ADVERTISEMENT

ಭರದಿಂದ ಸಾಗಿದ ನಟ ಗಣೇಶ್ ಅಭಿನಯದ ‘ಪಿನಾಕ’ ಚಿತ್ರದ ಚಿತ್ರೀಕರಣ

​ಪ್ರಜಾವಾಣಿ ವಾರ್ತೆ
Published 9 ಜೂನ್ 2025, 19:58 IST
Last Updated 9 ಜೂನ್ 2025, 19:58 IST
ಗಣೇಶ್‌ 
ಗಣೇಶ್‌    

‘ಕೃಷ್ಣಂ ಪ್ರಣಯ ಸಖಿ’ ಬೆನ್ನಲ್ಲೇ ನಟ ಗಣೇಶ್‌ ಒಪ್ಪಿಕೊಂಡಿದ್ದ ‘ಪಿನಾಕ’ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ. ಬಿ.ಧನಂಜಯ್‌ ಆ್ಯಕ್ಷನ್‌ ಕಟ್‌ ಹೇಳುತ್ತಿರುವ ಈ ಚಿತ್ರದ ಶೂಟಿಂಗ್‌  ನೆಲಮಂಗಲದ ಸಮೀಪ ನಡೆಯುತ್ತಿದೆ. 

ಚಿತ್ರಕ್ಕಾಗಿ ಆರು ಎಕರೆ ಪ್ರದೇಶದಲ್ಲಿ ದೊಡ್ಡ ಸೆಟ್‍ ಹಾಕಲಾಗಿದ್ದು, 500 ವರ್ಷಗಳ ಹಿಂದಿನ ದೇವಗಿರಿ ಎಂಬ ಸಾಮ್ರಾಜ್ಯವನ್ನು ಸೃಷ್ಟಿಸಲಾಗಿದೆ. ಸೆಟ್‌ ಬಳಸಿ ಒಂದು ನಗರವನ್ನೇ ನಿರ್ಮಿಸಲಾಗಿದ್ದು, ಮಧ್ಯದಲ್ಲೊಂದು ಅರ್ಧನಾರೀಶ್ವರನ ಪ್ರತಿಮೆಯನ್ನು ನಿಲ್ಲಿಸಲಾಗಿದೆ. ಇನ್ನೂ 15 ದಿನ ಇದೇ ಸೆಟ್‌ನಲ್ಲಿ ಚಿತ್ರೀಕರಣ ನಡೆಯಲಿದ್ದು, ಚಿತ್ರದಲ್ಲಿ ಸೆಟ್‌ ಮಹತ್ವದ ಪಾತ್ರ ವಹಿಸುವುದರಿಂದ ಚಿತ್ರತಂಡವು ಸೆಟ್‍ ಚಿತ್ರಗಳನ್ನು ಗೌಪ್ಯವಾಗಿಟ್ಟಿದೆ. 

‘ಪಿನಾಕ’ ಎಂದರೆ‌ ಶಿವನ ತ್ರಿಶೂಲ. ಇದನ್ನೇ ಶೀರ್ಷಿಕೆಯನ್ನಾಗಿ ಇಡಲಾಗಿದ್ದು, ಗಣೇಶ್ ಈ ಚಿತ್ರದಲ್ಲಿ ‘ಕ್ಷುದ್ರ’ ಹಾಗೂ ‘ರುದ್ರ’ ಎಂಬ ಎರಡು ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಚಿತ್ರತಂಡ ಸುದ್ದಿಗೋಷ್ಠಿ ಮೂಲಕ ಚಿತ್ರದ ವಿವರಣೆ ನೀಡಿತು. 

