ADVERTISEMENT

ಸಂದರ್ಶನ | ‘ಡ್ಯಾಡಿ’ಯಾಗಿ ಮಿಂಚಿದ ಪೂರ್ಣಚಂದ್ರ ಮೈಸೂರು

ಅಭಿಲಾಷ್ ಪಿ.ಎಸ್‌.
Published 23 ಜುಲೈ 2025, 0:16 IST
Last Updated 23 ಜುಲೈ 2025, 0:16 IST
ಪೂರ್ಣಚಂದ್ರ ಮೈಸೂರು 
ಪೂರ್ಣಚಂದ್ರ ಮೈಸೂರು    

‘ಆರ್ಕೆಸ್ಟ್ರಾ ಮೈಸೂರು’ ಚಿತ್ರದಲ್ಲಿ ನಾಯಕನಾಗಿ ನಟಿಸಿ ಹಲವು ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳನ್ನು ನಿಭಾಯಿಸಿದ ನಟ ಪೂರ್ಣಚಂದ್ರ ಮೈಸೂರು ಸದ್ಯ ‘ಎಕ್ಕ’ ಸಿನಿಮಾ ಬಿಡುಗಡೆಯಾದ ಬಳಿಕ ‘ಡ್ಯಾಡಿ’ಯಾಗಿದ್ದಾರೆ! ರಂಗಭೂಮಿಯಿಂದ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟ ಅವರ ಸಿನಿಬ್ಯಾಂಕ್‌ನಲ್ಲಿ ನಾಲ್ಕೈದು ಸಿನಿಮಾಗಳಿವೆ.

‘ಡಾಲಿ’ ಗ್ಯಾಂಗ್‌ನಲ್ಲಿದ್ದವರು ‘ಮಸ್ತಾನ್‌’ ಗ್ಯಾಂಗ್‌ ಸೇರಿದ್ದು ಹೇಗೆ?

‘ಮೈಸೂರು ಗ್ಯಾಂಗ್‌’ ಒಂದು ರೀತಿ ಹರಿಯುವ ಕಾವೇರಿ ರೀತಿ. ಎಲ್ಲಾ ಕಡೆ ಹೋಗುತ್ತೇವೆ. ಎಲ್ಲಿಗೆ ದಾರಿ ಮಾಡಿ ಕೊಡುತ್ತಾರೋ ಅಲ್ಲಿಗೆ ಹೋಗುತ್ತೇವೆ. ನಿರ್ದೇಶಕರಾದ ರೋಹಿತ್‌ ಪದಕಿ ಕರೆ ಮಾಡಿ ‘ಡ್ಯಾಡಿ’ ಪಾತ್ರವನ್ನು ವಿವರಿಸಿದರು. ಈ ಪಾತ್ರಕ್ಕೆ ಒಂದು ರೆಫರೆನ್ಸ್‌ ಕೊಟ್ಟರು. ರಾಮ್‌ ಗೋಪಾಲ್‌ ವರ್ಮಾ ನಿರ್ದೇಶನದ ‘ಸತ್ಯ’ ಸಿನಿಮಾದಲ್ಲಿನ ಮನೋಜ್‌ ಬಾಜ್‌ಪೇಯಿ ಪಾತ್ರದ ರೀತಿ ‘ಡ್ಯಾಡಿ’ ಪಾತ್ರವಿರಲಿದೆ ಎಂದರು. ಆ ಪಾತ್ರದಷ್ಟೇ ವೈಬ್‌ ಈ ಪಾತ್ರಕ್ಕೆ ಇರುತ್ತದೆ ಎಂದು ಹೇಳಿ ಕಥೆ ಕೇಳಲು ಕರೆದರು. ಕಥೆ ಕೇಳಿ ನಾನು ಈ ಪಾತ್ರವನ್ನು ನಿಭಾಯಿಸಲು ಇನ್ನಷ್ಟು ಉತ್ಸುಕನಾದೆ. ಪಾತ್ರಕ್ಕೆ ಬೇಕಾದ ಏರಿಳತಗಳೆಲ್ಲವೂ ‘ಡ್ಯಾಡಿ’ ಪಾತ್ರದಲ್ಲಿದ್ದವು. ಈ ಪಾತ್ರವನ್ನು ಮಾಡದೇ ಇದ್ದರೆ ಏನನ್ನೋ ಕಳೆದುಕೊಳ್ಳುತ್ತೇನೆ ಎಂಬ ಭಯವಿತ್ತು. ಹೀಗಾಗಿ ತಕ್ಷಣ ಒಪ್ಪಿಕೊಂಡೆ. 

