ADVERTISEMENT

ಶೀಘ್ರವೇ ಒಟಿಟಿಯಲ್ಲಿ 'ಪೆಪ್ಪೆರೆರೆ ಪೆರೆರೆರೆ'

ಸಿನಿಮಾ ಬಿಡುಗಡೆ ಮುಂದೂಡಿಕೆ: ನಿರ್ದೇಶಕ ಶೋಭರಾಜ್ ಪಾವೂರು

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2020, 14:44 IST
Last Updated 16 ಡಿಸೆಂಬರ್ 2020, 14:44 IST
ಪೆಪ್ಪೆರೆರೆ ಪೆರೆರೆರೆ
ಪೆಪ್ಪೆರೆರೆ ಪೆರೆರೆರೆ   

ಮಂಗಳೂರು: ‘ಪೆಪ್ಪೆರೆರೆ ಪೆರೆರೆರೆ’ ಸಿನಿಮಾವನ್ನು ವಿಶ್ವದಾದ್ಯಂತ ಇರುವ ತುಳುವರಿಗೆ ಏಕಕಾಲದಲ್ಲಿ ಒಟಿಟಿ ಮೂಲಕ ತೋರಿಸುವ ವ್ಯವಸ್ಥೆಯನ್ನು ಮಾಡಲಾಗುತ್ತಿದ್ದು, ಸಿನಿಮಾ ಬಿಡುಗಡೆಯ ದಿನಾಂಕವನ್ನು ಮುಂದೂಡಿದ್ದೇವೆ ಎಂದು ನಿರ್ದೇಶಕ ಶೋಭರಾಜ್ ಪಾವೂರು ಮನವಿ ಮಾಡಿದರು.

‘ನಮ್ಮ ಸಿನಿಮಾದ ಟಿಕೆಟ್ ಖರೀದಿಸಿದವರಿಗೆ ಪ್ರತಿ ಮಾಹಿತಿಯನ್ನು ಕಳುಹಿಸುತ್ತಿದ್ದೇವೆ. ಟಿಕೆಟ್ ಖರೀದಿಸಿದವರಿಗೆ ಒಟಿಟಿ ಮೂಲಕ ಲಿಂಕ್ ಮತ್ತು ಒಟಿಪಿ ಕಳುಹಿಸಿ, ಸಿನಿಮಾ ತೋರಿಸುವ ಯೋಜನೆ ನಮ್ಮದಾಗಿದೆ’ ಎಂದು ಬುಧವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಹೇಳಿದರು.

‘ಆದರೆ, ನಮ್ಮಿಂದ ಕೆಲವರು ಸಿನಿಮಾದ ಟಿಕೆಟ್ ಕೊಂಡೊಯ್ದಿದ್ದು, ಪ್ರೇಕ್ಷಕರಿಗೆ ನೀಡಿದ್ದಾರೆ. ಆದರೆ, ಪ್ರೇಕ್ಷಕರು ನೀಡಿದ ಹಣವನ್ನು ವಾಪಸ್ ನಮಗೆ ಪಾವತಿಸಿಲ್ಲ. ಅಂತವರ ಹೆಸರು ಇನ್ನೂ ನಮ್ಮಲ್ಲಿ ನೋಂದಣಿ ಆಗಿಲ್ಲ. ಇಂತಹ ಪ್ರೇಕ್ಷಕರ ಕಡೆಯಿಂದ ನಮಗೆ ಫೋನ್‌ ಕರೆಗಳು ಬರುತ್ತಿವೆ. ಟಿಕೆಟ್ ಖರೀದಿಸಿದವರಿಗೆ ನ್ಯಾಯ ಒದಗಿಸುವ ಸಲುವಾಗಿ ಎಲ್ಲರ ಮಾಹಿತಿಯನ್ನು ಸಂಗ್ರಹಿಸುತ್ತಿದ್ದೇವೆ’ ಎಂದು ವಿವರಿಸಿದರು.

ADVERTISEMENT

‘ಸಿನಿಮಾ ಸ್ಟ್ರೀಮಿಂಗ್ ಕುರಿತು ಈ ಹಿಂದೆ ಒಂದು ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದೆವು. ಆದರೆ ಆ ಸಂಸ್ಥೆ ಹಾಗೂ ಚಿತ್ರತಂಡದಿಂದಲೂ ನಿಗದಿತ ಗುರಿ ತಲುಪಲು ಸಾಧ್ಯವಾಗಿಲ್ಲ. ಅದಕ್ಕಾಗಿ ನಮ್ಮದೇ ನಿಶಾನ್ ವರುಣ್ ಮೂವೀಸ್ ಸಂಸ್ಥೆಯ ಮೂಲಕವೇ ಸ್ಟ್ರೀಮಿಂಗ್ ಮಾಡುವ ನಿರ್ಧಾರಕ್ಕೆ ಬಂದಿದ್ದೇವೆ’ ಎಂದು ಮಾಹಿತಿ ನೀಡಿದರು.

‘ಕೋವಿಡ್ ಮಾರ್ಗಸೂಚಿ ಪಾಲನೆ, ಚಿತ್ರಮಂದಿರ ಹಾಗೂ ಮಲ್ಟಿಫ್ಲೆಕ್ಸ್‌ಗಳ ಬಾಡಿಗೆ ಹಾಗೂ ಮನೋರಂಜನಾ ತೆರಿಗೆಗಳಿಂದಾಗಿ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಮಾಡುವುದು ಆರ್ಥಿಕವಾಗಿ ಅಸಾಧ್ಯವಾಗಿದೆ. ಈ ಎಲ್ಲ ಕಾರಣದಿಂದ ‘ಪೆಪ್ಪೆರೆರೆ ಪೆರೆರೆರೆ’ ಸಿನಿಮಾ ಬಿಡುಗಡೆ ಮುಂದೂಡಲಾಗಿದೆ’ ಎಂದು ಅವರು ವಿನಂತಿಸಿದರು.

‘ಪೆಪ್ಪೆರೆರೆ ಪೆರೆರೆರೆ’ ಸಿನಿಮಾ ತಂಡವು ತುಳುಕೂಟ ಕುವೈತ್‌, ಒಮನ್ ತುಳುವೆರ್, ಯುಎಇ ತುಳುವೆರ್, ಬಿರುವೆರ್ ಕುಡ್ಲ ಮತ್ತಿತ್ತರ ಸಂಘಟನೆಗಳ ಜೊತೆ ಸೇರಿ ಹಲವು ಅಶಕ್ತರಿಗೆ ನೆರವು ನೀಡುವ ಕಾರ್ಯವನ್ನೂ ಮಾಡುತ್ತಿದೆ’ ಎಂದರು.

ಚಿತ್ರ ತಂಡದ ನಿಶಾಂತ್ ಕೃಷ್ಣ ಭಂಡಾರಿ, ವರುಣ್ ಸಾಲಿಯಾನ್, ಪ್ರಕಾಶ್ ಕುತ್ತೆತ್ತೂರು, ಪ್ರಶಾಂತ್ ಅಂಚನ್ ಯೆಯ್ಯಾಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.