ADVERTISEMENT

‘ಇದು ನನ್ನ ಚೊಚ್ಚಲ ಸಿನಿಮಾ’ ಎಂದು ಮಾತು ಆರಂಭಿಸಿದ ನಿರ್ದೇಶಕ ಧನಂಜಯ್‌, ‘ಇದೀಗ ಎರಡನೇ ಹಂತದ ಚಿತ್ರೀಕರಣ ನಡೆಸುತ್ತಿದ್ದೇವೆ. ಈ ಹಂತದಲ್ಲಿ ಹೆಚ್ಚಿನ ಗ್ರಾಫಿಕ್ಸ್‌ ಇದೆ. ಹೀಗಾಗಿ ಶೂಟಿಂಗ್‌ ಜೊತೆ ಜೊತೆಗೇ ಹೈದರಾಬಾದ್‌ನಲ್ಲಿ ಸಿಜಿ ಕೆಲಸಗಳೂ ನಡೆಯುತ್ತಿವೆ. ಮಳೆ ಗಾಳಿಯ ನಡುವೆ ಕಳೆದ ಒಂದು ತಿಂಗಳಿನಿಂದ ಚಿತ್ರೀಕರಣ ಮಾಡುತ್ತಿದ್ದೇವೆ. ಇದೊಂದು ಕಾಲ್ಪನಿಕ ಕಥೆ. ಪ್ರತಿನಿತ್ಯ 800–900 ಜೂನಿಯರ್‌ ಆರ್ಟಿಸ್ಟ್‌ಗಳು ಸೆಟ್‌ನಲ್ಲಿದ್ದರು. ಸಂತೋಷ್‌ ಪಾಂಚಾಲ ಎಂಬುವವರು ಈ ಸೆಟ್‌ಗಳನ್ನು ಹಾಕಿದ್ದು, ಸುಮಾರು ನಾಲ್ಕೈದು ತಿಂಗಳ ಕಾಲ ಸೆಟ್‍ ನಿರ್ಮಾಣಕ್ಕೆ ಸಮಯ ತೆಗೆದುಕೊಂಡಿದ್ದೆವು. ‘ಪಿನಾಕ’ ಎಂದರೆ ಒಬ್ಬ ರಕ್ಷಕ. ಇದೊಂದು ಕಾವಲುಗಾರ ಪರಂಪರೆಯ ಕುರಿತಾದ ಚಿತ್ರ. ಮುಂದಿನ ವರ್ಷ ಈ ಚಿತ್ರವನ್ನು ತೆರೆಗೆ ಬರಲಿದೆ. ಇದು ಒತ್ತಡದಿಂದ ಮಾಡುವ ಕೆಲಸವಲ್ಲ. ಪ್ರತಿಯೊಂದು ದೃಶ್ಯಗಳನ್ನು ಸೂಕ್ಷ್ಮವಾಗಿ ಹೆಣಿಯುತ್ತಿದ್ದೇನೆ. ನಯನ್‌ ಸಾರಿಕಾ ಹಾಗೂ ಅರ್ಚನಾ ಅಯ್ಯರ್‌ ಚಿತ್ರದ ನಾಯಕಿಯರು. ನಾನು ಗಣೇಶ್‌ ಅವರಿಗೆ ನೃತ್ಯ ನಿರ್ದೇಶಕನಾಗಿ ಕೆಲಸ ಮಾಡಿದ್ದು, ಹೀಗಾಗಿ ಸಿನಿಮಾದಲ್ಲಿ ನಿರ್ದೇಶನ ಮಾಡುವುದು ಸುಲಭವಾಗಿದೆ’ ಎಂದರು.

ತೆಲುಗು, ಕನ್ನಡ ಸೇರಿದಂತೆ ಅನೇಕ ಭಾಷೆಗಳಲ್ಲಿ ಹಲವು ಚಿತ್ರಗಳನ್ನು ನಿರ್ಮಿಸಿರುವ ಟಿ.ಜಿ.ವಿಶ್ವಪ್ರಸಾದ್ ಸಾರಥ್ಯದ ಪೀಪಲ್ ಮೀಡಿಯಾ ಫ್ಯಾಕ್ಟರಿ ಈ ಸಿನಿಮಾ ನಿರ್ಮಾಣ‌ ಮಾಡುತ್ತಿದೆ. ಚಿತ್ರದಲ್ಲಿ ರಾಜಗುರುವಿನ ಪಾತ್ರಕ್ಕೆ ನಟ ಶ್ರೀನಿವಾಸಮೂರ್ತಿ ಬಣ್ಣ ಹಚ್ಚಿದ್ದಾರೆ. ನಟರಾದ ಹೊನ್ನವಳ್ಳಿ ಕೃಷ್ಣ, ರವೀಂದ್ರನಾಥ್‍ ತಾರಾಬಳಗದಲ್ಲಿದ್ದಾರೆ. ಕರಮ್‍ ಚಾವ್ಲಾ ಛಾಯಾಚಿತ್ರಗ್ರಹಣ ಚಿತ್ರಕ್ಕಿದೆ. 

ಗಣೇಶ್‌ 
ಧನಂಜಯ್‌
ಒಬ್ಬ ನಟನನ್ನಾಗಿ ನನ್ನನ್ನು ಇಲ್ಲಿ ಬಳಸಿಕೊಳ್ಳಲಾಗಿದೆ. ನಾಲ್ಕು ತಿಂಗಳು ಈ ಸೆಟ್‌ಗಾಗಿ ಶ್ರಮ ಹಾಕಲಾಗಿದೆ. ಕಳೆದ 32 ದಿನದಿಂದ ಇಲ್ಲಿ ಚಿತ್ರೀಕರಣ ನಡೆದಿದೆ. ದಿನಕ್ಕೆ ನಾಲ್ಕು ಕ್ಯಾಮೆರಾಗಳಲ್ಲಿ ಶೂಟಿಂಗ್‌ ನಡೆಯುತ್ತಿದೆ. ನನ್ನ ಮಗನೂ ಇದರಲ್ಲಿ ನಟಿಸಿದ್ದಾನೆ. ‘ಪಿನಾಕ’ನಾಗಿ ಬಹಳ ರೋಮಾಂಚನವಾಗಿದೆ. ಇದು ನನ್ನ ಸಿನಿಪಯಣದಲ್ಲೇ ಭಿನ್ನವಾದ ಸಿನಿಮಾ ಆಗುತ್ತದೆ ಎನ್ನುವ ವಿಶ್ವಾಸವಿದೆ.  
–ಗಣೇಶ್‌ ನಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.