ADVERTISEMENT

‘ಡ್ಯಾಡಿ’ಯಾದ ಖುಷಿ ಹೇಗಿದೆ... 

ರಂಗಭೂಮಿ ಹಾಗೂ ಕಿರುಚಿತ್ರಗಳಲ್ಲಿ ನಟಿಸಿದ ಅನುಭವ ಜೊತೆಗೆ ‘ಆರ್ಕೆಸ್ಟ್ರಾ ಮೈಸೂರು’, ‘ಬಡವ ರಾಸ್ಕಲ್‌’, ‘ಪಾಪ್‌ಕಾರ್ನ್‌ ಮಂಕಿ ಟೈಗರ್‌’, ‘ಫ್ಯಾಮಿಲಿ ಡ್ರಾಮಾ’, ‘ಡೇರ್‌ಡೆವಿಲ್‌ ಮುಸ್ತಾಫಾ’, ‘ಮರ್ಯಾದೆ ಪ್ರಶ್ನೆ’ ಸಿನಿಮಾಗಳಲ್ಲಿ ನಟಿಸಿದ ಅನುಭವಗಳಿಂದ ಇಂತಹ ಪಾತ್ರ ದೊರೆಯುತ್ತವೆ. ಒಂದು ಸಿನಿಮಾ ಕಮರ್ಷಿಯಲ್‌ ಆಗಿ ಹಿಟ್‌ ಆದಾಗಷ್ಟೇ ಅದರೊಳಗಿರುವ ಪಾತ್ರಗಳೂ ಹಿಟ್‌ ಆಗುತ್ತವೆ. ಜನರು ಆ ಪಾತ್ರಗಳಿಂದ ನಮ್ಮನ್ನು ಗುರುತಿಸಲು ಆರಂಭಿಸುತ್ತಾರೆ. ನಮ್ಮನ್ನಷ್ಟೇ ಅಲ್ಲ ಚಿತ್ರದಲ್ಲಿ ಕೆಲಸ ಮಾಡಿದ ತಂತ್ರಜ್ಞರನ್ನೂ ಜನ ಗುರುತಿಸುತ್ತಾರೆ. ಹೊಸ ಬದುಕು ಇಲ್ಲಿಂದ ಆರಂಭವಾಗುತ್ತದೆ. ಈ ಹಿಂದೆ ‘ಬಡವ ರಾಸ್ಕಲ್‌’ ಸಿನಿಮಾದಲ್ಲಿನ ಮಾಡಿದವರವೇ ಎಂದು ಗುರುತಿಸುತ್ತಿದ್ದರು. ಇದೀಗ ಪ್ರಚಾರದ ಸಲುವಾಗಿ ಚಿತ್ರಮಂದಿರಗಳಿಗೆ ಭೇಟಿ ನೀಡುವ ಸಂದರ್ಭದಲ್ಲಿ ‘ಡ್ಯಾಡಿ’ ಎಂದು ಕೂಗುತ್ತಿದ್ದಾರೆ. ಇದು ಖುಷಿ ತರುತ್ತದೆ.     

ಸಂಭಾಷಣೆ ನಿಮ್ಮ ಪಾತ್ರಕ್ಕೆ ಇನ್ನಷ್ಟು ಇಂಬು ನೀಡಿತು ಅಲ್ಲವೇ? 

