ADVERTISEMENT

ತಮಿಳಿನಿಂದಲೂ ಪೊಗರಿಗೆ ಬಂತು ಡಿಮ್ಯಾಂಡ್‌ !

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2020, 6:23 IST
Last Updated 30 ನವೆಂಬರ್ 2020, 6:23 IST
ಧ್ರುವ ಸರ್ಜಾ
ಧ್ರುವ ಸರ್ಜಾ   

‘ಆ್ಯಕ್ಷನ್‌ ಪ್ರಿನ್ಸ್‌’ ಧ್ರುವ ಸರ್ಜಾ ಮತ್ತು ‘ಕನ್ನಡಿಗರ ಕ್ರಷ್‌’ ರಶ್ಮಿಕಾ ಮಂದಣ್ಣ ಮುಖ್ಯ ಭೂಮಿಕೆಯಲ್ಲಿರುವ ಬಹು ನಿರೀಕ್ಷೆಯ ‘ಪೊಗರು’ ಚಿತ್ರ ತೆರೆಕಾಣಲು ದಿನಗಣನೆಯಲ್ಲಿದೆ. ಕನ್ನಡ ಮತ್ತು ತೆಲುಗಿನಲ್ಲಿ ನಿರ್ಮಾಣವಾಗಿರುವ ಈ ಚಿತ್ರ ಇದೇ ಡಿಸೆಂಬರ್‌ನಲ್ಲಿ ಕ್ರಿಸ್‌ಮಸ್‌ಗೆ ಅಥವಾ ಬರುವ ಜನವರಿಯ ಸಂಕ್ರಾಂತಿ ಹಬ್ಬಕ್ಕೆ ತೆರೆಗೆ ಬರಬಹುದೆನ್ನುವುದು ಸಿನಿಪ್ರಿಯರ ಅಂದಾಜು. ಈ ಹಬ್ಬಗಳ ಸಂದರ್ಭದಲ್ಲೇ ಚಿತ್ ಬಿಡುಗಡೆ ಮಾಡಿ, ಕೊರೊನಾ ಕಾರಣಕ್ಕೆ ಮನೆಯಲ್ಲೇ ಕುಳಿತಿರುವ ಚಿತ್ರರಸಿಕರನ್ನು ಚಿತ್ರಮಂದಿರಕ್ಕೆ ಲಗ್ಗೆ ಇಡುವಂತೆ ಮಾಡುವ ಲೆಕ್ಕಾಚಾರದಲ್ಲಿ ಚಿತ್ರತಂಡವೂ ಇದೆ.

ಚಿತ್ರದ ಹಿಂದಿ ಡಬ್ಬಿಂಗ್‌ ಹಕ್ಕು ಈಗಾಗಲೇ ಬರೋಬರಿ ₹7.20 ಕೋಟಿಗೆ ಆರ್‌.ಕೆ.ಡಿ. ಪ್ರೊಡಕ್ಷನ್‌ ಸಂಸ್ಥೆಗೆ ಸೇಲಾಗಿದೆ. ‘ಪೊಗರು’ ಹವಾ ಬಾಲಿವುಡ್‌ನಲ್ಲೂ ಕಾಣಿಸಿಕೊಳ್ಳಲಿದೆ. ಈಗ ತಮಿಳಿನಲ್ಲೂ ಈ ಚಿತ್ರದ ಡಬ್ಬಿಂಗ್‌ ಹಕ್ಕಿಗೆ ಮೂರ್ನಾಲ್ಕು ಚಿತ್ರ ನಿರ್ಮಾಣ ಸಂಸ್ಥೆಗಳಿಂದ ಬೇಡಿಕೆ ಬರುತ್ತಿದ್ದು, ಮಾತುಕತೆ ನಡೆಯುತ್ತಿವೆ ಎನ್ನುತ್ತವೆ ಚಿತ್ರತಂಡದ ಮೂಲಗಳು.

