ADVERTISEMENT

ಸಕಾರಾತ್ಮಕ ನಂಬಿಕೆಯೇ ದೇವರು: ನಟಿ ಸೊನಾಲ್‌ ಮಾಂಟೆರೋ

ಪದ್ಮನಾಭ ಭಟ್ಟ‌
Published 15 ಫೆಬ್ರುವರಿ 2019, 19:45 IST
Last Updated 15 ಫೆಬ್ರುವರಿ 2019, 19:45 IST
   

ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶದ ದಿನ ಕ್ರಾಸ್‌ ಅನ್ನು ಕೈಯಲ್ಲಿ ಹಿಡಿದುಕೊಂಡು ಪ್ರಾರ್ಥಿಸುತ್ತ ಕುಳಿತಿದ್ದು ನನಗಿನ್ನೂ ನೆನಪಿದೆ. ಪರೀಕ್ಷೆಯ ಸಮಯದಲ್ಲಿ ನನ್ನ ಅಜ್ಜನಿಗೆ ಹುಶಾರಿರಲಿಲ್ಲ. ಹಾಗಾಗಿ ಆಸ್ಪತ್ರೆಯಲ್ಲಿಯೇ ಕೂತು ಆ ವಿಷಯವನ್ನು ಓದಿದ್ದೆ. ಪರೀಕ್ಷೆ ಸರಿಯಾಗಿ ಬರೆದಿದ್ದೇನೆಯೇ ಎಂಬ ಅನುಮಾನ ಇತ್ತು. ಆ ವಿಷಯದಲ್ಲಿ ನನಗೆ ನಲ್ವತ್ತು–ಐವತ್ತು ಮಾರ್ಕ್ಸ್‌ ಬರಬಹುದು ಎಂದುಕೊಂಡಿದ್ದೆ. ಆದರೆ ನನಗೇ ಅಚ್ಚರಿ ಆಗುವ ಹಾಗೆ ಎಪ್ಪತ್ತೆಂಟು ಮಾರ್ಕ್ಸ್‌ ಬಿದ್ದುಬಿಟ್ಟಿತ್ತು! ‘ನಾನು ದೇವರಿಗೆ ಪ್ರಾರ್ಥನೆ ಮಾಡಿದ್ದಕ್ಕೆ ಅಷ್ಟು ಜಾಸ್ತಿ ಮಾರ್ಕ್ಸ್‌ ಬಿದ್ದಿದ್ದು’ ಅನಿಸಿಬಿಟ್ಟಿತ್ತು.

ನಾನು ಕ್ರಿಶ್ಚಿಯನ್‌. ಆದರೆ ನಾನು ಬೆಳೆದಿದ್ದೆಲ್ಲ ಹಿಂದೂ ಮತ್ತು ಮುಸ್ಲಿಂ ಕುಟುಂಬಗಳ ಜೊತೆಯಲ್ಲಿಯೇ. ನಾನು ಚರ್ಚ್‌ಗೆ ಹೋದಷ್ಟೇ ದೇವಾಲಯಗಳಿಗೂ ಹೋಗುತ್ತೇನೆ. ಮಂಗಳೂರಿನಲ್ಲಿ ಕೊರಗಜ್ಜ ಅಂತ ಒಂದು ದೈವವಿದೆ. ಮಂಗಳೂರಿನಲ್ಲಿ ಎಲ್ಲ ಕಡೆಗಳಲ್ಲಿ ಅವರ ಗುಡಿಗಳಿವೆ. ಅವರ ಬಳಿ ಏನಾದರೂ ಪ್ರಾರ್ಥಿಸಿದರೆ ಅದು ನೆರವೇರುತ್ತದೆ ಎಂಬುದು ನಂಬಿಕೆ. ನನಗೆ ಕೊರಗಜ್ಜನ ಬಗ್ಗೆ ತಿಳಿದಿದ್ದೂ ವಿಚಿತ್ರ ಸಂದರ್ಭದಲ್ಲಿ.

ಒಮ್ಮೆ ನನ್ನ ಚಿನ್ನದ ಓಲೆ ಕಾಣೆಯಾಗಿಬಿಟ್ಟಿತ್ತು. ಅಮ್ಮನಿಗೆ ಏನು ಹೇಳುವುದು ಎಂಬ ಆತಂಕದಲ್ಲಿದ್ದೆ. ಆಗ ನನ್ನ ಸ್ನೇಹಿತೆಯೊಬ್ಬಳು ‘ರಿಂಗ್‌ ಸಿಕ್ಕರೆ ಒಂದು ಬೀಡಾ, ಒಂದು ಚಕ್ಕುಲಿ ಮತ್ತು ಒಂದು ಕ್ವಾರ್ಟರ್‌ ಇಡ್ತೀನಿ‌ ಅಂತ ಕೊರಗಜ್ಜನಿಗೆ ಹರಕೆ ಮಾಡಿಕೊ’ ಎಂದಳು. ನಾನು ‘ಹೌದಾ’ ಎಂದು ಅನುಮಾನದಲ್ಲಿಯೇ ಹರಕೆ ಹೊತ್ತೆ. ಆದರೆ ಅಚ್ಚರಿಯೆಂಬಂತೆ ನನಗೆ ರಿಂಗ್‌ ಸಿಕ್ತು!

