ADVERTISEMENT

ಸ್ತ್ರೀ ಕೇಂದ್ರಿತ ಚಿತ್ರದತ್ತ ಪೂಜಾ ಹೆಗ್ಡೆ ಒಲವು

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2020, 11:01 IST
Last Updated 16 ಮಾರ್ಚ್ 2020, 11:01 IST
   

ಪೂಜಾ ಹೆಗ್ಡೆ ಬಹುಬೇಡಿಕೆಯ ನಟಿ. ಅಲ್ಲು ಅರ್ಜುನ್‌ ಜೊತೆಗೆ ನಟಿಸಿದ ‘ಅಲಾ ವೈಕುಂಠಪುರಮುಲೋ’ ಸಿನಿಮಾ ಸೂಪರ್ ಹಿಟ್‌ ಆದ ಬಳಿಕ ಅವರ ಅದೃಷ್ಟ ಖುಲಾಯಿಸಿದೆ.

ಅಂದಹಾಗೆ ಬಾಲಿವುಡ್‌ನಲ್ಲಿ ಆಕೆ ನಟಿಸಿದ ಮೊದಲ ಚಿತ್ರ ‘ಮೊಹೆಂಜೊ ದಾರೊ’. 2016ರಲ್ಲಿ ತೆರೆಕಂಡ ಈ ಸಿನಿಮಾದಲ್ಲಿ ಹೃತಿಕ್‌ ರೋಷನ್‌ ನಾಯಕರಾಗಿದ್ದರು. ಇದನ್ನು ನಿರ್ದೇಶಿಸಿದ್ದು ಆಶುತೋಷ್‌ ಗೋವರಿಕರ್‌. ಆಕೆ ನಟಿಸಿದ್ದ ಕಳೆದ ವರ್ಷ ಬಿಡುಗಡೆಗೊಂಡ ‘ಹೌಸ್‌ಫುಲ್‌ 4’ ಚಿತ್ರ ಕೂಡ ಭರ್ಜರಿ ಹಿಟ್‌ ಆಗಿತ್ತು. ಈಗ ಸಲ್ಮಾನ್‌ ಖಾನ್‌ ನಟನೆಯ ಹಿಂದಿಯ ಹೊಸ ಚಿತ್ರ ‘ಕಭಿ ಈದ್‌ ಕಭಿ ದಿವಾಳಿ’ ಚಿತ್ರಕ್ಕೂ ಅವರೇ ನಾಯಕಿ. ಅಕ್ಟೋಬರ್‌ನಿಂದ ಇದರ ಚಿತ್ರೀಕರಣ ಆರಂಭವಾಗಲಿದೆ.

ಈ ನಡುವೆಯೇ ಹೊಸ ಹೊಸ ಸ್ಕ್ರಿಪ್ಟ್‌ ಕೇಳುವುದರಲ್ಲೂ ಆಕೆ ಬ್ಯುಸಿಯಾಗಿದ್ದಾರೆ. ಹಲವು ಸೂಪರ್‌ ಹಿಟ್‌ ಚಿತ್ರಗಳಲ್ಲಿ ನಟಿಸಿರುವ ಆಕೆ ಇಂದಿಗೂ ಮಹಿಳಾ ಕೇಂದ್ರಿತ ಸಿನಿಮಾದಲ್ಲಿ ನಟಿಸಿಲ್ಲ. ಅದಕ್ಕೆ ಈಗ ವೇದಿಕೆ ಒದಗಿಬಂದಿದೆ. ಮೊದಲ ಬಾರಿಗೆ ಈ ಮಾದರಿಯ ಚಿತ್ರದಲ್ಲಿ ನಟಿಸಲು ಅವರು ಉತ್ಸುಕತೆ ತೋರಿದ್ದಾರಂತೆ.

ADVERTISEMENT

‘ಪಡಿ ಪಡಿ ಲೆಚೆ ಮನಸು’ ಮತ್ತು ‘ಕೃಷ್ಣಗಾಡಿ ವೀರ ಪ್ರೇಮ ಘಾದಾ’ ಚಿತ್ರ ನಿರ್ದೇಶಿಸಿದ್ದ ಹನು ರಾಘವಾಪುಡಿ ಅವರು ಪೂಜಾ ಹೆಗ್ಡೆಗೆ ಮಹಿಳಾ ಕೇಂದ್ರಿತ ಸಿನಿಮಾದ ಕಥೆಯ ಎಳೆಯನ್ನು ಹೇಳಿದ್ದಾರಂತೆ. ಆಕೆಗೂ ಇದು ಇಷ್ಟವಾಗಿದೆಯಂತೆ. ಆದರೆ, ಇನ್ನೂ ಇದರಲ್ಲಿ ನಟಿಸಲು ಆಕೆ ಒಪ್ಪಿಗೆ ಸೂಚಿಸಿಲ್ಲ. ಟಾಲಿವುಡ್‌ ಸಮಂತಾ ಅಕ್ಕಿನೇನಿ, ಅನುಷ್ಕಾ ಶೆಟ್ಟಿ ಅವರು ಈಗಾಗಲೇ ಮಹಿಳಾ ಕೇಂದ್ರಿತ ಸಿನಿಮಾಗಳಲ್ಲಿ ನಟಿಸಿ ಪ್ರೇಕ್ಷಕರಿಂದ ಸೈ ಎನಿಸಿಕೊಂಡಿದ್ದಾರೆ. ಪೂಜಾ ಕೂಡ ಅದೇ ಹಾದಿ ತುಳಿಯಲು ಸಿದ್ಧರಾಗಿದ್ದಾರೆ.

ಪ್ರಸ್ತುತ ಆಕೆ ಬೊಮ್ಮರಿಲ್ಲು ಭಾಸ್ಕರ್‌ ಆ್ಯಕ್ಷನ್‌ ಕಟ್‌ ಹೇಳಿರುವ ‘ಮೋಸ್ಟ್‌ ಎಲಿಜಿಬಲ್‌ ಬ್ಯಾಚುಲರ್‌’ ಮತ್ತು ‘ಸಾಹೊ’ ಹೀರೊ ಪ್ರಭಾಸ್‌ ನಟನೆಯ 20ನೇ ಚಿತ್ರದಲ್ಲಿ ಪೂಜಾ ನಟಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.