ADVERTISEMENT

ನಟ ಪ್ರಭಾಸ್‌ ಮೇಲೆ ₹ 1 ಸಾವಿರ ಕೋಟಿ ಹೂಡಿಕೆ ಮಾಡಿದ ನಿರ್ಮಾಪಕರು!

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2020, 8:12 IST
Last Updated 19 ಆಗಸ್ಟ್ 2020, 8:12 IST
ಪ್ರಭಾಸ್
ಪ್ರಭಾಸ್   

‘ಬಾಹುಬಲಿ’ ಸರಣಿ ಸಿನಿಮಾಗಳಲ್ಲಿ ನಟ ಪ್ರಭಾಸ್, ಅಮರೇಂದ್ರ ಬಾಹುಬಲಿ ಮತ್ತು ಮಹೇಂದ್ರ ಬಾಹುಬಲಿ ಪಾತ್ರಗಳ ಮೂಲಕ ಸಿನಿಪ್ರಿಯರ ಮನಗೆದ್ದಿದ್ದಾರೆ. ಚೀನಾ, ಜಪಾನ್‌ನಲ್ಲೂ ‘ಬಾಹುಬಲಿ’ ಸಿನಿಮಾ ಪ್ರದರ್ಶನ ಕಂಡಿತ್ತು. ಇತ್ತೀಚೆಗೆ ರಷ್ಯನ್‌ ಭಾಷೆಯ ಸಬ್‌ಟೈಟಲ್‌ನಲ್ಲಿ ರಷ್ಯಾದ ಟಿ.ವಿ.ಯಲ್ಲೂ ಪ್ರಸಾರ ಕಂಡಿತ್ತು. ಹಾಗಾಗಿ, ಅವರಿಗೆ ವಿಶ್ವದಾದ್ಯಂತ ಅಭಿಮಾನಿಗಳ ಬಳಗ ದೊಡ್ಡದಿದೆ. ಪ್ರಭಾಸ್‌ ಮೇಲೆ ನಿರ್ಮಾಪಕರು ದೊಡ್ಡ ಮೊತ್ತ ಹೂಡಲು ತುದಿಗಾಲಿನಲ್ಲಿ ನಿಂತಿರುವುದು ಅದಕ್ಕಾಗಿಯೇ.

‘ಸಾಹೊ’ ಚಿತ್ರದ ಬಳಿಕ ಅವರ ಮೇಲೆ ಭಾರತೀಯ ನಿರ್ಮಾಪಕರು ಹೂಡಿಕೆ ಮಾಡುತ್ತಿರುವ ಮೊತ್ತ ಒಂದು ಸಾವಿರ ಕೋಟಿ ರೂಪಾಯಿ! ಪ್ರಭಾಸ್‌ ನಟನೆಯ ಚಿತ್ರಗಳಿಗೆ ಮಾರುಕಟ್ಟೆಯಲ್ಲಿ ಸೃಷ್ಟಿಯಾಗಿರುವ ಬೇಡಿಕೆಯೇ ಇದಕ್ಕೆ ಕಾರಣ ಎಂದು ಬಿಡಿಸಿ ಹೇಳಬೇಕಿಲ್ಲ. ಅವರ ನಟನೆಯ ಸಿನಿಮಾಗಳು ಚಿತ್ರಮಂದಿರದಲ್ಲಿಯೂ ಭರ್ಜರಿ ಪ್ರದರ್ಶನ ಕಾಣುತ್ತವೆ. ಗಲ್ಲಾಪೆಟ್ಟಿಗೆಯಲ್ಲಿ ಒಳ್ಳೆಯ ಕಲೆಕ್ಷನ್‌ ಮಾಡುವ ಜೊತೆಗೆ ಆಡಿಯೊ, ಡಬ್ಬಿಂಗ್‌, ಡಿಜಿಟಲ್‌, ಟಿ.ವಿ. ರೈಟ್ಸ್‌ ಮೂಲಕ ಕೋಟ್ಯಂತರ ರೂಪಾಯಿ ಆದಾಯ ಹರಿದುಬರುತ್ತದೆ. ಈ ಲೆಕ್ಕಾಚಾರದಲ್ಲಿಯೇ ಅವರ ಮೇಲೆ ಕೋಟ್ಯಂತರ ರೂಪಾಯಿ ಹೂಡಲಾಗುತ್ತಿದೆ.

