ADVERTISEMENT

‘ರಾಬರ್ಟ್‌’ ಬಳಿಕ ‘ಪೊಗರು’ ಖದರ್!

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2020, 19:30 IST
Last Updated 18 ಫೆಬ್ರುವರಿ 2020, 19:30 IST
ನಂದ ಕಿಶೋರ್
ನಂದ ಕಿಶೋರ್   

‘ಪೊಗರು’ ಪದಕ್ಕೆ ಶಬ್ದಕೋಶದಲ್ಲಿ ಹೊಳಪು, ಕಾಂತಿ, ಗರ್ವ, ಬಿಂಕ ಎಂಬ ಅರ್ಥವಿದೆ. ‘ಅದ್ದೂರಿ’, ‘ಬಹದ್ದೂರ್’ ಮತ್ತು ‘ಭರ್ಜರಿ’ ಚಿತ್ರಗಳ ಯಶಸ್ಸಿನ ಹೊಳಪಿನಲ್ಲಿಯೇ ನಟ ಧ್ರುವ ಸರ್ಜಾ ‘ಪೊಗರು’ ಚಿತ್ರದಲ್ಲಿ ಹೊಸ ಖದರ್‌ ತೋರಿಸಿದ್ದಾರೆ. ಇದಕ್ಕೆ ಆ್ಯಕ್ಷನ್‌ ಕಟ್‌ ಹೇಳಿರುವುದು ನಂದ ಕಿಶೋರ್.

ಇತ್ತೀಚೆಗೆ ಚೇತನ್‌ಕುಮಾರ್‌ ಮತ್ತು ಚಂದನ್‌ಶೆಟ್ಟಿ ಬರೆದಿರುವ ‘ಎಣ್ಣೆ ಸಾಂಗ್‌’ಗೆ ಧ್ರುವ ಮತ್ತು ರಶ್ಮಿಕಾ ಮಂದಣ್ಣ ಹೆಜ್ಜೆ ಹಾಕಿದ್ದಾರೆ. ಈ ಹಾಡಿಗೆ ಧ್ವನಿಯಾಗಿರುವುದು ವಿಜಯಪ್ರಕಾಶ್‌. ಚಂದನ್‌ಶೆಟ್ಟಿ ಬರೆದಿರುವ ಇನ್ನೊಂದು ಹಾಡಿನ ಚಿತ್ರೀಕರಣವನ್ನಷ್ಟೇ ಚಿತ್ರತಂಡ ಬಾಕಿ ಉಳಿಸಿಕೊಂಡಿದೆಯಂತೆ. ಇನ್ನೂ ಈ ಹಾಡಿಗೆ ಗಾಯಕರು ಅಂತಿಮಗೊಂಡಿಲ್ಲ.

ಮೂರು ವರ್ಷದಿಂದಲೂ ಧ್ರುವ ನಟನೆಯ ಯಾವುದೇ ಸಿನಿಮಾ ತೆರೆಕಂಡಿಲ್ಲ. ಹಾಗಾಗಿ, ಇದರ ಮೇಲೆ ನಿರೀಕ್ಷೆಯ ಭಾರ ದುಪ್ಪಟ್ಟಾಗಿರುವುದು ಗುಟ್ಟೇನಲ್ಲ. ದರ್ಶನ್‌ ನಟನೆಯ ‘ರಾಬರ್ಟ್‌’ ಚಿತ್ರ ಏಪ್ರಿಲ್‌ 9ರಂದು ತೆರೆಕಾಣುವ ನಿರೀಕ್ಷೆಯಿದೆ. ಹಾಗಾಗಿ, ಏಪ್ರಿಲ್‌ ಅಂತ್ಯಕ್ಕೆ ಜನರ ಮುಂದೆ ಬರಲು ‘ಪೊಗರು’ ತಂಡ ತೀರ್ಮಾನಿಸಿದೆ.