ADVERTISEMENT

ಇವೆಲ್ಲವೂ ದೇವರ ಮಹಿಮೆಯಿಂದಲೇ ಆದವು ಎಂದು ನಾನು ಹೇಳುತ್ತಿಲ್ಲ. ಆದರೆ ಆಯಾ ಸಂಕಷ್ಟದ ಸಂದರ್ಭದಲ್ಲಿ ದೇವರು ಎನ್ನುವ ನಂಬಿಕೆ ನಮಗೆ ಯಾವೆಲ್ಲ ರೀತಿಯಲ್ಲಿ ಆಧಾರವಾಗುತ್ತದೆ, ಊರುಗೋಲಾಗುತ್ತದೆ ಎನ್ನುವುದನ್ನು ಹೇಳಲಿಕ್ಕೆ ಹೇಳಿದೆ.

ನನಗೆ ದೇವರು ಎಂದಾಕ್ಷಣ ಯೇಸುವಿಗಿಂತಲೂ ಮದರ್‌ ಮೇರಿಯ ಚಿತ್ರವೇ ಹೆಚ್ಚು ನೆನಪಿಗೆ ಬರುತ್ತದೆ. ನಾನು ಜಾಸ್ತಿ ಪ್ರಾರ್ಥನೆ ಮಾಡುವುದೂ ಮದರ್‌ ಮೇರಿ ಬಳಿಯೇ. ಯೇಸುವಿಗೆ ಪ್ರಾರ್ಥಿಸುವುದಕ್ಕಿಂತ ಅವರ ಅಮ್ಮನ ಬಳಿ ಪ್ರಾರ್ಥಿಸಿದರೆ ಅವಳು ಮಗನಿಗೆ ಹೇಳಿ ನನ್ನ ಪ್ರಾರ್ಥನೆಯನ್ನು ಈಡೇರಿಸುತ್ತಾಳೆ ಎಂಬ ನಂಬಿಕೆ. ಬೇರೆಯವರು ಇಷ್ಟು ಯೋಚನೆ ಮಾಡಲ್ಲಾ ಅನ್ಸತ್ತೆ. ಆದರೆ ನಾನು ಸ್ವಲ್ಪ ಡಿಫರೆಂಟು.

ನಮ್ಮ ವ್ಯಕ್ತಿತ್ವ ಬೆಳೆಯುತ್ತ ಬಂದ ಹಾಗೆಯೇ ನಮ್ಮೊಳಗಿನ ದೇವರು ಎನ್ನುವ ಪರಿಕಲ್ಪನೆ ಬದಲಾಗುತ್ತ ಹೋಗುತ್ತದೆ. ನಾನು ಚಿತ್ರರಂಗಕ್ಕೆ ಬಂದಿದ್ದೇ ನನ್ನಮ್ಮನ ಕನಸನ್ನು ನನಸು ಮಾಡಲು. ಆದರೆ ಈಗ ಈ ವೃತ್ತಿಯನ್ನು ಇಷ್ಟಪಡತೊಡಗಿದ್ದೇನೆ. ಇಲ್ಲಿಗೆ ಬಂದ ಮೇಲೆ ನನ್ನ ಯೋಚನಾಲಹರಿಯೂ ಬದಲಾಗಿದೆ. ಇದುವರೆಗೆ ದೇವರ ಹತ್ರ ಪ್ರಾರ್ಥನೆ ಮಾಡಿಕೊಂಡರೆ ಎಲ್ಲವೂ ಆಗುತ್ತದೆ ಎಂಬ ಭಾವನೆಯೇ ಇತ್ತು. ಆದರೆ ಪ್ರಾರ್ಥನೆ ಮಾಡಿ ಮನೆಯಲ್ಲಿಯೇ ಕೂತರೇ ಏನೂ ವರ್ಕೌಟ್‌ ಆಗುವುದಿಲ್ಲ. ನಮ್ಮ ಶ್ರಮವೂ ಅಷ್ಟೇ ಮುಖ್ಯ. ಮನೆಯಲ್ಲಿಯೇ ಕೂತು ‘ದೇವ್ರೇ ನಂಗೆ ಚಾಕೊಲೆಟ್ ಬೇಕು’ ಎಂದು ಪ್ರಾರ್ಥಿಸಿದರೆ ದೇವರು ಅಂಗಡಿಯಿಂದ ಚಾಕೊಲೆಟ್ ತಂದು ಬಾಯಿಗಿಡುವುದಿಲ್ಲ. ನಾವು ಶ್ರಮವಹಿಸಬೇಕು. ನಿರಂತರವಾಗಿ ಪ್ರಯತ್ನಿಸಬೇಕು. ಆಗ ದೇವರು ಆಶೀರ್ವಾದ ಮಾಡುತ್ತಾನೆ. ಈ ಸತ್ಯವನ್ನು ನನಗೆ ಅರಿವು ಮಾಡಿದ್ದು ಚಿತ್ರರಂಗ.