ಪ್ರಸ್ತುತ ಪ್ರಭಾಸ್‌ ‘ರಾಧೆ ಶ್ಯಾಮ್‌’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದಕ್ಕೆ ಆ್ಯಕ್ಷನ್‌ ಕಟ್‌ ಹೇಳಿರುವುದು ರಾಧಾ ಕೃಷ್ಣಕುಮಾರ್‌. ಇದರಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸಿದ್ದಾರೆ. ಗೋಪಿ ಕೃಷ್ಣ ಮೂವೀಸ್‌, ಯುವಿ ಕ್ರಿಯೇಷನ್ಸ್ ಮತ್ತು ಟಿ ಸಿರೀಸ್‌ನಡಿ ಇದಕ್ಕೆ ₹ 150 ಕೋಟಿ ಬಂಡವಾಳ ಹೂಡಲಾಗಿದೆಯಂತೆ.

ADVERTISEMENT

ಈ ಚಿತ್ರದ ಬಳಿಕ ಪ್ರಭಾಸ್‌ ಅವರು ನಾಗ್‌ ಅಶ್ವಿನ್‌ ನಿರ್ದೇಶನದ ಹೊಸ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದು ಪ್ಯಾನ್‌ ಇಂಡಿಯಾ ಕಾನ್ಸೆಫ್ಟ್‌ನಡಿ ನಿರ್ಮಾಣವಾಗುತ್ತಿರುವ ಸಿನಿಮಾ. ಇದಕ್ಕೆ ವೈಜಯಂತಿ ಮೂವೀಸ್ ₹ 250 ಕೋಟಿ ಬಂಡವಾಳ ಹೂಡುತ್ತಿದೆಯಂತೆ. ಇದರಲ್ಲಿ ಪ್ರಭಾಸ್‌ಗೆ ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ನಾಯಕಿ.

ಈಗ ಟಿ ಸೀರಿಸ್‌ನ ಭೂಷಣ್‌ ಕುಮಾರ್‌ ಬಂಡವಾಳ ಹೂಡಲಿರುವ ‘ಆದಿಪುರುಷ್‌’ ಚಿತ್ರದಲ್ಲಿ ಪ್ರಭಾಸ್‌ ನಟಿಸುತ್ತಿದ್ದಾರೆ. ನಿನ್ನೆ ಈ ಸಿನಿಮಾ ಘೋಷಣೆಯಾಗಿದ್ದು, ‘ತಾನಾಜಿ’ ಚಿತ್ರದ ಖ್ಯಾತಿಯ ಓಂ ರಾವುತ್‌ ಇದಕ್ಕೆ ಆ್ಯಕ್ಷನ್‌ ಕಟ್‌ ಹೇಳಲಿದ್ದಾರೆ. ಹಿಂದಿ ಮತ್ತು ತೆಲುಗಿನಲ್ಲಿ ನಿರ್ಮಾಣವಾಗಲಿರುವ ಇದು ತಮಿಳು, ಮಲಯಾಳ, ಕನ್ನಡ ಸೇರಿದಂತೆ ಕೆಲವು ವಿದೇಶಿ ಭಾಷೆಗಳಿಗೂ ಡಬ್‌ ಆಗಿ ಬಿಡುಗಡೆಯಾಗಲಿದೆ. ಇದರ ಅಂದಾಜು ವೆಚ್ಚ ₹ 500 ಕೋಟಿಯಂತೆ.

ಇದರಲ್ಲಿ ಪ್ರಭಾಸ್ ಅವರದ್ದು ರಾಮನ ಪಾತ್ರ. ಅವರಿಗೆ ಕೀರ್ತಿ ಸುರೇಶ್‌ ಸೀತೆಯಾಗಿ ನಟಿಸಲಿದ್ದಾರೆ ಎಂಬ ಸುದ್ದಿಯೂ ಇದೆ. ಆದರೆ, ಚಿತ್ರತಂಡ ಇದರ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.