ಖಂಡಿತಾ ಹೌದು. ರೋಹಿತ್‌ ಪದಕಿ ಹಾಗೂ ಮಾಸ್ತಿ ಅವರು ಸೇರಿ ಪಾತ್ರಗಳ ಸಂಭಾಷಣೆಯನ್ನು ಬರೆದಿದ್ದರು. ಇದು ಎಲ್ಲಾ ಪಾತ್ರಗಳ ಗ್ರಾಫ್‌ ಅನ್ನು ಇನ್ನಷ್ಟು ಏರಿಸಿದೆ. ಮಾಸ್ತಿ ಸದ್ಯಕ್ಕೆ ಕನ್ನಡ ಚಿತ್ರರಂಗದ ಆಸ್ತಿ. ಒಂದು ಪಾತ್ರ ಹೇಗೆ ಮಾತನಾಡುತ್ತದೆ ಎನ್ನುವುದನ್ನು ಇವರು ಅನುಭವದಿಂದಲೇ ಹೇಳುತ್ತಾರೆ. ಚಿತ್ರೀಕರಣದ ಸಂದರ್ಭದಲ್ಲಿ ನಟನೆ ಮಾಡುವುದಷ್ಟೇ ನಮ್ಮ ಕೆಲಸವಾಗಿರುತ್ತದೆ. ಪಾತ್ರಕ್ಕೆ ಸೂಕ್ತವಾದ ಭಾವನೆಗಳು, ಡೈಲಾಗ್ಸ್‌ ತುಂಬಿದರಷ್ಟೇ ಆ ಪಾತ್ರಗಳನ್ನು ನಿಭಾಯಿಸಲು ಸಾಧ್ಯ. ಸಂಭಾಷಣೆಯಿಂದಲೇ ‘ಡ್ಯಾಡಿ’ ಪಾತ್ರ ಹಲವರಿಗೆ ಹತ್ತಿರವಾಗಿದೆ. 

ಮುಂದಿನ ಸಿನಿಮಾಗಳು..

ಒಂದು ಸಿನಿಮಾದಲ್ಲಿ ನಾಯಕನಾಗಿ ನಟಿಸುತ್ತಿದ್ದೇನೆ. ಇದು ಇನ್ನಷ್ಟೇ ಘೋಷಣೆಯಾಗಬೇಕಿದೆ. ಶಂಕರ್‌ ಗುರು ನಿರ್ದೇಶನದ, ಡಾಲಿ ಧನಂಜಯ ನಟನೆಯ ‘ಅಣ್ಣ ಫ್ರಂ ಮೆಕ್ಸಿಕೋ’ದಲ್ಲಿ ನಟಿಸುತ್ತಿದ್ದೇನೆ. ಇದು ಇದೇ ವರ್ಷಾಂತ್ಯದಲ್ಲಿ ತೆರೆಗೆ ಬರಲಿದೆ. ಇನ್ನೂ ಒಂದು ಚಿತ್ರದಲ್ಲಿ ನಟಿಸುತ್ತಿದ್ದೇನೆ.  

ನಾನು ಇರ್ಫಾನ್‌ ಖಾನ್‌ ಮನೋಜ್‌ ಬಾಜ್‌ಪೇಯಿ ಅವರನ್ನು ಅನುಸರಿಸುತ್ತೇನೆ. ನಟನಾಗಿ ಒಂದು ಪಾತ್ರ ಖುಷಿ ಕೊಡುತ್ತದೆ. ಈ ಪಾತ್ರವನ್ನು ನೋಡಿ ಪ್ರೇಕ್ಷಕರಿಗೆ ಮನರಂಜನೆ ಸಿಗುತ್ತದೆ ಎಂದರೆ ಒಪ್ಪಿಕೊಳ್ಳುತ್ತೇನೆ. ಅದು ನಾಯಕನ ಪಾತ್ರವೇ ಆಗಿರಲಿ ಅಥವಾ ಸಿನಿಮಾದೊಳಗಿನ ಯಾವುದೇ ಪಾತ್ರವಾಗಿರಲಿ. ಪರಿಪೂರ್ಣ ನಟನಾಗುವ ಪ್ರಯತ್ನದಲ್ಲಿ ನಾನಿದ್ದೇನೆ. 
ಪೂರ್ಣಚಂದ್ರ ಮೈಸೂರು, ನಟ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.