ದೇವರು ಎನ್ನುವ ನಂಬಿಕೆ ನಮ್ಮ ಬದುಕಿಗೊಂದು ಸಕಾರಾತ್ಮಕ ಶಕ್ತಿಯನ್ನಂತೂ ಕೊಡುತ್ತದೆ. ನನ್ನಮ್ಮನಿಗೆ ಬ್ರೇನ್‌ ಹ್ಯಾಮರೆಜ್ ಆಗಿ ಆಸ್ಪತ್ರೆಯಲ್ಲಿದ್ದರು. ಡಾಕ್ಟರೇ ಹುಶಾರಾಗುವುದು ಕಷ್ಟ ಎಂದಿದ್ದರು. ಆದರೆ ನಾನು ಮತ್ತು ಅಕ್ಕಂದಿರು ಸಾಧ್ಯವಿದ್ದಷ್ಟೂ ಚರ್ಚ್‌ಗಳು, ದೇವಾಲಯಗಳಲ್ಲಿ ಹೋಗಿ ಪ್ರಾರ್ಥಿಸುತ್ತಿದ್ದೆವು. ನಮಗೆ ಅಮ್ಮ ಹುಶಾರಾಗುತ್ತಾಳೆ ಎಂಬ ನಂಬಿಕೆ ಇತ್ತು. ನಂಬಿಕೆ ಹುಸಿಹೋಗಲಿಲ್ಲ. ಹುಶಾರಾದಳು. ಇಲ್ಲಿ ದೇವರೇ ಅವಳನ್ನು ಹುಶಾರು ಮಾಡಿದನೋ ಇಲ್ಲವೋ ಗೊತ್ತಿಲ್ಲ. ಆದರೆ ಆ ಸಂಕಷ್ಟದ ಸಂದರ್ಭದಲ್ಲಿ ನಮ್ಮೊಳಗೆ ನಂಬಿಕೆ ಮತ್ತು ಧೈರ್ಯವನ್ನು ತುಂಬಿದ್ದು ಮಾತ್ರ ದೇವರು ಎಂಬ ನಂಬಿಕೆಯೇ.

ಎಂಥ ಸಂಕಷ್ಟದ ಸಂದರ್ಭದಲ್ಲಿಯೂ ಬದುಕಿನ ಕುರಿತು ನಂಬಿಕೆ ಮತ್ತು ಪ್ರೀತಿಯನ್ನು ಉಳಿಸಿಕೊಳ್ಳುವ ಸಲುವಾಗಿ ನನಗೆ ದೇವರು ಎಂಬ ನಂಬಿಕೆ ಬೇಕು.

ದೇವರ ಉಪಯೋಗ!

ಚಿಕ್ಕಂದಿನಿಂದಲೂ ನನಗೆ ಒಳಾಂಗಣ ಕ್ರೀಡೆಗಳಲ್ಲಿ ಹೆಚ್ಚು ಆಸಕ್ತಿ. ಟೆಬಲ್‌ ಟೆನಿಸ್‌ ಪ್ಲೇಯರ್‌ ನಾನು. ಹೊರಾಂಗಣ ಆಟ ಅಂದರೆ ಹೇಗಾದರೂ ತಪ್ಪಿಸಿಕೊಳ್ಳುತ್ತಿದ್ದೆ. ಮಾರ್ಚ್‌ಫಾಸ್ಟ್‌ ಇದ್ದಾಗ ‘ಹೇಗಾದರೂ ಮಾಡಿ ತಪ್ಪಿಸಪ್ಪಾ’ ಎಂದು ದೇವರನ್ನು ಬೇಡಿಕೊಳ್ಳುತ್ತಿದ್ದೆ.

‘ಸ್ಪೋರ್ಟ್ಸ್‌ ಡೇ'ಗಳಲ್ಲಿ ಪಾರಿತೋಷಕ ಕೊಡುವ ಏಂಜಲ್‌ಗಳು ಇರುತ್ತಾರಲ್ವಾ? ಪ್ರತಿವರ್ಷ ನಾನೇ ಏಂಜಲ್‌ ಆಗುತ್ತಿದ್ದೆ. ನನ್ನ ಸ್ನೇಹಿತರೆಲ್ಲ ಬಿಸಿಲಲ್ಲಿ ನಿಂತು ಗುರಾಯಿಸುತ್ತಿದ್ದರೆ, ನಾನು ಆರಾಮವಾಗಿ ಚೆನ್ನಾಗಿ ಸಿಂಗರಿಸಿಕೊಂಡು ನೆರಳಲ್ಲಿ ನಿಂತಿರುತ್ತಿದ್ದೆ. ಹೀಗೆ ಏಂಜಲ್ ಆಗುವ ಅವಕಾಶ ಸಿಗಲಿ ಎಂದೂ ದೇವರನ್ನು ಬೇಡಿಕೊಳ್ಳುತ್ತಿದ್ದೆ. ದೇವರು ಹೇಗೆಲ್ಲ ಉಪಯೋಗಕ್ಕೆ ಬರುತ್ತಾನೆ ನೋಡಿ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.