ADVERTISEMENT

ಪೊಗರು: ವಾರದಲ್ಲೇ ₹45 ಕೋಟಿಗೂ ಅಧಿಕ ಕಲೆಕ್ಷನ್‌

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2021, 15:19 IST
Last Updated 25 ಫೆಬ್ರುವರಿ 2021, 15:19 IST
ಧ್ರುವ ಸರ್ಜಾ
ಧ್ರುವ ಸರ್ಜಾ   

ಬೆಂಗಳೂರು: ‘ಪೊಗರು ಚಿತ್ರದ ಬಜೆಟ್‌ ₹31 ಕೋಟಿ. ಮೊದಲ ವಾರದಲ್ಲೇ ಕರ್ನಾಟಕದಲ್ಲೇ ₹45 ಕೋಟಿಗೂ ಅಧಿಕ ಕಲೆಕ್ಷನ್‌ ಆಗಿದ್ದು, ನಿರ್ಮಾಪಕರು ಖುಷಿಯಾಗಿದ್ದಾರೆ. ಇದು ನನಗೂ ಖುಷಿ’ ಎಂದು ನಟ ಧ್ರುವ ಸರ್ಜಾ ಹೇಳಿದರು.

ಗುರುವಾರ ಚಿತ್ರದ ಯಶಸ್ಸಿನ ಸಂಭ್ರಮಾಚರಣೆ ಸುದ್ದಿಗೋಷ್ಠಿ ನಡೆಸಿದ ಅವರು, ‘ಚಿತ್ರ ನೋಡಿದ ನನ್ನ ಹೆಂಡತಿಯೇ ನೀನೆಷ್ಟು ಕ್ರೂರಿಯಾಗಿದ್ದೀಯಾ ಎಂದು ಕೇಳಿದ್ದರು. ನಂತರ ತಂಗಿಯ ಜೊತೆಗಿನ ದೃಶ್ಯ ನೋಡಿ ಆ ಅಭಿಪ್ರಾಯ ಬದಲಾಯಿತು. ಉತ್ತರ ಕರ್ನಾಟಕದಲ್ಲಿ ಚಿತ್ರವು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಹೌಸ್‌ಫುಲ್‌ ಆಗಿದೆ’ ಎಂದರು.

8 ನಿಮಿಷದ ದೃಶ್ಯಕ್ಕೆ ಕತ್ತರಿ: ‘ಸಿನಿಮಾ ಮಾಡುವುದು ಜನರಿಗಾಗಿ. ಕೆಲ ದೃಶ್ಯಗಳ ಕುರಿತು ಇದ್ದ ವಿವಾದವನ್ನು ಇಷ್ಟು ದೊಡ್ಡದು ಮಾಡುವ ಅಗತ್ಯ ಇರಲಿಲ್ಲ. ತಮ್ಮ ಅಭಿಪ್ರಾಯವನ್ನು ನೇರವಾಗಿ ತಿಳಿಸಿದ್ದರೆ, ನಾವು ತೆಗೆಯುತ್ತಿದ್ದೆವು. ಸೆನ್ಸಾರ್‌ ಆಗಿದೆ. ಹೀಗಾಗಿ ನೀವೇನೂ ಹೇಳುವಂತಿಲ್ಲ ಎಂದು ನಾವು ದೃಶ್ಯಗಳನ್ನು ವಿರೋಧಿಸಿದವರಿಗೆ ಹೇಳಿಲ್ಲ. ಭಾವನೆಗಳಿಗೆ ಧಕ್ಕೆಯಾಗಿದ್ದರೆ ಅದು ಉದ್ದೇಶಪೂರ್ವಕವಲ್ಲ. ತಪ್ಪಿನಲ್ಲಿ ನನ್ನ ಜವಾಬ್ದಾರಿಯೂ ಇದೆ. ತಪ್ಪನ್ನು ತಿದ್ದಿಕೊಂಡಿದ್ದೇವೆ. ಯಾರಿಗಾದರೂ ಬೇಜಾರಾಗಿದ್ದಲ್ಲಿ, ನಿಮ್ಮ ಮನೆ ಮಗ ತಪ್ಪು ಮಾಡಿದ್ದಾನೆ, ದಯವಿಟ್ಟು ಕ್ಷಮಿಸಿ’ ಎಂದು ಧ್ರುವ ಸರ್ಜಾ ಹೇಳಿದರು.

ADVERTISEMENT

‘ಎಲ್ಲ ಕಟ್‌ ಮಾಡಿದ್ರೆ..ಕೊನೆಯಲ್ಲಿ ನಾನು ಮುಕೇಶ್‌ ಎಂಬುವುದು ಮಾತ್ರ ಉಳಿಯುತ್ತದೆ. ನಾನು ಈ ಸಂದರ್ಭದಲ್ಲಿ ಏನೇ ಹೇಳಿದರೂ ಮತ್ತೆ ವಿವಾದವಾಗುತ್ತದೆ. ಹೀಗಾಗಿ ಅವರಿಗೆ ಇಷ್ಟ ಆಗಿಲ್ಲ ಎಂದು ಮೇಲೆ ನಾವೇನು ಸಾಧಿಸಲು ಇದೆ. ದಯವಿಟ್ಟು ಈಗ ಚಿತ್ರವನ್ನು ನೋಡಿ. ಇದರ ಹಿಂದೆ ರಾಜಕೀಯ ಪಿತೂರಿ ಇದೆಯೇ ಎಂದು ಮಾತನಾಡುವಷ್ಟು ದೊಡ್ಡವನು ನಾನಲ್ಲ’ ಎಂದರು.

‘ಬ್ರಾಹ್ಮಣ ಸಮುದಾಯದ ಮುಖಂಡರಿಗೆ ದೃಶ್ಯಗಳನ್ನು ತೆಗೆಯಲಾದ ಸಿನಿಮಾವನ್ನು ನಿರ್ದೇಶಕರು ತೋರಿಸಿದ್ದು, ಇನ್ನೆರಡು ದಿನದೊಳಗಾಗಿ ಚಿತ್ರಮಂದಿರಗಳಲ್ಲೂ ಬರಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.