ADVERTISEMENT

‘ಧ್ರುವ, ರಶ್ಮಿಕಾ ಎಲ್ಲರೂ ಬ್ಯುಸಿಯಾಗಿದ್ದಾರೆ. ಚಿತ್ರದಲ್ಲಿ ದೊಡ್ಡ ತಾರಾಬಳಗವಿದೆ. ಚಿತ್ರದ ಬಿಡುಗಡೆಗೆ ವಿಳಂಬವಾಗುತ್ತಿರುವುದಕ್ಕೆ ನಿರ್ದಿಷ್ಟ ಕಾರಣವೇನೆಂದು ನಾನು ಹೇಳಲಾರೆ. ಆಗುವುದೆಲ್ಲಾ ಒಳ್ಳೆಯದ್ದಕ್ಕೆ ಎಂದುಕೊಂಡಿ ರುವೆ. ನನ್ನ ನಿರೀಕ್ಷೆಗಿಂತಲೂ ಸಿನಿಮಾ ಚೆನ್ನಾಗಿ ಮೂಡಿಬಂದಿದೆ’ ಎಂದು ಮಾಹಿತಿ ನೀಡುತ್ತಾರೆ ನಿರ್ದೇಶಕ ನಂದ ಕಿಶೋರ್.

‘ಬೆಂಗಳೂರು ಮತ್ತು ಮಂಗಳೂರಿನಲ್ಲಿ ಬಾಕಿ ಇರುವ ಒಂದು ಹಾಡಿನ ಶೂಟಿಂಗ್‌ ನಡೆಸಲು ತೀರ್ಮಾನಿಸಲಾಗಿದೆ. ಮಾರ್ಚ್‌ ಎರಡನೇ ಅಥವಾ ಮೂರನೇ ವಾರದಲ್ಲಿ ಆಡಿಯೊ ಬಿಡುಗಡೆ ಮಾಡಲಾಗುವುದು’ ಎಂದು ವಿವರಿಸುತ್ತಾರೆ.

‘ಪೊಗರು’ ಪಕ್ಕಾ ಕೌಟುಂಬಿಕ ಮನರಂಜನಾ ಚಿತ್ರ. ಧ್ರುವ ಅವರು ಪ್ರೇರಣಾ ಶಂಕರ್‌ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ಬಿಡುಗಡೆಯಾಗುತ್ತಿರುವಮೊದಲಸಿನಿಮಾ. ಇದರಲ್ಲಿ ಅವರದು ಎಕ್ಸ್‌ಟ್ರೀಮ್‌ ಆದ ಪಾತ್ರವಂತೆ. ರಶ್ಮಿಕಾ ಸೂಕ್ಷ್ಮ ಮನಸ್ಥಿತಿಯ ಶಿಕ್ಷಕಿಯಾಗಿ ಕಾಣಿಸಿಕೊಂಡಿದ್ದಾರೆ. ಇಬ್ಬರದು ಕ್ಯಾಟ್‌ ಅಂಡ್‌ ಮೌಸ್‌ ಗೇಮ್‌ ಮನಸ್ಥಿತಿ ಎಂದು ಚಿತ್ರತಂಡ ಹೇಳಿದೆ.

ತಾಯಿ ಮತ್ತು ಮಗನ ಬಾಂಧವ್ಯದ ಸುತ್ತ ಕಥೆ ಹೆಣೆಯಲಾಗಿದೆ. ಜೀವನದಲ್ಲಿ ಸಣ್ಣ ಭಿನ್ನಾ ಭಿಪ್ರಾಯವೊಂದು ಮನುಷ್ಯನ ಮನಸ್ಸಿನ ಮೇಲೆ ಹೇಗೆಲ್ಲಾ ಪರಿಣಾಮ ಬೀರುತ್ತದೆ; ನಾವು ಮಾಡುವ ತಪ್ಪುಗಳು ಕರ್ಮಫಲ ಆಧರಿಸಿರುತ್ತವೆ ಎನ್ನುವುದೇ ಇದರ ಹೂರಣ.

ಹಿರಿಯ ನಟ ರಾಘವೇಂದ್ರ ರಾಜ್‌ಕುಮಾರ್‌ ಅವರು ಮುಖ್ಯಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಒಂದರ್ಥದಲ್ಲಿ ಅವರದು ನಾಯಕನ ಗುರುವಿನ ಪಾತ್ರವಂತೆ. ಈ ಸಿನಿಮಾಕ್ಕೆ ಬಂಡವಾಳ ಹೂಡಿರುವುದು ಬಿ.ಕೆ. ಗಂಗಾಧರ್‌. ಚಂದನ್‌ ಶೆಟ್ಟಿ ಸಂಗೀತ ಸಂಯೋಜಿಸಿದ್ದಾರೆ. ವಿಜಯ್‌ ಮಿಲ್ಟನ್‌ ಅವರ ಛಾಯಾಗ್ರಹಣವಿದೆ. ‘ಡಾಲಿ’ ಖ್ಯಾತಿಯ ಧನಂಜಯ್ ಖಳನಟನಾಗಿ ಕಾಣಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.