ADVERTISEMENT

ಅರಣ್ಯ ಸಂರಕ್ಷಣೆಗೆ ಪಣತೊಟ್ಟ ನಟ ಪ್ರಭಾಸ್‌

ಖಾಜಿಪಲ್ಲಿ ಮೀಸಲು ಅರಣ್ಯದ ಅಭಿವೃದ್ಧಿಗೆ ₹ 2 ಕೋಟಿ ನೀಡಿದ ‘ಬಾಹುಬಲಿ’ ನಟ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2020, 7:32 IST
Last Updated 8 ಸೆಪ್ಟೆಂಬರ್ 2020, 7:32 IST
ಖಾಜಿಪಲ್ಲಿ ಮೀಸಲು ಅರಣ್ಯದ ಅಭಿವೃದ್ಧಿಗೆ ಚಾಲನೆ ನೀಡಿದ ನಟ ಪ್ರಭಾಸ್‌
ಖಾಜಿಪಲ್ಲಿ ಮೀಸಲು ಅರಣ್ಯದ ಅಭಿವೃದ್ಧಿಗೆ ಚಾಲನೆ ನೀಡಿದ ನಟ ಪ್ರಭಾಸ್‌   

ಕಳೆದ ಜೂನ್‌ನಲ್ಲಿ ಟಾಲಿವುಡ್‌ ನಟ ಪ್ರಭಾಸ್‌ ‘ಗ್ರೀನ್‌ ಇಂಡಿಯಾ ಚಾಲೆಂಜ್’‌ ಸ್ವೀಕರಿಸಿದ್ದು ಎಲ್ಲರಿಗೂ ತಿಳಿದಿದೆ. ಸಂಸದ ಜೆ. ಸಂತೋಷ್‌ಕುಮಾರ್‌ ಅವರ ಆಹ್ವಾನದ ಮೇರೆಗೆ ಅವರು ಈ ಸವಾಲು ಸ್ವೀಕರಿಸಿದ್ದರು. ತನ್ನ ಮನೆ ಅಂಗಳದಲ್ಲಿ ಗಿಡಗಳನ್ನೂ ನೆಟ್ಟಿದ್ದರು. ಬಳಿಕ ರಾಮ್‌ ಚರಣ್‌, ರಾನಾ ದಗ್ಗುಬಾಟಿ, ಶ್ರದ್ಧಾ ಕಪೂರ್‌ ಅವರನ್ನೂ ಈ ಚಾಲೆಂಜ್‌ಗೆ ನಾಮಿನೇಟ್‌ ಮಾಡಿದ್ದು ಉಂಟು.

ಈಗ ಅವರು ಈ ಸವಾಲಿನ ಭಾಗವಾಗಿ ಮತ್ತೊಂದು ದಿಟ್ಟಹೆಜ್ಜೆ ಇಟ್ಟಿದ್ದಾರೆ. ಹೈದರಾಬಾದ್‌ ಸಮೀಪದ ದುಂಡಿಗಲ್‌ ಬಳಿಯ ಖಾಜಿಪಲ್ಲಿ ಮೀಸಲು ಅರಣ್ಯವನ್ನು ದತ್ತು ಪಡೆದು ಸಂರಕ್ಷಣೆಗೆ ಪಣತೊಟ್ಟಿದ್ದಾರೆ. ಈ ಮೀಸಲು ಅರಣ್ಯ 1,650 ಎಕರೆಯಷ್ಟಿದೆ. ಇದರ ಅಭಿವೃದ್ಧಿಗಾಗಿ ಪ್ರಭಾಸ್‌ ₹ 2 ಕೋಟಿಯನ್ನು ಅರಣ್ಯ ಇಲಾಖೆಗೆ ನೀಡಿದ್ದಾರೆ. ಅರಣ್ಯ ಸಂರಕ್ಷಣೆಗಾಗಿ ಮತ್ತಷ್ಟು ಹಣ ನೀಡುವುದಾಗಿಯೂ ಅವರು ಭರವಸೆ ನೀಡಿದ್ದಾರೆ.

ಖಾಜಿಪಲ್ಲಿ ಅರಣ್ಯದಲ್ಲಿ ಹೇರಳವಾಗಿ ಔಷಧೀಯ ಸಸ್ಯಗಳಿವೆ. ಇದರ ಸಣ್ಣದೊಂದು ಭಾಗವನ್ನು ಅರ್ಬನ್‌ ಫಾರೆಸ್ಟ್‌ ಪಾರ್ಕ್‌ ಆಗಿ ಅಭಿವೃದ್ಧಿಪಡಿಸುವುದು ಅರಣ್ಯ ಇಲಾಖೆಯ ಇರಾದೆ. ಪ್ರಭಾಸ್‌ ಈ ಪರಿಸರ ಸ್ನೇಹಿ ಉದ್ಯಾನದ ಅಭಿವೃದ್ಧಿಗೆ ಅಡಿಗಲ್ಲು ಹಾಕಿದ್ದಾರೆ. ಅರಣ್ಯದ ಉಳಿದ ಭಾಗವನ್ನು ಮೀಸಲು ಪ್ರದೇಶವಾಗಿಯೇ ಅಭಿವೃದ್ಧಿಪಡಿಸಲಾಗುತ್ತದೆ. ಪ್ರಸ್ತುತ ಪ್ರಭಾಸ್‌ ನೀಡಿರುವ ಹಣದಲ್ಲಿ ಅರಣ್ಯದ ಸುತ್ತಲೂ ಫೆನ್ಸಿಂಗ್‌ ಅಳವಡಿಕೆಗೆ ಇಲಾಖೆ ಮುಂದಾಗಿದೆ.

ADVERTISEMENT

ಪ್ರಭಾಸ್‌ ಈಗ ಪ್ಯಾನ್‌ ಇಂಡಿಯಾ ಆ್ಯಕ್ಟರ್‌. ಇತ್ತೀಚೆಗೆ ತನ್ನ ಫಿಟ್‌ನೆಸ್ ಟ್ರೇನರ್‌ ಲಕ್ಷ್ಮಣ್‌ ರೆಡ್ಡಿಗೆ ಐಷಾರಾಮಿ ರೇಂಜ್ ರೋವರ್‌ ಕಾರನ್ನು ಗಿಫ್ಟ್‌ ಆಗಿ ನೀಡಿದ್ದು ಸುದ್ದಿಯಾಗಿತ್ತು. ನಟ ರಜನಿಕಾಂತ್‌ ನಂತರ ದಕ್ಷಿಣ ಭಾರತದಲ್ಲಿ ಅತಿಹೆಚ್ಚು ಸಂಭಾವನೆ ಪಡೆಯುವ ನಟ ಎಂಬ ಹೆಗ್ಗಳಿಕೆಯನ್ನೂ ಪಡೆದಿದ್ದಾರೆ. ಈಗ ಸಾಮಾಜಿಕ ಚಟುವಟಿಕೆಯಲ್ಲೂ ಅವರು ಸಕ್ರಿಯರಾಗಿರುವುದು ಅವರ ಅಭಿಮಾನಿಗಳಿಗೆ ಖುಷಿ ತಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.