೋನಿ ಲ್ಯಾಬ್ರಸ್ಕಾ ಅವರು ಮೊದಲ ಬಾರಿಗೆ ಫಿಲಿಪಿನೊ ಭಾಷೆಗೆ ತರುತ್ತಿದ್ದಾರೆ. 2016ರಲ್ಲಿ ತೆರೆಕಂಡ ಈ ಸಿನಿಮಾ ನಿಗೂಢತೆ, ಥ್ರಿಲ್ಲರ್ ಅಂಶಗಳನ್ನು ಹೊಂದಿದೆ’ ಎಂದು ಫಿಲಿಪ್ಪೀನ್ಸ್‌ನ ‘ಇನ್‌ಕ್ವೈರರ್’ ಪತ್ರಿಕೆ ಸುದ್ದಿ ಪ್ರಕಟಿಸಿದೆ.

ಫಿಲಿಪೀನ್ಸ್‌ನಲ್ಲಿ ‘ಕ್ಲಾರಿಟಾ’ ಎನ್ನುವ ಹಾರರ್ ಸಿನಿಮಾ ನಿರ್ದೇಶಿಸಿದ್ದ ಡೆರಿಕ್ ಕ್ಯಾಬ್ರಿಡೊ ಅವರೇ ಯೂಟರ್ನ್‌ ರಿಮೇಕ್‌ಗೆ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಇದರಲ್ಲಿ ನಟಿಸಲಿರುವ ಮೂವರೂ ನಟರು ಈ ಚಿತ್ರದ ಕೆಲಸಗಳ ವಿಚಾರದಲ್ಲಿ ಉತ್ಸುಕರಾಗಿದ್ದಾರಂತೆ.

ADVERTISEMENT

ಕನ್ನಡದಲ್ಲಿ ಮೊದಲಿಗೆ ತೆರೆಕಂಡ ಈ ಚಿತ್ರ ನಂತರ ಮಲಯಾಳ, ತೆಲುಗು ಮತ್ತು ತಮಿಳಿನಲ್ಲೂ ಬಿಡುಗಡೆಯಾಗಿತ್ತು. 2019ರಲ್ಲಿ ಸಿಂಹಳ ಭಾಷೆಯಲ್ಲಿಯೂ ರಿಮೇಕ್‌ ಆಗಿತ್ತು. ಹಿಂದಿಯಲ್ಲೂ ರಿಮೇಕ್‌ ಆಗುತ್ತಿದೆ.

ಕನ್ನಡದಲ್ಲಿ ಶ್ರದ್ಧಾ ಶ್ರೀನಾಥ್ ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದರು. ರೋಜರ್ ನಾರಾಯಣ್, ದಿಲೀಪ್ ರಾಜ್ ಮತ್ತು ರಾಧಿಕಾ ಚೇತನ್ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಪವನ್ ಕುಮಾರ್ ಸ್ಟುಡಿಯೋಸ್ ಸಂಸ್ಥೆ ಇದಕ್ಕೆ ಬಂಡವಾಳ ಹೂಡಿತ್ತು.

‘ಈ ಚಿತ್ರದ ರಿಮೇಕ್‌ ಹಕ್ಕುಗಳನ್ನು ಐದಾರು ತಿಂಗಳ ಹಿಂದೆಯೇ ನಾನು ಫಿಲಿಪಿನೊ ಭಾಷೆಗೆ ಮಾರಾಟ ಮಾಡಿದ್ದೆ. ಚಿತ್ರದ ಪ್ರೀಪ್ರೊಡಕ್ಷನ್‌ ಕೆಲಸಗಳು ಆರಂಭವಾಗುತ್ತಿರುವ ಬಗ್ಗೆ ಕೆಲವು ದಿನಗಳ ಹಿಂದೆ ಮಾಹಿತಿ ತಿಳಿಯಿತು. ಸಿನಿಮಾ ಯಾವಾಗ ಬಿಡುಗಡೆಯಾಗಲಿದೆ ಎಂಬುದರ ಮಾಹಿತಿ ಇಲ್ಲ’ ಎಂದು ಪವನ್ ಕುಮಾರ್ ‘ಪ್ರಜಾಪ್ಲಸ್‌’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.