ಆ್ಯಕ್ಷನ್‌, ಥ್ರಿಲ್ಲರ್‌, ಲವ್‌ ಹಾಗೂ ರೊಮ್ಯಾಂಟಿಕ್‌ ಅಂಶಗಳಿರುವ ಪಕ್ಕಾ ಕಮರ್ಷಿಯಲ್‌ ಚಿತ್ರವಿದು. ಈ ಚಿತ್ರದಲ್ಲಿನ ನಾಯಕನ ಬಾಲ್ಯಜೀವನದ ಪಾತ್ರಕ್ಕಾಗಿ ಧ್ರುವ ಸರ್ಜಾ 40 ಕೆ.ಜಿ ತೂಕ ಇಳಿಸಿಕೊಂಡಿದ್ದರು. ಇದರ ಬೆನ್ನಲ್ಲೇ ಮತ್ತೆ 40 ಕೆ.ಜಿ ತೂಕ ಏರಿಸಿಕೊಂಡು ಆ್ಯಕ್ಷನ್‌ ದೃಶ್ಯಗಳಲ್ಲಿ ಧ್ರುವ ಮಿಂಚು ಹರಿಸಿದ್ದಾರೆ.

ADVERTISEMENT

ಈ ಚಿತ್ರಕ್ಕೆ ನಂದ ಕಿಶೋರ್‌ ಆ್ಯಕ್ಷನ್‌ ಕಟ್‌ ಹೇಳಿದ್ದು, ನಿರ್ಮಾಪಕ ಬಿ.ಕೆ. ಗಂಗಾಧರ್‌ ಅವರು ಶ್ರೀ ಜಗದ್ಗುರು ಮೂವೀಸ್‌ ಬ್ಯಾನರ್‌ನಡಿ ಬಂಡವಾಳ ಹೂಡಿದ್ದಾರೆ.

ಈ ಚಿತ್ರಕ್ಕೆ ರ‍್ಯಾಪರ್‌ ಚಂದನ್‌ ಶೆಟ್ಟಿ ಸಾಹಿತ್ಯ ಬರೆದು ಸಂಗೀತ ನಿರ್ದೇಶನ ಮಾಡಿರುವ ‘ಖರಾಬು’ ಹಾಡು ಈಗಾಗಲೇ ಬಿಡುಗಡೆಯಾಗಿ ಯೂಟ್ಯೂಬ್‌ನಲ್ಲಿ ಸುಮಾರು 16 ಕೋಟಿ ಜನರು ವೀಕ್ಷಿಸಿ ದಾಖಲೆ ಬರೆದಿದೆ. ಇದೇ ಹಾಡು ತೆಲುಗಿನಲ್ಲೂ ಬಿಡುಗಡೆಯಾಗಿ ಸುಮಾರು 9 ಕೋಟಿ ಜನರು ವೀಕ್ಷಿಸಿದ್ದಾರೆ.

ರಾಘವೇಂದ್ರ ರಾಜ್‌ಕುಮಾರ್‌, ಧನಂಜಯ, ಮಯೂರಿ ಕ್ಯಾಥರೀನ್‌, ಸಾಧು ಕೋಕಿಲ, ಆರ್‌. ರವಿಶಂಕರ್‌, ಚಿಕ್ಕಣ್ಣ, ಕುರಿಪ್ರತಾಪ್‌, ಧರ್ಮ, ಪವಿತ್ರಾ ಲೋಕೇಶ್‌, ಮಿರ್ನಾಲಿನಿ ರವಿ, ಕಾಯ್‌ ಗ್ರೀನ್‌, ಮೋರ್ಗಾನ್‌ ಆ್ಯಸ್ಟೆ ತಾರಾಗಣದಲ್ಲಿದ್ದಾರೆ. ಛಾಯಾಗ್ರಹಣ ವಿಜಯ್‌ ಮಿಲ್ಟನ್‌, ಸಂಕಲ ಎಸ್‌. ಮಹೇಶ್‌ ಅವರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.